ಹಜರತ್ ಟಿಪ್ಪುಸುಲ್ತಾನರ 268ನೆಯ ಜಯಂತ್ಯೋತ್ಸವ

ಹಾವೇರಿ

         ಹಜರತ್ ಟಿಪ್ಪುಸುಲ್ತಾನರು ಈ ನಾಡಿನಲ್ಲಿ ಜನಿಸಿದ ಮಹಾನ್ ಮೇಧಾವಿ ಹಾಗೂ ಧೀಮಂತ ನಾಯಕ, ಇಂತಹ ನಾಯಕರಿಗೆ ಜಾತಿ ಪಟ್ಟ ಕಟ್ಟಬಾರದು ಎಂದು ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಹೇಳಿದರು.

         ಶನಿವಾರ ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಜರುಗಿದ ಹಜರತ್ ಟಿಪ್ಪುಸುಲ್ತಾನರ 268ನೆಯ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೀನದಲಿತರ ಹಾಗೂ ಬಡವರ ಏಳ್ಗೆಗಾಗಿ ತಮ್ಮ ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ಕೈಗೊಂಡಿದ್ದರು. ಮೈಸೂರು ಭಾಗದ ಜನರಿಗೆ ನೀರಾವರಿ ಸೌಲಭ್ಯ ಒದಗಿಸಿದ್ದರು. ಸಹಬಾಳ್ವೆ ಸಹಿಷ್ಣುತೆ ಮನೋಭಾವ ಹೊಂದಿದ್ದ ಟಿಪ್ಪುಸುಲ್ತಾನಂತಹ ನಾಯಕರು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಹೇಳಿದರು.

         ಜಿಲ್ಲಾ ವಕ್ಫ್ ಸಲಹಾ ಸಮೀತಿ ಚೇರಮನ್ನರಾದ ಸಲೀಂ.ಎಂ.ಜವಳಿ ಅವರು ಮಾತನಾಡಿ ಟಿಪ್ಪುಸುಲ್ತಾನರು ಅಪ್ಪಟ ಕನ್ನಡಿಗ ಹಾಗೂ ದೆಶಭಕ್ತ. ನಾಡಿನ ರಕ್ಷಣೆಗಾಗಿ ಬ್ರಿಟೀಷರೊಂದಿಗೆ ಹೋರಾಡಿದ ಅಪ್ರತಿಮ ಶೂರ. ರಣರಂಗದಲ್ಲಿ ಬ್ರಿಟೀಷರ ರುಂಡವನ್ನು ಚೆಂಡಾಡಿದ ಪರಾಕ್ರಮಿ. ಕೃಷಿ, ವಾಣಿಜ್ಯ ಹಾಗೂ ತಂತ್ರಜ್ಞಾನದಲ್ಲಿ ಅಂದಿನ ಕಾಲದಲ್ಲೇ ಬದಲಾವಣೆ ತಂದಿದ್ದರು ಯುದ್ಧದಲ್ಲಿ ರಾಕೆಟ್ ಬಳಕೆ ಮಾಡಿದ ಪ್ರಥಮ ವ್ಯಕ್ತಿ ಎಂದು ಇತಿಹಾಸ ಹೇಳುತ್ತದೆ. ಮುಂದಿನ ದಿನಗಳಲ್ಲಿ ಟಿಪ್ಪುಸುಲ್ತಾನರ ಹೆಸರಿನಲ್ಲಿ ವಿಶ್ವ ವಿದ್ಯಾಲಯ ಹಾಗೂ ಪ್ರಾಧಿಕಾರ ರಚನೆಯಾಗಬೇಕು, ಅವರ ಸ್ಮಾರಕಗಳ ರಕ್ಷಣೆ ಕೆಲಸವಾಗಬೇಕು ಎಂದರು.

          ಉಪನ್ಯಾಸಕರಾಗಿ ಭಾಗವಹಿಸಿದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಂಶೋಧಕ ಡಾ. ಜಗನ್ನಾಥ ಗೇನಣ್ಣನವರ ಮಾತನಾಡಿ, ಟಿಪ್ಪುಸುಲ್ತಾನರು ಮೈಸೂರು ಪ್ರದೇಶದ ಅಸ್ತಿತ್ವವನ್ನು ಉಳಿಸಿಕೊಳ್ಳಲು ತಮ್ಮದೇ ಆದ ರಣತಂತ್ರ ರೂಪಿಸಿಕೊಂಡು ಪರಕೀಯರೊಂದಿಗೆ ಹೋರಾಡಿದ ಮಹಾನ್ ವೀರ. ಅವರ ಆಡಳಿತದಲ್ಲಿ ಭೂ ಸುಧಾರಣೆ ಸೇರಿದಂತೆ ಅನೇಕ ಸುಧಾರಣೆಗಳನ್ನು ಕೈಗೊಂಡಿದ್ದರು. ಅವರ ಬಳಿ ಇದ್ದ 3 ಲಕ್ಷ ಸೈನಿಕರಿಗೆ ಭೂಮಿ ಹಂಚಿಕೆ ಮಾಡುವ ಮೂಲಕ ಕೃಷಿಗೆ ಉತ್ತೇಜನ ನೀಡಿದ್ದರು ಎಂದು ಹೇಳಿದರು

           ಪಾಳು ಬಿದ್ದ ಬೆಟ್ಟ-ಗುಡ್ಡಗಳಲ್ಲಿ ಬಿತ್ತಿ ಬೆಳೆಯಿರಿ ಇದಕ್ಕೆ ಕಂದಾಯ ಕಟ್ಟಬೇಕಾಗಿಲ್ಲ ಎಂದು ಬಡವರು ಆರ್ಥಿಕವಾಗಿ ಸಬಲರಾಗಲು ಅಡಿಪಾಯ ಹಾಕಿಕೊಟ್ಟರು. ಮೈಸೂರು ಪ್ರಾಂತ್ಯಕ್ಕೆ ರೇಷ್ಮೆಯನ್ನು ಪರಿಚಯಿಸಿದ ಮೊದಲಿಗರು. ಬೆಂಗಳೂರಿನ ಲಾಲ್‍ಬಾಗ್ ಪ್ರಸಿದ್ದಿಯಾಗಲು ಟಿಪ್ಪುಸುಲ್ತಾನರ ಕೊಡುಗೆ ಅಪಾರವಾಗಿದೆ ಎಂದರು.

          ಬ್ರಿಟಿಷರ ಒಡೆದು ಆಳುವ ನೀತಿಯ ಕುರಿತು ಜನರಿಗೆ ತಿಳಿ ಹೇಳುವ ಮೂಲಕ ಬ್ರಿಟಿಷರ ಕುತಂತ್ರದ ಅರಿವನ್ನು ಮೂಡಿಸುತ್ತಿದ್ದರು. ಟಿಪ್ಪುಸುಲ್ತಾನರು ತಮ್ಮ 18ನೇ ವಯಸ್ಸಿನಲ್ಲಿಯೇ ಯುದ್ಧಭೂಮಿಗೆ ಧುಮುಕಿದರು. ಅವರು ಜೀವಿಸಿದ 48 ವರ್ಷಗಳಲ್ಲಿ ಹಲವಾರು ಹೋರಾಟಗಳನ್ನು ಮಾಡಿದರು. ತಮ್ಮ ರಾಜ್ಯದ ವಿಸ್ತಾರಕ್ಕಾಗಿ ಸಂಚರಿಸುವ ಸಂದರ್ಭದಲ್ಲಿ 1786ರಲ್ಲಿ ಬಂಕಾಪುರದಲ್ಲಿ ಮೊಹರಂ ಆಚರಿಸಿದ ಇತಿಹಾಸವಿದೆ ಎಂದು ಹೇಳಿದರು.

         ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅವರು ಮಾತನಾಡಿ, ಟಿಪ್ಪುಸುಲ್ತಾನರು ತಮ್ಮ ಚಿಕ್ಕವಯಸ್ಸಿನಲ್ಲೇ ಪಡೆದ ಉತ್ತಮ ಶಿಕ್ಷಣ, ಕೌಶಲ್ಯ, ಧೈರ್ಯ ಹಾಗೂ ಶೌರ್ಯದಿಂದ ಪ್ರಸಿದ್ಧಿ ಪಡೆಯಲು ಸಾಧ್ಯವಾಯಿತು. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅದರಲ್ಲೂ ಮಹಿಳೆಯರಿಗೆ ಮುಖ್ಯವಾಗಿ ಶಿಕ್ಷಣ ಕೊಡಿಸಿ. ಶಿಕ್ಷಣದಿಂದ ಸಮುದಾಯದ ಸಂಪೂರ್ಣ ಅಭಿವೃದ್ಧಿ ಸಾಧ್ಯ. ಜಾಗತೀಕರಣದ ಹಂತದಲ್ಲಿ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಮತ್ತು ಕೌಶಲ್ಯ ಪಡೆಯುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

          ಪ್ರಶಸ್ತಿ ಪತ್ರ ವಿತರಣೆ: ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ-ಪತ್ರ ವಿತರಿಸಲಾಯಿತು.

           ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ತಾ.ಪಂ ಅಧ್ಯಕ್ಷ ಕರಿಯಪ್ಪ ಉಂಡಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಅಪರ ಜಿಲ್ಲಾಧಿಕಾರಿ ವಿನೋದ್ ಹೆಗ್ಗಳಗಿ, ಜಿ.ಪಂ ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ತಹಶೀಲ್ದಾರ ಶಿವಕುಮಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೀರಜಾದೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಮಖಾನೆ, ಮಾಜಿ ಸಚಿವ ರುದ್ರಪ್ಪ ಲಮಾಣಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಉತ್ತರ ಕರ್ನಾಟಕದ ರಾಜ್ಯಾಧ್ಯಕ್ಷ ಅಬ್ದುಲ್‍ರಜಾಕ್‍ಸಾಬ ಮೂದಿನಸಾಬ ಮುಲ್ಲಾ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಜಿಲ್ಲಾಧ್ಯಕ್ಷ ಖಾಜಾಮೈನುದ್ದೀನ ಎಂ. ಸುಂಕದ ಇತರರು ಉಪಸ್ಥಿತರಿದ್ದರು.

             ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ಸ್ವಾಗತಿಸಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲ ಲಮಾಣಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap