ಡಿಕೆಶಿ ಭೇಟಿ ಮಾಡಿದ ಆನಂದ್ ಸಿಂಗ್..!!!

ಬೆಂಗಳೂರು

       ಬಿಜೆಪಿಯ ಆಪರೇಷನ್ ಕಮಲಕ್ಕೆ ಒಳಗಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದ ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್, ನಗರದಲ್ಲಿಂದು ಪಕ್ಷದ ಹಿರಿಯ ನಾಯಕ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

        ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಭೇಟಿಯಾದ ಆನಂದ್ ಸಿಂಗ್ ತಮಗೆ ಇತ್ತೀಚಿನ ಸಂಪುಟ ಪುನ್ರರಚನೆಯಲ್ಲಿ ಸಚಿವ ಸ್ಥಾನ ಸಿಗದಿರುವುದು ಸೇರಿದಂತೆ ಹಲವು ರಾಜಕೀಯ ವಿಷಯಗಳನ್ನು ಚರ್ಚಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಆನಂದ್ ಸಿಂಗ್ , ತಾವು ಕಾಂಗ್ರೆಸ್ ಪಕ್ಷದಿಂದಲೇ ಗೆಲುವು ಸಾಧಿಸಿದ್ದು, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಶಾಸಕ ನಾಗೇಂದ್ರ ತಮ್ಮ ಸಂಪರ್ಕದಲ್ಲಿಲ್ಲ. ಬಿಜೆಪಿಯವರು ತಮ್ಮನ್ನು ಸಂಪರ್ಕಸಿಲ್ಲ ಎಂದು ಉತ್ತರಿಸಿದರು.

        ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಆನಂದ್ ಸಿಂಗ್ ಕ್ಷತ್ರಿಯರು, ಹೋರಾಟಗಾರರು. ಹೀಗಾಗಿ ಅವರು ಪಕ್ಷ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ತಿಳಿಸಿದರು.

          ಇನ್ನು ನಿನ್ನೆ ಸಂಜೆ ಆನಂದ್ ಸಿಂಗ್ ಅವರನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದಕ್ಕೂ ಮುನ್ನ ಬೆಳಿಗ್ಗೆ ಆನಂದ್ ಸಿಂಗ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು.

         ಮೈತ್ರಿ ಸರ್ಕಾರ ಈ ಹಿಂದೆ ಬಹುಮತ ಸಾಬೀತು ಪಡಿಸುವ ಸಂದರ್ಭಲ್ಲಿಯೂ ಸಹ ಕೆಲವು ದಿನಗಳ ಕಾಲ ಶಾಸಕರಾದ ಆನಂದ್ ಸಿಂಗ್, ನಾಗೇಂದ್ರ ಅವರು ಕಾಣೆಯಾಗಿದ್ದರು. ಬಳಿಕ ಬಹುಮತ ಸಾಬೀತಿಗೆ ಆರ್ಧ ಗಂಟೆ ಇದೆ ಎನ್ನುವಾಗ ಸಚಿವ ಡಿ.ಕೆ.ಶಿವಕುಮಾರ್ ಜೊತೆ ವಿಧಾನಸೌಧಕ್ಕೆ ಆಗಮಿಸಿ ಆಶ್ಚರ್ಯ ಹುಟ್ಟುಹಾಕಿದ್ದರು.

          ಈಗ ಅಂತಹದೇ ಸಂದರ್ಭ ಎದುರಾಗಿದ್ದು, ಶಾಸಕರನ್ನು ಆಪರೇಷನ್ ಕಮಲದಿಂದ ಬಚಾವ್ ಮಾಡುವ ಜವಾಬ್ದಾರಿ ಮತ್ತೊಮ್ಮೆ ಡಿ.ಕೆ.ಶಿವಕುಮಾರ್ ಹೆಗಲಿಗೇರಿದೆ. ಸೋಮವಾರ ನಡೆದ ಕಾಂಗ್ರೆಸ್ ಸಚಿವರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಡಿಕೆಶಿ ಅವರು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗುತ್ತಿದ್ದು, ಪಕ್ಷದ ಸಂಘಟನೆಗೆ ನಡೆಸುತ್ತಿರುವ ಸಿದ್ಧತೆ ಸಮಾಧಾನ ತಂದಿಲ್ಲ.”ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡರೆ ಸಾಲದು. ಇಷ್ಟೆಲ್ಲ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದರೂ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವಾಗುತ್ತಿಲ್ಲ. ಪಕ್ಷದ ಅಧ್ಯಕ್ಷ ಪತ್ರಿಕಾಗೋಷ್ಠಿ ನಡೆಸುವುದಕ್ಕೆ ಸೀಮಿತರಾಗಬಾರದು,” ಎಂದು ಹೇಳಿದ್ದರು ಎನ್ನಲಾಗಿದೆ.

        ಒಟ್ಟಾರೆ ಆನಂದ್ ಸಿಂಗ್ ಕೆಲ ದಿನಗಳ ಬಳಿಕ ಮತ್ತೆ ಪ್ರತ್ಯಕ್ಷರಾಗಿದ್ದು, ಹಿಂದಿನಂತೆಯೇ ಡಿ.ಕೆ.ಶಿವಕುಮಾರ್ ರೂಪಿಸಿದ ತಂತ್ರ ಬಹುತೇಕ ಯಶಸ್ವಿಯಾಗಿದೆ ಎನ್ನಲಾಗುತ್ತಿದ್ದು, ಇಬ್ಬರ ಭೇಟಿ ಕುತೂಹಲ ಕೆರಳಸಿರುವುದಂತೂ ಸುಳ್ಳಲ್ಲ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap