ಆಧಾರ್ ಕಾರ್ಡ್ ದುರ್ಬಳಕೆ: ಕೇಸು ದಾಖಲು

0
16

ತುಮಕೂರು

            ಆಧಾರ್ ಕಾರ್ಡ್‌ನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ತುಮಕೂರು ನಗರದ ಮಳಿಗೆಯೊಂದರ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಸಿರುವ ಪ್ರಸಂಗ ನಡೆದಿದೆ.

            ಕುಣಿಗಲ್ ತಾಲ್ಲೂಕು ಹನುಮಾಪುರ ಗ್ರಾಮದ ನಿವಾಸಿ ರಿಯಾಜ್ ಖಾನ್ ಎಂಬುವವರು ನ.6 ರಂದು ಸಂಜೆ 7 ಗಂಟೆಯಲ್ಲಿ ತುಮಕೂರು ನಗರದ ಹೊಸಬಡಾವಣೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ತುಮಕೂರು ನಗರದ ಸೋಮೇಶ್ವರ ಪುರಂ ಮುಖ್ಯರಸ್ತೆಯ ಸ್ವರ್ಣ ಟೆಲಿಶಾಪ್ ಮಾಲೀಕ ರಘುಪ್ರಸಾದ್ ಎಂಬುವವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

            ದೂರುದಾರ ರಿಯಾಜ್ ಖಾನ್ ಅವರ ಹೆಸರಿನಲ್ಲಿರುವ ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಭಾವಚಿತ್ರವನ್ನು ಸ್ವರ್ಣಟೆಲಿಶಾಪ್ ಮಾಲೀಕ ರಘುಪ್ರಸಾದ್ ಹೇಗೋ ಸಂಗ್ರಹಿಸಿ ಅದನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ದಿನಾಂಕ 13-03-2017 ರಲ್ಲಿ ನಿರ್ದಿಷ್ಟ ಸಂಖ್ಯೆಯ ಐಡಿಯಾ ಸಿಮ್ ಅನ್ನು ಆಕ್ಟಿವೇಟ್ ಮಾಡಿ ಬೇರೆ ಯಾರಿಗೋ ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ.

            ಸದರಿ ಸಿಮ್ ಬಳಕೆ ಬಗ್ಗೆ ವಿಚಾರಿಸಲು ನ.6 ರಂದು ಬೆಂಗಳೂರಿನ ಸಿ.ಓ.ಡಿ. ಪೊಲೀಸ್ ಅಧಿಕಾರಿಯೊಬ್ಬರು ಹನುಮಾಪುರಕ್ಕೆ ಬಂದು ರಿಯಾಜ್ ಖಾನ್‌ರನ್ನು  ಸಂಪರ್ಕಿಸಿದಾಗ ಈ ಪ್ರಕರಣ ನಡೆದಿರುವುದು ರಿಯಾಜ್ ಖಾನ್‌ರಿಗೆ ಗೊತ್ತಾಗಿದೆ. ಒಡನೆಯೇ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ನಗರದ ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 417, 418, 419, 420 ರ ಪ್ರಕಾರ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here