ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಸಕಲ ಸಿದ್ಧತೆ

ಬಳ್ಳಾರಿ

         ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ನ.3ರಂದು ನಡೆಯುವ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 1901 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತಗಟ್ಟೆಗಳಿಗೆ ಅವಶ್ಯಕ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದರು.

         ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
855194 ಪುರುಷರು ಮತ್ತು 857944 ಮಹಿಳೆಯರು ಸೇರಿದಂತೆ 1713354 ಮತದಾರರಿದ್ದಾರೆ. ಈಗಾಗಲೇ 1374124 ಮತದಾರರಿಗೆ ಅಂದರೇ ಶೇ.80.30ರಷ್ಟು ಮತದಾರರಿಗೆ ವೋಟರ್ಸ್ ಸ್ಲೀಪ್ ವಿತರಿಸಲಾಗಿದೆ. ಉಳಿದ ವೋಟರ್ಸ್ ಸ್ಲೀಪ್‍ಗಳನ್ನು ನ.2ರಂದು ಸಂಜೆಯೊಳಗೆ ತಲುಪಿಸಲಾಗುವುದು. ಸ್ಲೀಪ್‍ಗಳನ್ನು ಬೂತ್‍ಗಳ ಸಮೀಪವು ನಮ್ಮ ಬೂತ್‍ಲೆವಲ್ ಅಧಿಕಾರಿಗಳು ಉಪಸ್ಥಿತರಿದ್ದು,ಮತದಾನ ಮಾಡಲು ಬರುವವರಿಗೆ ಆ ಚೀಟಿಗಳನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದರು.

        ನ.3ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ಮಾಡಬಹುದಾಗಿದ್ದು, ಎಫಿಕ್ ಕಾರ್ಡ್, ರೇಶನ್ ಕಾರ್ಡ್, ಆಧಾರ್ ಕಾರ್ಡ್, ನರೇಗಾ ಕಾರ್ಡ್ , ಬ್ಯಾಂಕ್ ಪಾಸ್‍ಬುಕ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ 12 ದಾಖಲೆಗಳಲ್ಲಿ ಒಂದನ್ನು ಪ್ರಸ್ತುತಪಡಿಸಿ ಮತದಾನ ಮಾಡಬಹುದಾಗಿದೆ. ಬೇರೆಡೆ ಸ್ಥಳಾಂತರಿಸುವಂತೆ ಮನವಿ ಸಲ್ಲಿಸಿದ್ದ 11 ಮತಗಟ್ಟೆಗಳನ್ನು ಬೇರೆಡೆ ಶಿಫ್ಟ್ ಮಾಡಲಾಗಿದೆ. ಮತಯಂತ್ರಗಳು ಸಮರ್ಪಕವಾಗಿ ಲಭ್ಯವಿವೆ ಎಂದು ಅವರು ತಿಳಿಸಿದರು.

       31ಲಕ್ಷ ರೂ. ಹಣ ವಶ: ಲೋಕಸಭೆ ಉಪಚುನಾವಣೆ ಘೋಷಣೆಯಾದಾಗಿನಿಂದ ಇದುವರೆಗೆ 31,64360 ರೂ.ಗಳನ್ನು ಇದುವರೆಗೆ ವಶಪಡಿಸಿಕೊಳ್ಳಲಾಗಿದೆ. 13445.22 ಲೀಟರ್ ಮದ್ಯ ಮತ್ತು 79ಲಕ್ಷ ರೂ.ಗಳ ಅಕ್ರಮ ವಸ್ತುಗಳನ್ನು ಇದುವರೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ರಾಮ್ ಪ್ರಸಾತ್ ವಿವರಿಸಿದರು.

       ನ.3ರಂದು ನಡೆಯುವ ಚುನಾವಣಾ ಕಾರ್ಯಕ್ಕೆ 333 ಬಸ್‍ಗಳು, 98 ಮಿನಿಬಸ್‍ಗಳು ಹಾಗೂ 75 ಟ್ರಕ್‍ಗಳನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು.

       418 ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ವಿಶೇಷ ಭದ್ರತೆ: ಲೋಕಸಭಾ ಕ್ಷೇತ್ರದ 1901 ಮತಗಟ್ಟೆಗಳಲ್ಲಿ 418 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು,ಅವುಗಳಿಗೆ ಪ್ಯಾರಾಮಿಲ್ಟ್ರಿ ಪಡೆ ನಿಯೋಜನೆ ಸೇರಿದಂತೆ ವಿಶೇಷ ಭದ್ರತೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ರಾಮ್ ಪ್ರಸಾತ್ ಅವರು ವಿವರಿಸಿದರು.

       ವಿಕಲಚೇತರಿಗೆ ವಿಶೇಷ ವಾಹನದ ವ್ಯವಸ್ಥೆ: ಲೋಕಸಭಾ ಉಪಚುನಾವಣೆಯಲ್ಲಿ ಮತಚಲಾಯಿಸಲು ಜಿಲ್ಲೆಯಲ್ಲಿರುವ ವಿಕಲಚೇತನರಿಗೆ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದೆ. ಈ ಲೋಕಸಭಾ ಕ್ಷೇತ್ರದಲ್ಲಿ 16500 ವಿಕಲಚೇತನ ಮತದಾರರಿದ್ದು, ಅವರು ಮತಚಲಾಯಿಸಲು ಪ್ರತಿ ಗ್ರಾಪಂಗೆ ಒಂದು ವಾಹನದ ವ್ಯವಸ್ಥೆ ಮಾಡಲಾಗಿದೆ. ಬಳ್ಲಾರಿ ಮತ್ತು ಹೊಸಪೇಟೆ ನಗರ ಪ್ರದೇಶಗಳಲ್ಲಿ 5 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಉಳಿದ ಪಟ್ಟಣ ಪ್ರದೇಶಗಳಲ್ಲಿ 3 ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು. ಚುನಾವಣಾ ನಿಮಿತ್ತ ಎಲ್ಲ ಶಾಲಾ-ಕಾಲೇಜುಗಳಿಗೆ ಶುಕ್ರವಾರ ಮತ್ತು ಶನಿವಾರ ರಜೆ ಘೋಷಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

      ಈ ಸಂದರ್ಭದಲ್ಲಿ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಅರುಣ ರಂಗರಾಜನ್, ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಮತ್ತು ಎಸಿ ರಮೇಶ ಕೊನರೆಡ್ಡಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap