ಜಿಪಂ ಅಧ್ಯಕ್ಷೆ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಅಂಗನವಾಡಿ ಕಾರ್ಯಕರ್ತೆ

ಹೊನ್ನಾಳಿ:

        ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅಕ್ರಮ ಎಸಗಿ ಜಿಪಂ ಅಧ್ಯಕ್ಷೆ ಕೈಗೆ ರೆಡ್ ಹ್ಯಾಂಡ್ ಆಗಿ ಸಿಲುಕಿರುವ ಘಟನೆ ತಾಲೂಕಿನ ಯರೇಚಿಕ್ಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

       ಯರೇಚಿಕ್ಕನಹಳ್ಳಿ ಗ್ರಾಮದ ಅನಸೂಯಾ ಅಕ್ರಮ ಎಸಗಿರುವ ಅಂಗನವಾಡಿ ಕಾರ್ಯಕರ್ತೆ. ಯರೇಚಿಕ್ಕನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಗೋಧಿ ರವೆಯ ಚೀಲವನ್ನು ಗ್ರಾಮಸ್ಥರ ನೆರವಿನೊಂದಿಗೆ ಜಿಪಂ ಅಧ್ಯಕ್ಷೆ ಕೆ.ಆರ್. ಜಯಶೀಲಾ ಪತ್ತೆಹಚ್ಚಿದ್ದು, ಸ್ಥಳದಲ್ಲೇ ಶಿಶು ಅಭಿವೃದ್ಧಿ ಇಲಾಖೆಯ ಜಿಲ್ಲಾಧಿಕಾರಿ ವಿಜಯಕುಮಾರ್‍ಗೆ ಮೊಬೈಲ್ ಕರೆ ಮಾಡಿ ಮಕ್ಕಳ ಆಹಾರಕ್ಕೆ ಕನ್ನ ಹಾಕಿರುವ ಅಂಗನವಾಡಿ ಕಾರ್ಯಕರ್ತೆ ಮೇಲೆ ಶಿಸ್ತು ಕ್ರಮ ಜರುಗಿಸಲು ಸೂಚನೆ ನೀಡಿದರು.

       ಗೋಧಿ ರವೆಯ ಚೀಲವನ್ನು ಬೇರೊಬ್ಬರ ಮನೆಯಲ್ಲಿ ಇರಿಸಿದ್ದ ಬಗ್ಗೆ ಜಿಪಂ ಅಧ್ಯಕ್ಷೆ ಕೆ.ಆರ್. ಜಯಶೀಲಾ ಅಂಗನವಾಡಿ ಕಾರ್ಯಕರ್ತೆ ಅನಸೂಯಾ ಅವರನ್ನು ಕರೆಯಿಸಿ ವಿಚಾರಿಸಿದಾಗ “ಗೋಧಿ ರವೆಯಲ್ಲಿ ಹುಳುಗಳು ಇದ್ದವು. ಹಾಗಾಗಿ, ಆ ಚೀಲವನ್ನು ಹಳ್ಳಕ್ಕೆ ಚೆಲ್ಲಿಬಿಡಿ” ಎಂದು ನಮ್ಮ ಮೇಲಧಿಕಾರಿಗಳು ತಿಳಿಸಿದ್ದರು. ಆದ್ದರಿಂದ, ಚೀಲವನ್ನು ಹಳ್ಳಕ್ಕೆ ಸುರಿಯಲು ತೆಗೆದುಕೊಂಡು ಹೋಗುತ್ತಿದ್ದಾಗ, ನಮ್ಮ ಗ್ರಾಮದ ನಮ್ಮ ಸಂಬಂಧಿಕರೊಬ್ಬರು ತಮ್ಮ ಮನೆಗೆ ತೆಗೆದುಕೊಂಡು ಹೋದರು ಎಂದು ಉತ್ತರಿಸಿದರು. ಗೋಧಿ ರವೆಯನ್ನು ಹಳ್ಳಕ್ಕೆ ಸುರಿಯಲು ಹೇಳಿರುವ ಬಗ್ಗೆ ಸಿಡಿಪಿಒ ಶಿವಲಿಂಗಪ್ಪ ಅವರನ್ನು ಜಿಪಂ ಅಧ್ಯಕ್ಷೆ ಪ್ರಶ್ನಿಸಿದಾಗ, ಅಧಿಕಾರಿ ಅದನ್ನು ನಿರಾಕರಿಸಿದರು. ಆಗ ಅಂಗನವಾಡಿ ಕಾರ್ಯಕರ್ತೆ ಮತ್ತೊಂದು ಸುಳ್ಳು ಹೇಳಲು ಮುಂದಾದರು.

      ಅಂಗನವಾಡಿ ಕೇಂದ್ರದ ಮಕ್ಕಳಿಗೆ ನೀಡಲು ಒದಗಿಸುವ ಅಕ್ಕಿ, ಬೇಳೆ, ಗೋಧಿ ರವೆ, ಅಡುಗೆ ಎಣ್ಣೆ, ಬೇಳೆ, ಹಾಲಿನ ಪೌಡರ್ ಮತ್ತಿತರ ಸಾಮಗ್ರಿಗಳನ್ನು ಅಂಗನವಾಡಿ ಕಾರ್ಯಕರ್ತೆ ಅನಸೂಯಾ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರೆ ಇಲಾಖೆಯ ಮೇಲಧಿಕಾರಿಗಳೇ ಬೇಕಾದಷ್ಟು ಅಕ್ರಮ ಎಸಗುತ್ತಾರೆ.

      ನಾನು ಮಾಡಿದರೆ ಮಾತ್ರ ತಪ್ಪೇನು? ನೀವು ಏನನ್ನಾದರೂ ಮಾಡಿಕೊಳ್ಳಿ. ನಾನು ಮಾಡುವುದು ಹೀಗೇ ಎಂದು ಗ್ರಾಮಸ್ಥರಿಗೇ ಧಮ್ಕಿ ಹಾಕುತ್ತಾರೆ. ಈಗಾಗಲೇ ಈ ಹಿಂದೆ ಮೂರು ಬಾರಿ ಇದೇ ರೀತಿ ಅಕ್ರಮ ಎಸಗಿದ ಸಂದರ್ಭಗಳಲ್ಲಿ ಜಿಪಂ ಸದಸ್ಯೆ ದೀಪಾ ಜಗದೀಶ್ ಹಾಗೂ ಮೇಲಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಎಚ್ಚರಿಕೆ ನೀಡಿದ್ದರು. ಆದರೂ, ಆ ಮಹಿಳೆ ತಪ್ಪನ್ನು ತಿದ್ದಿಕೊಂಡಿಲ್ಲ. ಹಾಗಾಗಿ, ಈ ಅಂಗನವಾಡಿ ಕಾರ್ಯಕರ್ತೆ ನಮ್ಮ ಗ್ರಾಮಕ್ಕೆ ಬೇಡ ಎಂದು ಗ್ರಾಮದ ಅನೇಕ ಹಿರಿಯರು, ಯುವಕರು ಜಿಪಂ ಅಧ್ಯಕ್ಷೆ ಕೆ.ಆರ್. ಜಯಶೀಲಾ ಎದುರು ದೂರು ನೀಡಿದರು.

        ಜಿಪಂ ಅಧ್ಯಕ್ಷೆ ಕೆ.ಆರ್. ಜಯಶೀಲಾ ಅವರೊಂದಿಗೆ ಮೊಬೈಲ್ ಫೋನ್‍ನಲ್ಲಿ ಮಾತನಾಡಿದ ಸಿಡಿಪಿಒ ಶಿವಲಿಂಗಪ್ಪ, ಅಂಗನವಾಡಿ ಕಾರ್ಯಕರ್ತೆ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಿದರು.ಜಿಪಂ ಉಪಾಧ್ಯಕ್ಷೆ ರಶ್ಮಿ ರಾಜಪ್ಪ, ಸದಸ್ಯೆ ಯಕ್ಕನಹಳ್ಳಿ ದೀಪಾ ಜಗದೀಶ್, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap