ವಕೀಲರ ಸಂಘದ ಕ್ರಿಕೆಟ್ ಕ್ರೀಡಾಕೂಟ ಉದ್ಘಾಟನೆ

0
5

ಬ್ಯಾಡಗಿ:

         ತಂತ್ರಜ್ಞಾನದ (ಮೋಬೈಲ್) ಹಿಂದೆ ಬಿದ್ದಿರುವ ಯುವ ಜನಾಂಗ ಕ್ರೀಡಾಂಗಣದಿಂದ ದೂರ ಉಳಿಯುತ್ತಿರುವುದು ಖೇದದ ಸಂಗತಿ, ಹೀಗಾಗಿ ವಿಶ್ವದ ಪ್ರಮುಖ ಕ್ರೀಡಾಕೂಟಗಳಲ್ಲಿ ಭಾರತ ದೇಶದ ಕ್ರೀಡಾಕೂಟಗಳು ಪದಕ ಗಳಿಸಲು ಪರದಾಡುತ್ತಿದೆ, ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳ ಜಯಂತಿ ಆಚರಣೆ ಸೇರಿದಂತೆ ಜೀವನ ಚರಿತ್ರೆಗಳು ಶಾಲಾ ಪಠ್ಯಪುಸ್ತಕಗಳಲ್ಲಿ ಪ್ರಕಟಿಸುವ ಕೆಲಸ ಸರ್ಕಾರಗಳಿಂದಾಗಬೇಕು ಎಂದು ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ್ ಹೊಸ್ಮನಿ ಅಭಿಪ್ರಾಯ ವ್ಯಕ್ತಪಡಿಸಿದರು.

         ಸ್ಥಳೀಯ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ವಿವಿಧ ವಕೀಲರ ಸಂಘದ ಕ್ರಿಕೆಟ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಹಾಕಿ ಮಾಂತ್ರಿಕ ಧ್ಯಾನಚಂದ್ ಸೇರಿದಂತೆ ಹಾರುವ ಕುದುರೆ ಎಂದೇ ಖ್ಯಾತರಾಗಿದ್ದ ಮಿಲ್ಕಾಸಿಂಗ್, ಸ್ಪ್ರಿಂಟ್‍ರಗಳಾದ ಪಿ.ಟಿ.ಉಷಾ, ಅಶ್ವಿನಿ ನಾಚಪ್ಪ, ಜೆ.ಜೆ.ಶೋಭಾ ಸೇರಿದಂತೆ ದೇಶದ ಬಹಳಷ್ಟು ಕ್ರೀಡಾ ತಾರೆಯರು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಉತ್ತಮ ಸಾಧನೆ ತೋರಿದ್ದಾರೆ, ಆದರೆ ಕೆಲ ವರ್ಷಗಳಲ್ಲಿ ಅವರ ಹೆಸರುಗಳು ಮನಪಟದಲ್ಲಿ ಉಳಿದಿಲ್ಲ ಎಂದರು.

         ಪುಸ್ತಕಗಳಲ್ಲಿ ಚರಿತ್ರೆ ಬರಲಿ: ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಇಬ್ರಾಹಿಂ ಮುಜಾವರ ಮಾತನಾಡಿ, ಪದಕಗಳನ್ನು ತಂದು ಕೊಟ್ಟಾಗಲಷ್ಟೇ ಗೆದ್ದು ಸಂಭ್ರಮಿಸುವ ಬದಲು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಮಾದರಿ ಯಲ್ಲಿ ಜಯಂತಿ ಆಚರಣೆ ಸೇರಿದಂತೆ ಜೀವನ ಚರಿತ್ರೆಗಳು ಶಾಲಾ ಪಠ್ಯಪುಸ್ತಕಗಳಲ್ಲಿ ಪ್ರಕಟಿಸುವ ಕೆಲಸವಾಗಬೇಕು, ಇಲ್ಲದಿದ್ದರೇ ಮುಂದಿನ ಪೀಳಿಗೆ ಈ ಹೆಸರುಗಳು ಯಾರದ್ದು ಎಂದು ಕೇಳುವಂತಹ ಸ್ಥಿತಿ ಎದುರಾಗಬಹುದು ಎಂದರು.

         ಮುಂದಿನ ದಿನಳಲ್ಲಿ ದೇಶೀಯ ಕ್ರೀಡೆಗಳಿಗೆ ಆದ್ಯತೆ: ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜಿ.ಜಿ.ತಟ್ಟಿ ಮಾತನಾಡಿ, ದೇಶದಲ್ಲಿ ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಎನ್ನು ವಂತಾಗಿದೆ ಇದರ ಪ್ರಭಾವಕ್ಕೆ ದೇಶಿಯ ಕ್ರೀಡೆಗಳಾದ ಕಬಡ್ಡಿ, ಕೋಕೋ, ಕುಸ್ತಿ, ಮಲ್ಲಕಂಬ ಹಾಕಿ ಇನ್ನಿತರ ಕ್ರೀಡೆಗಳು ಮಂಕಾಗಿದ್ದು ಕ್ರಮೇಣವಾಗಿ ನೇಪಥ್ಯಕ್ಕೆ ಸರಿಯುತ್ತಿವೆ, ಇತ್ತಿಚೇಗೆ ಪ್ರೋಕಬಡ್ಡಿ ಕ್ರೀಡಾ ಆಯೋಜನೆಯಿಂದ ವಿಶ್ವದಲ್ಲಿಯೇ ಕಬಡ್ಡಿ ಕ್ರೀಡೆ ಫಿನಿಕ್ಸ್‍ನಂತೆ ಎದ್ದು ನಿಂತಿದ್ದು ದೇಶಿಯ ಕ್ರೀಡೆಗಳಿಗಿರುವ ತಾಕತ್ತನ್ನು ಸಾಬೀತುಪಡಿಸಿದೆ ಈ ಹಿನ್ನೆಲೆಯಲ್ಲಿ ವಕೀಲರ ಸಂಘವು ದೇಶಿಯ ಕ್ರೀಡೆಗಳಿಗೆ ಆದ್ಯತೆ ನೀಡಲಿದೆ ಎಂದರು.

          ಇದೇ ಸಂದರ್ಭದಲ್ಲಿ ಈರ್ವರು ನ್ಯಾಯಾಧೀಶರು ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಎಚ್.ಎಸ್.ಜಾಧವ, ನ್ಯಾಯವಾದಿಗಳಾದ ವಿಜಯ ಕಡಗಿ, ಜಿ.ಎಂ.ಮಠದ, ಪ್ರಭು ಶೀಗಿಹಳ್ಳಿ, ದೇವರಾಜ ಬುಡ್ಡನಗೌಡ್ರ, ಎನ್.ಸಿ.ಬಟ್ಟಲಕಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here