ಆಂಬುಲೆನ್ಸ್ ಹಾಗೂ ಪೊಲೀಸ್ ವಾಹನಗಳ ತಪಾಸಣೆಗೆ ಸೂಚನೆ : ಮುನೀಷ್ ಮೌದ್ಗೀಲ್

0
11

ಬೆಂಗಳೂರು

       ಚುನಾವಣಾ ಸಂದರ್ಭದಲ್ಲಿ ವಿಶೇಷ ವಾಹನಗಳಲ್ಲಿ ಹಣ ಸಾಗಣೆ ಮಾಡಲಾಗುತ್ತದೆ ಎಂಬ ಅನಗತ್ಯ ಆರೋಪಗಳಿಗೆ ಅವಕಾಶ ನೀಡದಿರಲು ಹಾಗೂ ಚುನಾವಣಾ ಪ್ರಕ್ರಿಯೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಆಂಬುಲೆನ್ಸ್ ಹಾಗೂ ಪೊಲೀಸ್ ವಾಹನಗಳನ್ನೂ ಒಳಗೊಂಡಂತೆ ಎಲ್ಲಾ ಸರ್ಕಾರಿ ವಾಹನಗಳನ್ನೂ ತಪಾಸಣೆ ಗೊಳಪಡಿಸಲು ಸೂಚಿಸಲಾಗಿದೆ ಎಂದು ಬೆಂಗಳೂರು ನಗರದ ಮೂರೂ ಲೋಕಸಭಾ ಕ್ಷೇತ್ರಗಳಿಗೆ ಮಾದರಿ ನೀತಿ ಸಂಹಿತೆ ಜಾರಿಗೆ ನಿಯೋಜಿತರಾಗಿರುವ ವಿಶೇಷಾಧಿಕಾರಿಗಳೂ ಆಗಿರುವ ಭೂ ಕಂದಾಯ ಮತ್ತು ಭೂಮಾಪನಾ ಇಲಾಖೆಯ ಆಯುಕ್ತ ಮುನೀಶ್ ಮೌದ್ಗೀಲ್ ಅವರು ಇಲ್ಲಿ ಇಂದು ಪ್ರಕಟಿಸಿದರು.

         ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಚುನಾವಣಾ ನಿರ್ವಚನಾಧಿಕಾರಿ ಡಾ ಲೋಕೇಶ್ ಅವರ ಸಮ್ಮುಖದಲ್ಲಿ ನಡೆದ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪ್ರತಿನಿಧಿಗಳ ಸಭೆಯಲ್ಲಿ ಎಲ್ಲಾ ರೀತಿಯ ಅಕ್ರಮಗಳನ್ನು ತಡೆಯಲು ಮುಂದಿನ ಮೂರು ದಿನಗಳಲ್ಲಿ ದಿನದ 24 ಗಂಟೆಯೂ ನಿಗಾ ಇಡಲಾಗುವುದು.

        ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಚುನಾವಣಾ ಪಾವಿತ್ರ್ಯತೆಗೆ ಧಕ್ಕೆ ಬರುವ ಯಾವುದೇ ಕ್ರಮವನ್ನು ಸಹಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವೆಚ್ಚದ ವಿವರ ಬಹಿರಂಗಪಡಿಸಲು ಆಗ್ರಹ

      ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ, ರಾಷ್ಟ್ರೀಯ ಪಕ್ಷಗಳು ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕಾಗಿ ಮಾಡಿರುವ ವೆಚ್ಚದ ವಿವರಗಳನ್ನು ಭಾರತ ಚುನಾವಣಾ ಆಯೋಗ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೋರ್ವರು ಈ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

        ಅಭ್ಯರ್ಥಿಗಳ ಚುನಾವಣಾ ವೆಚ್ಚದ ಗರಿಷ್ಠ ಮಿತಿ 70 ಲಕ್ಷ ರೂ ಆಗಿದೆ. ಆದರೆ, ಚುನಾವಣೆಗಾಗಿ ಪಕ್ಷಗಳು ಮಾಡುವ ಚುನಾವಣಾ ವೆಚ್ಚದ ಗರಿಷ್ಠ ಮಿತಿ ಎಷ್ಟು ? ಎಂಬದರ ಬಗ್ಗೆ ಮಾಹಿತಿ ಇಲ್ಲ. ಒಂದೆಡೆ ಅಭ್ಯರ್ಥಿ ಹಾಗೂ ಮತ್ತೊಂದೆಡೆ ಪಕ್ಷ ಹೀಗೆ ಚುನಾವಣಾ ವೆಚ್ಚ ಮಾಡುವುದರಿಂದ ಚುನಾವಣಾ ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳಿಗೆ ನ್ಯಾಯ ದೊರೆಯುವುದಿಲ್ಲ ಎಂದು ಪಕ್ಷೇತರ ಅಭ್ಯರ್ಥಿಗಳು ದೂರಿದರು.

       ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಒಳಗೊಂಡಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸಚಿವರು ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಬಳ ಮತ್ತು ಭತ್ಯಗಳನ್ನು ಪಡೆಯುತ್ತಿದ್ದರೂ ಸಾರ್ವಜನಿಕರ ಕೆಲಸ ಮಾಡದೇ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಮತ್ತೋರ್ವ ಅಭ್ಯರ್ಥಿ ಆರೋಪಿಸಿದರು.

ಶಿರಸ್ತ್ರಾಣ ಇಲ್ಲದೆ ಸವಾರಿ !

      ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ರಾಷ್ಟ್ರೀಯ ಪಕ್ಷಗಳು ಆಯೋಜಿಸಿರುವ ಬೈಕ್ ರ್ಯಾಲಿಗಳಲ್ಲಿ ಶಿರಸ್ತ್ರಾಣ ( ಹೆಲ್ಮೆಟ್ ) ಇಲ್ಲದೆ ಸವಾರಿ ಮಾಡುತ್ತಿದ್ದರೂ ಸಂಬಂಧಿತ ಅಧಿಕಾರಿಗಳು ಇತ್ತ ಗಮನಿಸುತ್ತಿಲ್ಲ ಎಂದು ಮತ್ತೊಬ್ಬ ಅಭ್ಯರ್ಥಿ ಸಭೆಯ ಗಮನಕ್ಕೆ ತಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here