“8ನೇ ಬಳ್ಳಾರಿ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮ ”

0
10

ಬಳ್ಳಾರಿ:

      ಆವಿಷ್ಕಾರ ಪ್ರಗತಿಪರ ವೇದಿಕೆ, ಎಐಡಿಎಸ್‍ಓ, ಎಐಡಿವೈಓ, ಹಾಗೂ ಎಐಎಂಎಸ್‍ಎಸ್ ಜೊತೆಗೂಡಿ ಬಳ್ಳಾರಿಯಲ್ಲಿ 8 ನೇ ಸಾಂಸ್ಕತಿಕ ಜನೋತ್ಸವದ ಆರಂಭ ಇಂದು ನಗರದ ಜೋಳದರಾಶಿ ರಂಗಮಂದಿರದಲ್ಲಿ ಜರುಗಿತು.

       ಸಮಾಜ ಸುಧಾರಕಿ, ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಗೆ ಅರ್ಪಿತವಾದ ಈ ಕಾರ್ಯಕ್ರಮವನ್ನು ಸಾವಿತ್ರಿಬಾಯಿಯವರಿಗೆ ಅರ್ಪಿತ ಹಾಡಿನೊಂದಿಗೆ ಶುರು ಮಾಡಲಾಯಿತು.

       ಸಮಾರೋಪ ಕಾರ್ಯಕ್ರಮದ ಉದ್ಘಾಟಕರಾಗಿ ಬಂದಿದ್ದ ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಟಿ ಆರ್ ಚಂದ್ರಶೇಖರ್ ರವರು ತಮಟೆ ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ತಮ್ಮ ಭಾಷಣದಲ್ಲಿ ಅವರು “ಸಾವಿತ್ರಿಬಾಯಿ ಫುಲೆಯಂತಹ ಸಮಾಜ ಸುಧಾರಕಿ, 19ನೇ ಶತಮಾನದಲ್ಲೇ ಮಹಿಳೆಯರ ಶಿಕ್ಷಣದ ಮಹತ್ವವನ್ನು ಅರಿತು ಕೊಂಡು ಅದನ್ನು ನೀಡಲು ಸಾಮಾಜಿಕ ವಿರೋಧ, ಹಿಂಸೆಯನ್ನು ಎದುರಿಸಿ ಮೆಟ್ಟಿ ನಿಂತವರು. ಅವರ ದೂರದೃಷ್ಟಿಯಿಂದ ನಾವು ಕಲಿಯಬೇಕು, ಅವರ ವಿಚಾರಗಳ ಇಂದಿಗೂ ಪ್ರಸ್ತುತ ಎಂದರು. ಮಹಿಳೆಗೆ ಶಿಕ್ಷಣದ ಮಹತ್ವವಿರುವುದು ಆಕೆ ಸಂಪೂರ್ಣ ಮನುಷ್ಯಳಾಗಬೇಕಾದರೆ ಅವಳಿಗೆ ಶಿಕ್ಷಣ ಅತ್ಯಗತ್ಯ ಎಂಬುದನ್ನು ಅವರು ನಮ್ಮ ಸಂವಿಧಾನ ನಮಗೆ ಅದು ಹಕ್ಕು ಎಂದು ಹೇಳುವ ನೂರು ವರ್ಷ ಹಿಂದೆಯೇ ಆಚರಣೆಗೆ ತಂದಿದ್ದರು. ಸಮಾಜದಲ್ಲಿ ಮಹಿಳೆಯರ ಸಮಾನತೆ, ಅವರ ಶಿಕ್ಷಣದ ಅರಿವು, ಮಹತ್ವವನ್ನು ನಾವು ಇಂದಿಗೂ ಅರ್ಥ ಮಾಡಿಕೊಳ್ಳುವಲ್ಲಿ ಪೂರ್ತಿ ಸಫಲರಾಗಿಲ್ಲ ಎಂಬುದಕ್ಕೆ ನಮ್ಮಲ್ಲಿರುವ ಲಿಂಗ ತಾರತಮ್ಯ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ,ಪುರುಷ ಮೌಲ್ಯಗಳ ವಿಜೃಂಭಣೆ ಸಾಕ್ಷಿ. ಇವುಗಳನ್ನೆಲ್ಲ ಪ್ರಶ್ನಿಸುವಲ್ಲಿ, ಸಮಾಜದಲ್ಲಿ ಅರಿವು ಮೂಡಿಸುವಲ್ಲಿ, ಮಹಿಳೆಯರ ಕುರಿತ ಸಮಾಜದ ವಿಕೃತಿಗಳನ್ನು ತಿದ್ದುವಲ್ಲಿ ಈ ಉತ್ಸವ ಕೇವಲ ಸಂಭ್ರಮಾಚರಣೆಯಾಗಿರದೆ ವಿಚಾರ ಪ್ರಚೋದನೆಗೆ ಎಡೆಮಾಡಿಕೊಡಲಿದೆಯೆಂಬ ಆಶಯದೊಂದಿಗೆ ಕಾರ್ಯಕ್ರಮ ಉದ್ಘಾಟಿಸುತ್ತಿದ್ದೇನೆ” ಎಂದರು.

        ಕಾರ್ಯಕ್ರಮದ ಮೊದಲು ಈ ಬಾರಿ ಜನೋತ್ಸವ ಅರ್ಪಿತವಾಗಿರುವ ಸಮಾಜ ಸುಧಾರಕಿ, ಮೊದಲ ಭಾರತೀಯ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ ಜೀವನ, ಸಂಘರ್ಷ, ಸ್ಫೂರ್ತಿಯ ಕುರಿತು ಸೂಕ್ತಿ ಚಿತ್ರ ಪ್ರದರ್ಶನವನ್ನು ನಗರದ ಖ್ಯಾತ ನೇತ್ರ ತಜ್ಞ ಡಾ.ವಿಜಯ್ ನಾಗರಾಜ್ ಉದ್ಘಾಟಿಸಿ “ಸಾವಿತ್ರಿಬಾಯಿ ಫುಲೆಯವರು ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಸಮಾಜ ಸುಧಾರಣೆಗಾಗಿ ದುಡಿದು ನಮಗೆ ಅನುಕರಣೀಯ ಮಾದರಿಯಾಗಿದ್ದಾರೆ” ಎಂದು ಹೇಳಿದರು.

        ಸಭೆಯ ಅಧ್ಯಕ್ಷತೆಯನ್ನು ಎಐಡಿಎಸ್‍ಓ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ.ಪ್ರಮೋದ್‍ರವರು ವಹಿಸಿ “ನಮ್ಮ ಸಂಘಟನೆಗಳು ಇಂತಹ ಕಾರ್ಯಕ್ರಮಗಳನ್ನು ಸಾಮಾಜಿಕ ಅರಿವು ಹಾಗೂ ಸಮಾಜ ಬದಲಾವಣೆಗಾಗಿ ಸಾಂಸ್ಕøತಿಕ ಉತ್ಸವ ಮಾಡುತ್ತೇವೆ ಎಂದರು.

       ಆವಿಷ್ಕಾರ ಬಳ್ಳಾರಿಯ ಸಂಘಟಕರಾದ ಶ್ರೀ ಪ್ರಶಾಂತ್ ಬಡಿಗೇರ್‍ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ಹಾಗೂ ಸಂಘಟನೆಯ ಕುರಿತು ಮಾತನಾಡಿ ಮನುಷ್ಯತ್ವ, ಮಾನವ ಸಂವೇದನೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಾಂಸ್ಕøತಿಕ ಕ್ಷೇತ್ರದಲಿ ಇದೊಂದು ಪ್ರಯತ್ನ ಎಂದರು.

        ಸೂಕ್ತಿ ಚಿತ್ರ ಪ್ರದರ್ಶನದ ಅಧ್ಯಕ್ಷತೆಯನ್ನು ಸೃಜನ ಕಲ್ಚರಲ್ ಸೊಸೈಟಿಯ ಶ್ರೀಮತಿ ನಾಗರತ್ನ ಎಸ್ ಜಿ ಅವರು ಇದರ ಅಧ್ಯಕ್ಷತೆ ವಹಿಸಿದ್ದರು. 

        ಉದ್ಘಾಟನಾ ಸಭೆಯ ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಬಳ್ಳಾರಿಯ ನಾಟ್ಯಕಲಾ ಸಂಘದಿಂದ ಶ್ರೀಮತಿ ಇಂದ್ರಾಣಿಯವರ ನಿರ್ದೇಶನದಲ್ಲಿ ಜನನಾಟ್ಯ,ಬಳ್ಳಾರಿಯ ಶ್ರೀಮತಿ ರಾಜಲಕ್ಷ್ಮಿ ಹಾಗೂ ತಂಡದಿಂದ ಜನ ಸಂಗೀತ, ಬಳ್ಳಾರಿಯ ಸುಜಾತಾ ಕಲಾ ಟ್ರಸ್ಟ್ ನಿಂದ ಶ್ರೀ ವಿಜೇಂದ್ರ ಕುಮಾರ್ ನಿರ್ದೇಶನದ ನೃತ್ಯೋಲ್ಲಾಸ ನಡೆಯಿತು. ಆ ನಂತರ ಶ್ರೀ ತಿರುಮಲಾ ಅವರ ನಿರ್ದೇಶನದಲ್ಲಿ ಮೆಟ್ರಿಕಿಯ ಮುರಾರ್ಜಿದೇಸಾಯಿ ವಸತಿ ಶಾಲೆಯ ಮಕ್ಕಳಿಂದ ನೃತ್ಯ ರೂಪಕ. ಬಳ್ಳಾರಿಯ ಅಂಕುರ ನಾಟಕ ತಂಡದಿಂದ ಮಕ್ಕಳ ನಾಟಕ ಕೋ ಕೋ ಕೋಳೀಕೆ ರಂಗ ಹಾಗೂ ಕೊನೆಗೆ ಓ ಹೆನ್ರಿಯವರ ಕಥೆಯಿಂದ ಪ್ರೇರಿತ ಡಾ ಸುಚೇತಾ ಪೈ ಅವರಿಂದ ರಚಿತವಾದ ನಾಟಕ ಅಪರಾಧಿ ಯಾರು? ಇದನ್ನು ಸೃಜನ ಕಲ್ಚರಲ್ ಸೊಸೈಟಿಯಿಂದ ಪ್ರಸ್ತುತಿಪಡಿಸಲಾಯಿತು. ಆವಿಷ್ಕಾರ ತಂಡ, ಬಳ್ಳಾರಿ ಇವರಿಂದ ಪ್ರಗತಿಪರ ಗೀತೆಗಳು ಇದ್ದವು.

           ಜನೋತ್ಸವದ ಮೊದಲ ದಿನ ಮಾರ್ಚಿ 22 ಸಿನಿಮಾ ಪ್ರದರ್ಶನ ಹಾಗು ಸಂವಾದವಿತ್ತು. ನಗರದ ಗಾಂಧಿ ಭವನದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಳ್ಳಾರಿ ನಾಗರೀಕ ಹೋರಾಟ ಸಮಿತಿಯ ಸಂಚಾಲಕರಾದ ಶ್ರೀ ಆರ್ ಸೋಮಶೇಖರ ಗೌಡ್ ಸಂವಾದ ನಡೆಸಿಕೊಟ್ಟರು. ಎಐಎಂಎಸ್‍ಎಸ್‍ನ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಈಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಡಿಎಸ್‍ಓ ಬಳ್ಳಾರಿ ಜಿಲ್ಲಾ ಸಮಿತಿಯ ಶ್ರೀ ಸುರೇಶ್ ಜಿ ಅಧ್ಯಕ್ಷತೆ ವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here