ಅಂಬೇಡ್ಕರ್ ಚಿಂತನೆಗಳ ಅಧ್ಯಯನದಿಂದ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ.

ಹೊಸಪೇಟೆ :

    ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಲಿತರಿಗೆ ಮಾತ್ರ ಸೀಮಿತವಾಗಿಲ್ಲ. ಪುಣ್ಯ ಪುರುಷರ ಸಾಲಿನಲ್ಲಿ ಮೊದಲಿಗರಾಗಿ ನಿಂತು, ಪ್ರತಿಯೊಬ್ಬರ ದಿನನಿತ್ಯದ ಕಾರ್ಯ ವಿಧಾನಗಳಲ್ಲಿ ನಮ್ಮನ್ನು ಆವರಸಿಕೊಂಡಿದ್ದಾರೆ. ಅವರ ಕುರಿತ ವಿಚಾರಗಳ ಚರ್ಚೆ, ಅಧ್ಯಯನ, ಚಿಂತನೆಗಳಿಂದ ಮಾತ್ರ ಸಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಹಂಪಿ ವಿವಿಯ ಕುಲಪತಿ ಡಾ.ಸ.ಚಿ.ರಮೇಶ ಹೇಳಿದರು.

     ಇಲ್ಲಿನ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಆಯೋಜಿಸಿದ್ದ ದಲಿತ ಅಧ್ಯಯನ ಪೀಠದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜಯಂತಿ ಹಾಗೂ ಡಾ.ಬಾಬು ಜಗಜೀವನ್‍ರಾಮ ಅವರ 112ನೇ ಜಯಂತಿ ನಿಮಿತ್ತವಾಗಿ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಪಂಚದಲ್ಲಿಯೇ ಬೌದ್ಧಧರ್ಮ ಮಾತ್ರ ವಾಸ್ತಾವಾಂಶವನ್ನು ತಿಳಿಸುತ್ತದೆ. ಹಾಗಾಗಿ ಅಂಬೇಡ್ಕರ್ ಅವರು ಬೌದ್ಧಧರ್ಮವನ್ನು ಸ್ವೀಕರಿಸಿದರು.

     ಒಬ್ಬ ವ್ಯಕ್ತಿಯ ಶ್ರೀಮಂತಿಕೆ ಇರುವುದು ಆತನ ಪಾಂಡಿತ್ಯದಲ್ಲಿ ಅಂತಹ ಪಾಂಡಿತ್ಯವನ್ನು ಅಂಬೇಡ್ಕರ್ ಅವರು ಹೊಂದಿದ್ದರು. ಅಂಬೇಡ್ಕರ್ ಅವರ ಚಿಂತನೆ ಬರಹಗಳನ್ನು ಪರಿಪೂರ್ಣವಾಗಿ ಅಭ್ಯಾಸ ಮಾಡಿರುವ ವ್ಯಕ್ತಿಗಳು ಸಿಗುವುದು ಬಹಳ ವಿರಳ ಎಂದು ಅಭಿಪ್ರಾಯಪಟ್ಟರು.

      ಅಂಬೇಡ್ಕರ ಮೂಲತಃ ಜ್ಞಾನದಾಹಿ. ಅವರು ತಮ್ಮ 23-24ನೇ ವಯಸ್ಸಿನಲ್ಲಿ ಬರೆದಿರುವ ಸಂಶೋಧನೆಯ ಬರವಣಿಗೆಗಳು ಅವರ ಆಳವಾದ ಪಾಂಡಿತ್ಯ ಮತ್ತು ಪ್ರತಿಭೆಗೆ ದೊಡ್ಡ ಸಾಕ್ಷಿ. ಅವರು ಯಾವುದೇ ವಿಷಯವನ್ನು ಅಧ್ಯಯನಕ್ಕೆ ಆರಿಸಿಕೊಂಡರೂ ಅದರ ಆಳ-ಅಗಲಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡುತ್ತಿದ್ದರು ಎಂದು ಕುಲಪತಿಗಳು ಹೇಳಿದರು.

      ಬಾಬಾ ಸಾಹೇಬರು ಸಮಾಜದ ಕೆಳಸ್ತರದ ಬಡತನದಲ್ಲಿ ಹುಟ್ಟಿದರು. ಅಪಮಾನ, ಹಿಂಸೆಗಳನ್ನು ಅನುಭವಿಸುತ್ತಾ ಬೆಳೆದರು. ಇದರಿಂದ ಅವರು ಅಸಹಾಕರಾಗಲಿಲ್ಲ. ಬದುಕಿಗೆ ಬೆನ್ನು ಮಾಡಲಿಲ್ಲ. ಹತಾಶರಾಗಲಿಲ್ಲ. ಇದನ್ನೇ ಅವರು ಒಂದು ಸಾವಾಲಾಗಿ ತೆಗೆದುಕೊಂಡರು. ಮೇಲು ಜಾತಿಗಳು ಬೆರಗಾಗುವಂತೆ ವಿದ್ವತ್‍ನ್ನು ಗಳಿಸಿದರು.

      ಅವರು ಆರ್ಥಿಕವಾಗಿ ಬಡತನವನ್ನು ಅನುಭವಿಸಿದರು. ಆದರೆ ವಿದ್ವತ್ತಿನಲ್ಲಿ ಮತ್ತು ಮೇಧಾವಿತನದಲ್ಲಿ ಇಡೀ ಭಾರತದ ವಿದ್ವಾಂಸರೇ ಅಚ್ಚರಿಪಡುವಂತೆ ಶ್ರೀಮಂತವಾಗಿ ಬೆಳೆದರು. ಇವತ್ತು ನಾವು ಅಂಬೇಡ್ಕರರನ್ನು ನೆನೆಸುತ್ತಿರುವುದು ಅವರ ವಿದ್ವತ್ತಿಗಾಗಿ, ಅವರ ಪಾಂಡಿತ್ಯಕ್ಕಾಗಿ, ಅವರ ಆಳವಾದ ವಿಶಾಲವಾದ ಅಧ್ಯಯನಕ್ಕಾಗಿ. ಅವರ ಸಾಮಾಜಿಕ ಬದ್ಧತೆಗಾಗಿ, ಅವರ ಹೋರಾಟಕ್ಕಾಗಿ, ಇದು ನಮಗೆಲ್ಲ ಆದರ್ಶವಾಗಬೇಕು. ಹಾಗು ಮಾದರಿಯಾಗಬೇಕು ಎಂದರು.

      ಕುಲಸಚಿವ ಡಾ.ಅಶೋಕ ಕುಮಾರ ರಂಜೇರೆ ಮಾತನಾಡಿ, ನಾನು ಮಾಡಿದ ಹೋರಾಟದ ರಥವನ್ನು ಸಾಧ್ಯವಾದರೆ ಮುಂದುವರೆಸಿ, ಇಲ್ಲವಾದರೆ ಅಲ್ಲಿಯೇ ನಿಲ್ಲಿಸಿ ಆದರೆ ಯಾವುದೇ ಕಾರಣಕ್ಕೂ ಹಿಂದಕ್ಕೆ ಕೊಂಡಯ್ಯಬಾರದು ಎಂಬ ಅಂಬೇಡ್ಕರ ಅವರ ಸಂದೇಶವನ್ನು ನೆನಪಿಸಿಕೊಟ್ಟರು.

       ದಲಿತ ಅಧ್ಯಯನ ಪೀಠದ ಸಂಚಾಲಕ ಡಾ.ವೆಂಕಟಗಿರಿ ದಳವಾಯಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಕವಿಗಳು ಮತ್ತು ಬೌದ್ಧ ಚಿಂತಕರೂ ಆದ ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಸಹ ಪ್ರಾಧ್ಯಾಪಕರಾದ ಡಾ.ಎಸ್.ಎ.ಗೋವರ್ಧನ್ ಮಾತನಾಡಿದರು . ಕಾರ್ಯಕ್ರಮ ದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಹಾಗೂ ಡಾ.ಬಾಬು ಜಗಜೀವನ್ ರಾಮ ಅವರ ಭಾವಚಿತ್ರಕ್ಕೆ ಅತಿಥಿ ಗಣ್ಯರು ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ವಿದ್ಯಾರ್ಥಿಯಾದ ಕೆಂಚಪ್ಪ ಬಡಿಗೇರ್ ಬಾಬಾ ಸಾಹೇಬರ ಸುಂದರವಾದ ವೇಗ ಚಿತ್ರವನ್ನು ಚಿತ್ರಿಸಿ ಎಲ್ಲರ ಗಮನ ಸೆಳೆದರು. ಜೊತೆಗೆ ಕುಲಪತಿಗಳ ರೇಖಾಚಿತ್ರವನ್ನು ಅಭಿಮಾನದ ಉಡುಗೊರೆಯಾಗಿ ಡಾ. ಸ.ಚಿ.ರಮೇಶ ಅವರಿಗೆ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap