ನಗರದಲ್ಲಿ ಅಮಿತ್ ಶಾ `ರೋಡ್ ಶೋ’: ಸುಡು ಬಿಸಿಲಲ್ಲೂ ಬಿಜೆಪಿ ಬಲ ಪ್ರದರ್ಶನ

0
18

ತುಮಕೂರು

       ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ತುಮಕೂರು ನಗರದಲ್ಲಿ “ರೋಡ್ ಶೋ“ ನಡೆಸುವ ಮೂಲಕ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರ ಪರವಾಗಿ ಮತಯಾಚನೆ ಮಾಡಿದರು. ಈ “ರೋಡ್ ಶೋ” ಮೂಲಕ ಸುಡುಬಿಸಿಲಿನಲ್ಲೂ ಬಿಜೆಪಿ ತನ್ನ ಬಲಪ್ರದರ್ಶನ ಮಾಡಿತು. ಬಿಜೆಪಿಯ ಸಾವಿರಾರು ಕಾರ್ಯಕರ್ತರು ಬಿಜೆಪಿ ಧ್ವಜ ಹಿಡಿದು, ಕೇಸರಿ ಟೋಪಿ, ಅಂಗವಸ್ತ್ರ ಧರಿಸಿ ಮೆರವಣಿಗೆಯಲ್ಲಿ ಸಾಗಿದ್ದರಿಂದ “ರೋಡ್ ಶೋ” ನಡೆದ ರಸ್ತೆಗಳು “ಕೇಸರಿಮಯ”ವಾದವು.

        ನಗರದ ಶ್ರೀಕೃಷ್ಣರಾಜೇಂದ್ರ ಪುರ ಭವನ (ಟೌನ್‍ಹಾಲ್) ಮುಂಭಾಗದಿಂದ ಅಮಿತ್ ಶಾ ಅವರ “ರೋಡ್ ಶೋ” ಆರಂಭವಾಯಿತು. ಟೌನ್‍ಹಾಲ್ ವೃತ್ತದಿಂದ ಬಿ.ಎಚ್.ರಸ್ತೆ ಪ್ರವೇಶಿಸಿದ “ರೋಡ್ ಶೋ” ಗಾಯತ್ರಿ ಚಿತ್ರಮಂದಿರದ ಬಳಿ ತಿರುವು ಪಡೆದು, ಮಹಾತ್ಮಗಾಂಧಿ ರಸ್ತೆಯನ್ನು ಪ್ರವೇಶಿಸಿತು. ಅಲ್ಲಿಂದ ನೇರವಾಗಿ ಗುಂಚಿ ವೃತ್ತದವರೆಗೂ ತೆರಳಿ ಮುಕ್ತಾಯವಾಯಿತು. ಸುಮಾರು 500 ಮೀಟರ್ ಉದ್ದದ ಈ ಮಾರ್ಗದಲ್ಲಿ “ರೋಡ್‍ಶೋ” ಸರಿಸುಮಾರು ಒಂದು ಗಂಟೆಗಳ ಕಾಲ ನಡೆಯಿತು.

       ಮೊದಲಿಗೆ ಮಧ್ಯಾಹ್ನ 12-30 ಕ್ಕೆ “ರೋಡ್ ಶೋ” ಆರಂಭವಾಗುವುದೆಂದು ಪ್ರಕಟಿಸಲಾಗಿತ್ತಾದರೂ, ಇದು ಆರಂಭಗೊಂಡಾಗ ವೇಳೆ ಮಧ್ಯಾಹ್ನ 2-40 ಆಗಿತ್ತು. ಬಿಗಿ ಭದ್ರತೆಯೊಂದಿಗೆ ಕಾರಿನಲ್ಲಿ ಬಂದಿಳಿದ ಅಮಿತ್ ಶಾ ಅವರನ್ನು ಸ್ಥಳೀಯ ಬಿಜೆಪಿ ನಾಯಕರು ಹೂಮಾಲೆಯೊಡನೆ ಸ್ವಾಗತಿಸಿದರು. ಸುತ್ತಲಿದ್ದ ಕಾರ್ಯಕರ್ತರು ಮುಗಿಲುಮುಟ್ಟುವಂತೆ ಜಯಕಾರ ಹಾಕಿದರು.

      ರೋಡ್ ಶೋ”ಗಾಗಿ ಮೊದಲೇ ಸಿದ್ಧವಾಗಿದ್ದ ವಾಹನವನ್ನು ಅಮಿತ್ ಶಾ ಏರಿದರು. ಇವರೊಂದಿಗೆ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು, ತಿಪಟೂರು ಶಾಸಕ ಬಿ.ಎಸ್.ನಾಗೇಶ್, ತುರುವೇಕೆರೆ ಶಾಸಕ ಮಸಾಲೆ ಜಯರಾಂ, ಬೆಂಗಳೂರಿನ ಶಾಸಕ ವಿ.ಸೋಮಣ್ಣ, ಮಾಜಿ ಶಾಸಕ ಸುರೇಶ್ ಗೌಡ, ಎಸ್.ಶಿವಣ್ಣ, ಮಾಜಿ ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್ , ಮುಖಂಡ ವೈ.ಎಚ್.ಹುಚ್ಚಯ್ಯ, ಮುಖಂಡ ಶಿವಪ್ರಸಾದ್ ಸಹ “ರೋಡ್ ಶೋ” ವಾಹನದಲ್ಲಿ ಇದ್ದರು.

       ಈ ವಾಹನದ ಸುತ್ತಲೂ ಪೊಲೀಸರು ದಪ್ಪ ಹಗ್ಗ ಹಿಡಿದು ಸರ್ಪಗಾವಲಿನೊಂದಿಗೆ ಹೆಜ್ಜೆ ಹಾಕಿದರು. ಮುಂದೆ ಮಾಧ್ಯ ಮದ ವರಿಗಾಗಿ ಒಂದು ತೆರೆದ ವಾಹನ ಹಾಗೂ ಅದರ ಮುಂದೆ ಜನರೇಟರ್ ಸೆಟ್‍ನಿಂದ ಸುಸಜ್ಜಿತವಾಗಿದ್ದ ಧ್ವನಿವರ್ಧಕ ವ್ಯವಸ್ಥೆ ಇದ್ದ ಒಂದು ವಾಹನ ಇತ್ತು.

        ಮಿಕ್ಕಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಸುಡುಬಿಸಿಲನ್ನೂ ಲೆಕ್ಕಿಸದೆ ಬಿಜೆಪಿ ಧ್ವಜ ಹಿಡಿದು, ಜಯಕಾರ ಹಾಕುತ್ತ ಸಾಗಿದರು. ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿದ್ದುದು ಗಮನಸೆಳೆಯಿತು. ಎಲ್ಲರೂ ಬಿಜೆಪಿಯ ಟೋಪಿ ಧರಿಸಿದ್ದುದರಿಂದ, ಕುತ್ತಿಗೆಗೆ ಕೇಸರಿ ಅಂಗವಸ್ತ್ರ ಹಾಕಿದ್ದುದರಿಂದ, ಬಿಜೆಪಿ ಧ್ವಜ ಹಿಡಿದಿದ್ದುದರಿಂದ ಆ ರಸ್ತೆಯೆಲ್ಲ ಕೇಸರಿಮಯವಾಯಿತು. ಜೊತೆಗೆ ಕೊಂಬು, ಕಹಳೆ, ತಮಟೆ, ಜಾನಪದ ವಾದ್ಯಗಳಿಂದ ಮೆರವಣಿಗೆ ರಂಗೇರಿತು.

        ಮೆರವಣಿಗೆಯು ಟೌನ್‍ಹಾಲ್ ವೃತ್ತದ ಮೂಲಕ ಬಿ.ಎಚ್.ರಸ್ತೆ ಪ್ರವೇಶಿಸಿ ಗಾಯತ್ರಿ ಚಿತ್ರ ಮಂದಿರದ ಎದುರು ತಿರುವು ಪಡೆದು ಮಹಾತ್ಮ ಗಾಂಧಿ ರಸ್ತೆಯನ್ನು ಪ್ರವೇಶಿಸಿದಾಗ ವೇಳೆ 3 ಗಂಟೆ ದಾಟಿತ್ತು. ಅಲ್ಲಿಂದ ನೇರವಾಗಿ ಗುಂಚಿವೃತ್ತದತ್ತ ಸಾಗಿತು.
ವಾಹನಕ್ಕೆ ಪುಷ್ಪವೃಷ್ಟಿ ಟೌನ್‍ಹಾಲ್ ವೃತ್ತದ ಬಳಿ ಇರುವ ಸ್ಕೈ ವಾಕರ್ ಮೇಲೆ ಸೇರಿದ್ದ ಬಿಜೆಪಿ ಕಾರ್ಯಕರ್ತರು ಅಮಿತ್ ಶಾ ಇದ್ದ ವಾಹನ ಬಂದೊಡನೆ ಮೇಲಿನಿಂದ ಆ ವಾಹನಕ್ಕೆ ಪುಷ್ಪವೃಷ್ಟಿಗೆರೆದರು. ಇದೇ ರೀತಿ ಇವರ ವಾಹನವು ಮಹಾತ್ಮಗಾಂಧಿ ರಸ್ತೆಗೆ ತಿರುವು ಪಡೆದಾಗಲೂ ಅಕ್ಕ ಪಕ್ಕದ ಬಹುಮಹಡಿ ಕಟ್ಟಡಗಳಲ್ಲಿ ನಿಂತಿದ್ದ ಬಿಜೆಪಿ ಕಾರ್ಯಕರ್ತರು ಪುಷ್ಟವೃಷ್ಟಿಗೆರೆದರು. ಈ ಮಧ್ಯ  ವಾಹನದಲ್ಲಿದ್ದ ಅಮಿತ್ ಶಾ ಅವರೂ ತಮ್ಮ ಮುಂದೆ ಇದ್ದ ಹೂವಿನ ಎಳಸುಗಳನ್ನು ಸುತ್ತಮುತ್ತಲಿದ್ದ ಕಾರ್ಯಕರ್ತರತ್ತ ಎರಚುತ್ತ ಅವರಲ್ಲಿ ಉತ್ಸಾಹ ಮೂಡಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್

          ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ವಂಶಿಕೃಷ್ಣ ಮೇಲ್ವಿಚಾರಣೆ ನಡೆಸಿದರು. ಟೌನ್‍ಹಾಲ್ ಆವರಣಕ್ಕೆ ಬೆಳಗಿನಿಂದಲೇ ವಾಹನ ಸಂಚಾರ ನಿರ್ಬಂಧಿಸಲಾಯಿತು. ಇದೇ ರೀತಿ ಮಹಾತ್ಮಗಾಂಧಿ ರಸ್ತೆಯಲ್ಲೂ ವಾಹನ ಸಂಚಾರ ನಿರ್ಬಂಧಿಸಲಾಯಿತು. ಅಮಿತ್ ಶಾ ಅವರಿದ್ದ ವಾಹನದ ಸುತ್ತ ಪೊಲೀಸರ ಸರ್ಪಗಾವಲು ಇತ್ತು. “ರೋಡ್ ಶೋ” ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು.

ಸಿದ್ಧಗಂಗಾ ಮಠಕ್ಕೆ ಭೇಟಿ

          ಅಮಿತ್ ಶಾ ಅವರು ಹೆಲಿಕಾಪ್ಟರ್‍ನಲ್ಲಿ ತುಮಕೂರಿಗೆ ಆಗಮಿಸಿದರು. ನಗರದ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಹೆಲಿಪ್ಯಾಡ್‍ನಲ್ಲಿ ಇವರನ್ನು ತುಮಕೂರು ನಗರದ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್ ಮತ್ತು ಇತರ ಮುಖಂಡರು ಬರಮಾಡಿಕೊಂಡರು. ಬಳಿಕ ಅಮಿತ್ ಶಾ ಅವರು ಅಲ್ಲಿಂದ ನೇರವಾಗಿ ಸಿದ್ಧಗಂಗಾ ಮಠಕ್ಕೆ ತೆರಳಿ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳನ್ನು ಭೇಟಿ ಮಾಡಿದರು. ನಂತರ ಅಲ್ಲಿಂದ ಕಾರಿನಲ್ಲಿ ನೇರವಾಗಿ ಟೌನ್‍ಹಾಲ್ ವೃತ್ತಕ್ಕೆ ಆಗಮಿಸಿ “ರೋಡ್ ಶೋ” ಆರಂಭಿಸಿದರು. ಬಳಿಕ ಹೆಲಿಕಾಪ್ಟರ್ ಮೂಲಕ ಹಾಸನಕ್ಕೆ ನಿರ್ಗಮಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here