ಬರ ನಿರ್ವಹಣೆಗೆ ಪ್ರತಿ ಜಿಲ್ಲಾಡಳಿತದ ಬಳಿ ಕನಿಷ್ಠ ಐದು ಕೋಟಿ ರೂ. ಹಣ ಕಾಪು : ದೇಶಪಾಂಡೆ

0
4

ಹಾವೇರಿ

       ರಾಜ್ಯದಲ್ಲಿ 156 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ತುರ್ತು ಪರಿಹಾರ ಕಾರ್ಯಕೈಗೊಳ್ಳಲು ಪ್ರತಿ ಜಿಲ್ಲಾಡಳಿತದ ಬಳಿ ಐದು ಕೋಟಿ ರೂ. ಹಾಗೂ ಪ್ರತಿ ತಾಲೂಕಾ ಆಡಳಿತಕ್ಕೆ 50 ಲಕ್ಷ ರೂ. ಅನುದಾನವನ್ನು ನೀಡಲಾಗಿದೆ ಎಂದು ಬೆಳಗಾವಿ ಕಂದಾಯ ವಿಭಾಗದ ಬರ ಪರಿಶೀಲನೆಯ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷರು ಹಾಗೂ ಕಂದಾಯ ಸಚಿವರಾದ ಆರ್.ವಿ.ದೇಶಪಾಂಡೆ ಅವರು ತಿಳಿಸಿದರು.

        ಬರ ಅಧ್ಯಯನ ನಿಮಿತ್ಯ ಇಂದು ಹಾವೇರಿ ಜಿಲ್ಲೆಯ ತೋಟದಯಲ್ಲಾಪೂರ, ನೆಲೋಗಲ್, ರಾಮಗೊಂಡನಹಳ್ಳಿ, ಅಗಸನಹಳ್ಳಿ, ಕೆರೆಮತ್ತಿಹಳ್ಳಿಗೆ ಭೇಟಿ ಪರಿಶೀಲನೆ ನಡೆಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಬರಪರಿಹಾರ ನಿರ್ವಹಣೆಗೆ ಯಾವುದೇ ಅನುದಾನದ ಕೊರತೆ ಇಲ್ಲವೆಂದು ಹೇಳಿದರು.

         ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಠಿ ಹಾಗೂ ಮತ್ತೊದೆಡೆ ಬರಪರಿಸ್ಥಿ ಎದುರಾಗಿದೆ. ಹಾವೇರಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ರಾಜ್ಯದ 156 ತಾಲೂಕುಗಳಲ್ಲಿ ಬರಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ಬರ ಎದುರಿಸುತ್ತಿರುವ ಗ್ರಾಮಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಉದ್ಯೋಗ ಅರಸಿ ಯಾರೂ ಗುಳೆ ಹೋಗದಂತೆ ತಡೆಯುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಸೃಜನತೆಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ಎಲ್ಲ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

        ಉದ್ಯೋಗಕ್ಕಾಗಿ ಯಾರೂ ಗುಳೆ ಹೋಗಬಾರದು ಎಂಬ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನದಿಂದ 150 ಕೆಲಸದ ದಿನಗಳನ್ನು ಸೃಜಿಸಲಾಗಿದೆ. ಕುಟುಂಬದ ಬದಲು ಪ್ರತಿ ವ್ಯಕ್ತಿಗೆ 150 ದಿನ ಉದ್ಯೋಗ ನೀಡಲು ನಿರ್ಧರಿಸಲಾಗಿದೆ. 150 ದಿನಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ದೇಶಪಾಂಡೆ ಅವರು ತಿಳಿಸಿದರು.

        ಸಡಿಲಿಕೆ ಇಲ್ಲ: ಬರ ಘೋಷಣೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕೈಗೊಳ್ಳಬೇಕಾಗಿದೆ. ರಾಜ್ಯ ಸರ್ಕಾರದ ಅಧಿಕಾರಿಗಳು, ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳ ವಿವೇಚನೆಗೆ ಒಳಪಟ್ಟಿಲ್ಲ. ಪರಿಹಾರ ಹಣವನ್ನು ಹೆಚ್ಚಳ ಮಾಡುವ ಹಾಗೂ ಬರ ಪರಿಹಾರಕ್ಕೆ ಹೆಚ್ಚಿಗೆ ಅನುದಾನ ನೀಡುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಡೆಯಬೇಕಾಗಿದೆ. ಆದಾಗ್ಯೂ ಪ್ರತಿ ಹೆಕ್ಟೇರ್‍ಗೆ ಕೇಂದ್ರದ ಮಾರ್ಗಸೂಚಿಯಂತೆ ನೀಡಲಾಗುತ್ತಿರುವ 6800 ರೂ. ಪರಿಹಾರ ಹಣವನ್ನು ಹೆಚ್ಚಿಸುವ ಕುರಿತಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತಸಿದರು.

        ಮೇವು ನಿಷೇಧ: ರಾಜ್ಯದಲ್ಲಿ ತೀವ್ರ ಬರಕಾಡುತ್ತಿರುವುದರಿಂದ ರಾಜ್ಯದಿಂದ ಹೊರ ರಾಜ್ಯಗಳಿಗೆ ಮೇವು ಮಾರಾಟ ಹಾಗೂ ಸಾಗಾಣಿಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. 31 ಮೇ 2019ರವರೆಗೆ ಹೊರ ರಾಜ್ಯಗಳಿಗೆ ಮೇವು ಸಾಗಾಣಿಕೆ ನಿಷೇಧಿಸಲಾಗಿದೆ. ಆದರೆ ರಾಜ್ಯದೊಳಗೆ ಯಾವುದೇ ಜಿಲ್ಲೆಗೆ ಮೇವು ಸಾಗಾಣಿಕೆಗೆ ನಿರ್ಭಂಧ ಇರುವುದಿಲ್ಲ ಎಂದು ತಿಳಿಸಿದರು.

          ಬೆಳೆಹಾನಿ: ಹಾವೇರಿ ಜಿಲ್ಲೆಯಲ್ಲಿ ಹಿಂಗಾರು ಬೆಳೆ ಸಂಪೂರ್ಣ ಹಾಳಾಗಿದ್ದು, ಇಂದು ರೈತರು ತೊಂದರೆಯಲ್ಲಿದ್ದಾರೆ. ಎಲ್ಲರೂ ಪಕ್ಷಾತೀತವಾಗಿ ಕೆಲಸ ಮಾಡುವ ಮೂಲಕ ರೈತರ, ಕೂಲಿಕಾರರ, ಬಡವರ ಹಿತಾಸಕ್ತಿ ಕಾಯಬೇಕಾಗಿದೆ. ಹಾವೇರಿ ಜಿಲ್ಲೆಯಲ್ಲಿ 36 ವಾರಗಳಿಗೆ ಆಗುವಷ್ಟು ಮೇವಿನ ದಾಸ್ತಾನು ಇರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ನೀರಾವರಿ ಯೋಜನೆಯಡಿ ಕೆರೆ ತುಂಬಿಸುವ ಮಹತ್ವದ ಯೋಜನೆ ಕೈಗೊಳ್ಳಲಾಗುತ್ತಿದೆ. ಹಾವೇರಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ರೂ.7.5 ಕೋಟಿ ಹಣವಿದ್ದು, ಅದನ್ನು ಆಯಾ ತಾಲೂಕು ತಹಶೀಲ್ದಾರರು ರೂ.30 ಲಕ್ಷದಂತೆ ಬಿಡುಗಡೆ ಮಾಡಿ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ ಹಾಗೂ ಬರನಿರ್ವಹಣೆ ಕಾರ್ಯಕ್ಕೆ ವಿನಿಯೋಗಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

         ಮರಳು ಸಾಗಾಟ: ಯಾರೇ ಮರಳು ಸಾಗಾಟ ಮಾಡಲಿ ಆದರೆ ರೈತರು ಬೆಳೆದ ಬೆಳೆ ಮೇಲೆ ಹೋಗಬಾರದು. ನಿರ್ದಿಷ್ಟವಾದ ರಸ್ತೆ ರಚಿಸಿಕೊಂಡು ವಾಹನಗಳ ಸಂಚಾರ ಕೈಗೊಳ್ಳಬೇಕು. ಇದು ಸಾಮಾನ್ಯ ಜ್ಞಾನವಾಗಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

        ಈ ಸಂದರ್ಭದಲ್ಲಿ ಸಂಪುಟ ಉಪ ಸಮಿತಿಯ ಸದಸ್ಯರಾದ ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ, ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಜಿ.ಪಂ.ಸದಸ್ಯರಾದ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಒಳಗೊಂಡಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here