ಸುಸಂಸ್ಕೃತರನ್ನಾಗಿಸುವ ಶಿಕ್ಷಣ ಅಗತ್ಯ

ಸಾಣೇಹಳ್ಳಿ:

       ತಂದೆ-ತಾಯಿ ಹಾಗೂ ಹಿರಿಯರನ್ನು ಗೌರವಿಸದ ಶಿಕ್ಷಣ ನಮಗೆ ಬೇಡ. ಮನುಷ್ಯನನ್ನು ಸುಸಂಸ್ಕøತರನ್ನಾಗಿ ಮಾಡುವ ಶಿಕ್ಷಣಬೇಕಾಗಿದೆ ಎಂದು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

       ಇಲ್ಲಿನ ಶ್ರೀ ಶಿವಕುಮಾರ ಸ್ವಾಮಿಜಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ಗುರುಪಾದೇಶ್ವರ ಪ್ರೌಢಶಾಲೆಗಳ ವಿದ್ಯಾರ್ಥಿ ಸಂಘಗಳ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಓದಿನಲ್ಲಿ ತುಂಬ ಬುದ್ಧಿವಂತರು; ಆದರೆ ನೈತಿಕವಾಗಿ ಕುಸಿಯುತ್ತಿದ್ದಾರೆ. ವಿದ್ಯಾರ್ಥಿಗಳು ಸುಸಂಸ್ಕತರಾಗಬೇಕಾದರೆ ಶಿಕ್ಷಕರೂ ಸುಸಂಸ್ಕತರಾಗಿರಬೇಕು. ಶಿಕ್ಷಕರು ಚೆನ್ನಾಗಿ ಪಾಠ ಮಾಡಿದರೆ ಸಾಲದು; ಅವರ ವ್ಯಕ್ತಿತ್ವವೂ ಗಟ್ಟಿಯಾಗಿರಬೇಕು. ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಕೇವಲ ಶಿಕ್ಷಕರ ಮೇಲೆ ಹಾಕದೆ ಪೋಷಕರು ಕಾಲಕಾಲಕ್ಕೆ ಶಾಲೆಗೆ ಬಂದು ವಿಚಾರಿಸಿ ಮಕ್ಕಳ ಮೇಲೆ ನಿಗಾ ಇಡಬೇಕೆಂದು ಸಲಹೆ ನೀಡಿದರು.

     ಒಂದು ಮರ ಹುಟ್ಟಿನಿಂದ ಸಾಯುವವರೆಗೂ ಸ್ವಾರ್ಥಕ್ಕಾಗಿ ಏನನ್ನೂ ಮಾಡಿಕೊಳ್ಳದೆ; ಸಮಾಜಕ್ಕೆ ಏನೆಲ್ಲಾ ಕೊಡುತ್ತೆ. ಭೂಮಿಯ ಸತ್ವವನ್ನು ಹೆಚ್ಚಿಸುತ್ತದೆ. ಹಣ್ಣು-ಹಂಪಲುಗಳನ್ನು ಕೊಡುತ್ತದೆ. ಅನೇಕ ಔಷಧಿಯ ಗುಣವನ್ನು ಹೊಂದಿರುತ್ತದೆ, ಶುದ್ಧ ಗಾಳಿಯನ್ನು ಕೊಡುತ್ತದೆ. ಇಂಥ ನಿಸ್ವಾರ್ಥತೆ ಮನುಷ್ಯರಲ್ಲೂ ಬರಬೇಕು ಎಂದರು.

       ಮರಕ್ಕಿಂತ ಹೆಚ್ಚು ಕಾಳಜಿವಹಿಸಿ ಬೆಳೆಸುವ ನಮ್ಮ ಮಕ್ಕಳು ಪ್ರತಿಯಾಗಿ ಸಮಾಜಕ್ಕೆ ಏನು ಕೊಡುತ್ತಿದ್ದಾರೆ ಎನ್ನುವುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಸಮಾಜಕ್ಕೆ ಏನನ್ನು ಕೊಡದಿದ್ದರೂ ಪರವಾಗಿಲ್ಲ; ತಮ್ಮ ತಂದೆ-ತಾಯಿಗಳನ್ನು ಅಗೌರವದಿಂದ ನೋಡಿಕೊಂಡರೇ ಸಾಕು ಎನ್ನುವ ದುಃಸ್ಥಿತಿಗೆ ಇಂದು ಸಮಾಜ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

        ಯಾವ ಮಕ್ಕಳೂ ದಡ್ಡರಲ್ಲ. ಭಗವಂತ ಎಲ್ಲರಿಗೂ ಒಂದೇ ರೀತಿಯ ಮೆದುಳನ್ನು ನೀಡಿದ್ದಾನೆ. ಆ ಮೆದುಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ಆಯಾಯ ವ್ಯಕ್ತಿಗಳ ಮೇಲೆಯೇ ಇರುತ್ತದೆ. ಪ್ರಳಯಾಂತಕ ಮೆದುಳಾಗದೆ ಸಮಾಜಕ್ಕೆ ಬೆಳಕನ್ನು ನೀಡುವ ಬೆಳಕಾಗಬೇಕು. ನಮ್ಮ ಶಿಕ್ಷಣ ವ್ಯವಸ್ಥೆ ಕೇವಲ ಬುದ್ಧಿವಂತರನ್ನಾಗಿ ಮಾಡುತ್ತಿದೆ. ಹಣಗಳಿಕೆಯೊಂದೇ ಶಿಕ್ಷಣದ ಗುರಿಯಾಗಿದೆ. ಹಣ ಎಂದಿಗೂ ನೆಮ್ಮದಿ ಕೊಡಲು ಸಾಧ್ಯವಿಲ್ಲ. ಮೊದಲ ಸ್ಥಾನ ಗುಣಕ್ಕೆ, ನಂತರದ ಸ್ಥಾನ ಹಣಕ್ಕೆ ನೀಡಬೇಕು ಎಂದರು.

          ಸಮಾರೋಪ ಭಾಷಣ ಮಾಡಿದ ಕಡೂರು ದೀಕ್ಷಾ ವಿದ್ಯಾಮಂದಿರದ ಕಾರ್ಯದರ್ಶಿ ಎನ್ ಪಿ ಮಂಜುನಾಥ್ ಪ್ರಸನ್ನ, ತರಳಬಾಳು ವಿದ್ಯಾಸಂಸ್ಥೆ ಜಾತಿ, ಧರ್ಮ, ಭಾಷೆಗಳ ತರತಮವಿಲ್ಲದೆ ಅನ್ನದಾಸೋಹ ಮತ್ತು ಅಕ್ಷರ ದಾಸೋಹ ನಿರಂತರವಾಗಿ ನಡೆಸಿಕೊಂಡು ಬಂದಿದೆ. ಇದು ಇನ್ನಿತರೆ ಸಂಸ್ಥೆಗಳಿಗೆ ಮಾದರಿಯಾದುದು ಎಂದರು.

          ಹೊಸದುರ್ಗ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಪರಮೇಶ್ವರಪ್ಪ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಶಾಲಾ ವಾರ್ಷಿಕೋತ್ಸವ ಒಂದು ವೇದಿಕೆಯನ್ನು ರೂಪಿಸಿಕೊಡುತ್ತಿದೆ. ಕಲಿಕೆ ಕೇವಲ ಅಕ್ಷರಜ್ಞಾನವಷ್ಟೇ ಅಲ್ಲ; ಸಾಂಸ್ಕತಿಕ ಕಲಿಕೆಯೂ ಬಹಳ ಮುಖ್ಯ. ಪೋಷಕರು ಕೇವಲ ಮಕ್ಕಳಿಂದ ಹಣಗಳಿಸುವ ನಿರೀಕ್ಷೆಗಳನ್ನು ಮಾತ್ರ ಇಟ್ಟುಕೊಳ್ಳದೆ ಅವರ ಸೃಜನಾತ್ಮಕ ಶಕ್ತಿಯನ್ನು ಗುರುತಿಸಿ ಅದಕ್ಕೆ ತಕ್ಕಂತಹ ವಾತಾವರಣವನ್ನು ನಿರ್ಮಿಸುವ ಅವಶ್ಯಕತೆ ಇದೆ ಎಂದರು.

          ಹೊಸದುರ್ಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಕೆ ಸಿ ಶಶಿಧರ, ಶ್ರೀಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಿ ವಿ ಗಂಗಾಧರಪ್ಪ, ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿಯ ಉಪಾಧ್ಯಕ್ಷ ಕೆ ಎನ್ ಯೋಗೇಶಪ್ಪ ಮಾತನಾಡಿದರು.

          ಆರಂಭದಲ್ಲಿ ಶ್ರೀಶಿವಕುಮಾರ ಸಂಗೀತ ಶಾಲೆಯ ಹದಿನೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಾಪಕ ಹೆಚ್ ಎಸ್ ನಾಗರಾಜ್ ಮಾರ್ಗದರ್ಶನದಲ್ಲಿ ಸುಗಮ ಸಂಗೀತದಡಿಯಲ್ಲಿ 15ಕ್ಕೂ ಹೆಚ್ಚು ವಿವಿಧ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನಸೂರೆಗೊಂಡರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap