ಹುಳಿಯಾರಿನಲ್ಲಿ 100 ಮನೆಗಳ ವಸತಿ ಸಮುಚ್ಚಯ ನಿರ್ಮಣ

0
8

ಹುಳಿಯಾರು

      ಅಲೆಮಾರಿಗಳು ಮತ್ತು ಕೆರೆಯ ದಡದಲ್ಲಿ ವಾಸಿಸುತ್ತಿರುವವರು ಒಪ್ಪಿದರೆ 100 ಮನೆಗಳ ವಸತಿ ಸಮುಚ್ಚಯ ನಿರ್ಮಿಸಲಾಗುವುದು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.

       ಹುಳಿಯಾರಿನಲ್ಲಿ ಬುಧವಾರ ಏರ್ಪಡಿಸಿದ್ದ ಜನಸ್ಪಂಧನ ಸಭೆಯಲ್ಲಿ ಹುಳಿಯಾರು ಕೆರೆಯ ದಡದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಐವತ್ತಕ್ಕೂ ಹೆಚ್ಚು ಮಂದಿ ತಮ್ಮನ್ನು ಒಕ್ಕಲೆಬ್ಬಿಸದೆ ಹಾಲಿ ವಾಸಿಸುತ್ತಿರುವ ಸ್ಥಳವನ್ನೇ ಮಂಜೂರು ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಬದಲ್ಲಿ ಜಿಲ್ಲಾಧಿಕಾರಿಗಳು ನೀವು ವಾಸ ಮಾಡುತ್ತಿರುವ ಸ್ಥಳ ಕೆರೆಯ ಜಾಗವಾಗಿರುವ ಕಾರಣ ಯಾವುದೇ ಕಾರಣಕ್ಕೂ ಮಂಜೂರು ಮಾಡಲು ಸಾಧ್ಯವಿಲ್ಲ. ಹಾಗಾಗಿ 1.3 ಎಕರೆ ಸರ್ಕಾರಿ ಜಾಗವನ್ನು ಈಗಾಗಲೇ ಗುರುತಿಸಿದ್ದು ಇದರಲ್ಲಿ 30 ಮನೆ ನಿರ್ಮಿಸಬಹದು. ಆದರೆ 108 ಮಂದಿ ನಿರಾಶ್ರಿತರ ಪಟ್ಟಿಯಿದ್ದು ಅವರಿಗಾಗಿ ಸರ್ಕಾರಿ ಸ್ಥಳದ ಶೋಧಕ್ಕೆ ತಹಸೀಲ್ದಾರ್ ಅವರಿಗೆ ಸೂಚಿಸಿರುವುದಾಗಿ ತಿಳಿಸಿದರು.

       ಅಲ್ಲದೆ ಖಾಸಗಿ ಜಮೀನು ಕೊಡುವವರಿದ್ದರೆ ಎಕರೆಗೆ 15 ಲಕ್ಷ ರೂ.ನಂತೆ ಹಣ ಪಾವತಿ ಖರೀಧಿಸಿ ಮನೆಗಳನ್ನೇ ಕಟ್ಟಿ ಕೊಡುತ್ತೇವೆ. ಅಥವಾ ರಸ್ತೆ, ಚರಂಡಿ, ನೀರು ಹೀಗೆ ಅಗತ್ಯ ಮೂಲಕ ಸೌಕರ್ಯಗಳನ್ನು ಸರ್ಕಾರವೇ ಮಾಡಿ ನಿವೇಶನವನ್ನು ಸರ್ಕಾರ ಮತ್ತು ಭೂ ಮಾಲೀಕರು 60-40 ಅನುಪಾತದಲ್ಲಿ ಹಂಚಿಕೊಳ್ಳವ ಅವಕಾಶ ಸಹ ಇದೆ ಎಂದರು.

       ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಶಾಸಕರು ವಸತಿ ಸಮುಚ್ಚಯ ಮಾಡಲು ಅವಕಾಶವಿದ್ದು ಇದಕ್ಕಾಗಿ ಕೋಟಿಗಟ್ಟಲೆ ಹಣವಿದೆ ಎಂದು ಮಾಹಿತಿ ನೀಡಿದಾಗ ಅಲೆಮಾರಿಗಳು ಹಾಗೂ ಕೆರೆಯ ದಡದಲ್ಲಿ ವಾಸಿಸುತ್ತಿರುವವರು ಒಪ್ಪಿದರೆ ಈಗ ಹಾಲಿ ಗುರುತಿಸಿರುವ ಜಾಗದಲ್ಲೇ ಸುಲಭವಾಗಿ ಸಮುಚ್ಚಯ ಕಟ್ಟಬಹುದು. ಜೊತೆಗೆ ನೀರು, ಪಾರ್ಕ್, ಶಾಲೆ, ದೇವಸ್ಥಾನ ಹೀಗೆ ನಾಗರೀಕ ಸೌಲಭ್ಯಗಳನ್ನೂ ಕಲ್ಪಿಸಬಹುದು ಎಂದರು.
 

1800 ಮಂದಿಯ ಪಿಂಚಣಿ ವಜಾ

     ಕಳೆದ ಐದಾರು ವರ್ಷಗಳಿಂದ ವಿಧವಾ ವೇತನ ಬರುತ್ತಿದ್ದು ಈಗ ಐದಾರು ತಿಂಗಳಿಂದ ನಿಲ್ಲಿಸಲಾಗಿದು ಪುನಃ ಆರಂಭಿಸುವಂತೆ ಎಂದು ಫಲಾನುಭವಿಯೊಬ್ಬರು ಮನವಿ ಮಾಡಿದರು. ತಕ್ಷಣ ಟ್ರಜರಿ ಅಧಿಕಾರಿಗಳನ್ನು ಕರೆದು ಕಾರಣ ಕೇಳಿದಾಗ ಆಧಾರ್ ಲಿಂಕ್ ಮಾಡದಿದ್ದರಿಂದ ತಾಲೂಕಿನಲ್ಲಿ 1800 ಮಂದಿಯ ಪಿಂಚಣಿ ವಜಾಗೊಂಡಿದೆ ಎಂಬ ಮಾಹಿತಿ ನೀಡಿದರು. ಇದಕ್ಕೆ ಪ್ರತಿಯಾಗಿ ವಜಾಗೊಂಡಿರುವ ಎಲ್ಲರ ಬಳಿ ಹೊಸದಾಗಿ ಅರ್ಜಿ ಪಡೆದು ಅರ್ಹರಿದ್ದಲ್ಲಿ ಮರುಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಅವರಿಗೆ ಸೂಚಿಸಿದರು.

ಅಂಗವಿಕಲರಿಗೆ ಡ್ರೈವಿಂಗ್ ಲೈಸೆನ್ಸ್

      ಈ ಸಭೆಯಲ್ಲಿ ಎಲೆಕ್ಟ್ರಿಕ್ ವಾಹನ ಕೊಡುವಂತೆ ಅನೇಕ ಅಂಗವಿಕಲರು ಅರ್ಜಿ ಕೊಟ್ಟರು. ಆಗ ವಾಹನ ಚಾಲನೆ ಪರವಾನಗಿ ಇದ್ದವರಿಗೆಲ್ಲ ತಕ್ಷಣ ಮಂಜೂರು ಮಾಡುವ ಭರವಸೆ ನೀಡಿದರಾದರೂ ಒಬ್ಬರ ಬಳಿಯೂ ವಾಹನ ಚಾಲನೆ ಪರವಾನಗಿ ಇರಲಿಲ್ಲ. ಇದಕ್ಕೆ ಜಿಲ್ಲಾಧಿಕಾರಿಗಳು ಇಷ್ಟು ವರ್ಷವಾದರೂ ಏಕೆ ಪರವಾನಗಿ ಮಾಡಿಸಿಲ್ಲವೆಂದು ಪ್ರಶ್ನಿಸಿದರು. ಆದರೆ ಆರ್‍ಟಿಓ ಕೊಟ್ಟಿಲ್ಲ ಎಂದು ಅಂಗವಿಕರಲು ದೂರಿದರು. ಇದಕ್ಕೆ ಪ್ರತಿಯಾಗಿ ಕಾಲು ಮತ್ತು ಸೊಂಟದ ಅಂಗವೈಕಲ್ಯವಾಗಿ ಎರಡೂ ಕೈಗಳೂ ವಾಹನ ಓಡಿಸಲು ಶಕ್ತವಾಗಿದ್ದರೆ ನಿಬಂಧನೆಯ ಮೇಲೆ ಪರವಾನಗಿ ಕೊಡಬಹುದಾಗಿದ್ದು ಈ ಬಗ್ಗೆ ಆರ್‍ಟಿಓ ಅವರಿಗೆ ಸೂಚನೆ ಕೊಡುವುದಾಗಿ ಭರವಸೆ ನೀಡಿದರು.

ಮನೆ ಫಲಾನುಭವಿಗಳೇ ಜಿಪಿಎಸ್ ಮಾಡಬಹುದು

        ತಿಮ್ಲಾಪುರ ಗ್ರಾಪಂ ವ್ಯಾಪ್ತಿಯ ಹೊಸಹಳ್ಳಿಯ ಆಶ್ರಯ ಯೋಜನೆಯ ಫಲಾನುಭವಿಯೊಬ್ಬರು ಮನೆ ಕಟ್ಟುತ್ತಿದ್ದರೂ ಪಿಡಿಓ ಬಂದು ಜಿಪಿಎಸ್ ಮಾಡುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ವಸತಿ ನಿಗಮದಿಂದ ಪಬ್ಲಿಕ್ ಆಪ್ ಬಂದಿದ್ದು ಇದನ್ನು ಡೌನ್ ಲೋಡ್ ಮಾಡಿಕೊಂಡು ಫಲಾನುಭವಿಗಳೇ ನೇರವಾಗಿ ಮನೆಯ ಹಂತಗಳ ಜಿಪಿಎಸ್ ಮಾಡಬಹದು ಎಂದರು. ಆದರೆ ಫಲಾನುಭವಿಗಳು ನಮಗೆ ಇವೆಲ್ಲಾ ಗೊತ್ತಗಲ್ಲ ಪಿಡಿಓಗೆ ಹೇಳಿ ಸರ್ ಎಂದ ತಕ್ಷಣ ಆಂಡ್ರ್ಯಾಡ್ ಪೋನ್ ಇಟ್ಟುಕೊಂಡಿದ್ದಿರಿ ಈ ಆಪ್ ಬಗ್ಗೆ ಗೊತ್ತಿಲ್ಲ ಅಂತಿರಲ್ಲ. ಈ ನಿಮಗೆ ಸಿನಿಮಾ ಬಗ್ಗೆ ಮಾತ್ರ ಗೊತ್ತೇನೋ ಇರಲಿ ಬಿಡಿ ಎಂದು ಹೇಳಿ ಪಿಡಿಓ ಕರೆದು ಎರಡು ದಿನದಲ್ಲಿ ಇವರ ಮನೆ ಜಿಪಿಎಸ್ ಮಾಡಬೇಕು ಎಂದು ಕಟ್ಟಪ್ಪಣೆ ಮಾಡಿದರು.

ಪ್ರತಿ ಮಂಗಳವಾರ ಎಸಿ ಸಭೆ

         ಸಭೆಯಲ್ಲಿ ಬಂದ ಅರ್ಜಿಗಳಲ್ಲಿ ಬಹುಪಾಲು ಅರ್ಜಿಗಳು ತಿದ್ದುಪಡಿ, ಪವತಿಖಾತೆ ಹೀಗೆ ಜಮೀನು ತಕರಾರು ಅರ್ಜಿಗಳದ್ದೇ ಸಿಂಹಪಾಲಾಗಿತ್ತು. ಶಾಸಕರೂ ಕೂಡ ಹದಿನೈದಿಪ್ಪತ್ತು ವರ್ಷಗಳಿಂದ ಜಮೀನು ತಕರಾರು ಸಮಸ್ಯೆಗಳ ಪೆಂಡಿಂಗ್ ಇದೆ. ಬ್ಯಾಂಕ್ ಲೋನ್ ಸೇರಿದಂತೆ ಸರ್ಕಾರದ ಯಾವುದೇ ಅನುಕೂಲ ಪಡೆಯಲಾಗದೆ ಜನ ಪರದಾಡುತ್ತಿದ್ದಾರೆ. ಇದಕ್ಕಾಗಿ ವಿಶೇಷ ಸಭೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡರು. ತಕ್ಷಣ ಪ್ರತಿ ಮಂಗಳವಾಗ ತಾಲೂಕು ಕಛೇರಿಯಲ್ಲಿ ಖುದ್ದು ಎಸಿ ಉಪಸ್ಥಿತರಿದ್ದು ತಕರಾರು ಇರುವವರು ಖುದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸಬಹುದೆಂದು ಹೇಳಿದರು.

        ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್.ಕೆ, ಶಾಸಕರಾದ ಜೆ.ಸಿ.ಮಾಧುಸ್ವಾಮಿ, ತಿಪಟೂರು ಉಪವಿಭಾಗಧಿಕಾರಿ ಪೂವಿತಾ, ಜಿಲ್ಲಾ ಪಂಚಾಯಿತಿ ಪ್ರಾಜೆಕ್ಟ್ ಆಫೀಸರ್ ಕೃಷ್ಣಪ್ಪ, ಇಓ ನಾರಾಯಣಪ್ಪ, ಚಿಕ್ಕನಾಯಕನಹಳ್ಳಿ ಪ್ರಭಾರಿ ತಹಸೀಲ್ದಾರ್ ಡಾ.ಮಂಜುನಾಥ್, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್ ಎನ್ ಕುಮಾರ್, ಸದಸ್ಯೆ ಕಲ್ಯಾಣಿ ಬಾಯಿ, ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ, ಕೆಂಕೆರೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಆಶಾ, ಹುಳಿಯಾರು ಪ್ರಭಾರ ಉಪ ತಹಸೀಲ್ದಾರ್ ಮಂಜುನಾಥ್ ಸೇರಿದಂತೆ ವಿವಿದ ಇಲಾಖೆಯ ಮುಖ್ಯಸ್ಥರುಗಳು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here