ಬಿಡಿಎ ಅಧ್ಯಕ್ಷರಾಗಿ ಯಶವಂತಪುರ ಶಾಸಕ ಅಧಿಕಾರ ಸ್ವೀಕಾರ

0
5

ಬೆಂಗಳೂರು

       ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರಾಗಿ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಇಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ನೂತನ ಅಧ್ಯಕ್ಷರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು.

       ಇದಕ್ಕೂ ಮುನ್ನ ಸೋಮಶೇಖರ್ ಅವರು ತಮ್ಮ ನೂತನ ಕಚೇರಿಯ ಪೂಜೆ ನೆರವೇರಿಸಿದರು. ಶಾಸಕರಾದ ಎನ್.ಎ ಹ್ಯಾರಿಸ್, ಭೈರತಿ ಬಸವರಾಜು ಹಾಗೂ ವಿಧಾನಪರಿಷತ್ ಸದಸ್ಯ ರಘು ಆಚಾರ್ಯ ಹಾಜರಿದ್ದು ಶುಭ ಹಾರೈಸಿದರು. ಬಿಡಿಎ ಆವರಣದಲ್ಲಿ ಅಪಾರ ಪ್ರಮಾಣದಲ್ಲಿ ಅವರ ಬೆಂಬಲಿಗರು ನೆರೆದಿದ್ದರು.

       ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ಬಿಡಿಎ ಅಧ್ಯಕ್ಷ ಸ್ಥಾನ ಮುಳ್ಳಿನ ಹಾಸಿಗೆಯಿದ್ದಂತೆ. ಜನರು ಇದರ ಬಗ್ಗೆ ತಮ್ಮದೇ ಆದ ವಿಶ್ಲೇಷಣೆ ಮಾಡುತ್ತಿದ್ದಾರೆ. ತಾವು ಯಾವುದೇ ಸ್ಥಾನಮಾನದ ಬೇಡಿಕೆಯಿಟ್ಟಿರಲಿಲ್ಲ. ಕಾಂಗ್ರೆಸ್ ಮುಖಂಡರು ಈ ಜವಾಬ್ದಾರಿ ನೀಡಿದ್ದಾರೆ. ಅವರ ಮಾತಿಗೆ ತಲೆಬಾಗಿ ಈ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂದರು.

         ಈ ಹಿಂದೆ ಕೂಡ ಬಿಡಿಎ ಆಡಳಿತ ಮಂಡಳಿಯ ಸದಸ್ಯನಾಗಿದ್ದೆ. ಇಲ್ಲಿನ ಸಮಸ್ಯೆಗಳ ಕುರಿತು ಅರಿವಿದೆ. ಬಿಡಿಎಗೆ ಬಂದರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆಯನ್ನು ಜನರಲ್ಲಿ ಮೂಡಿಸುವುದು ತಮ್ಮ ಗುರಿ. ಬಿಡಿಎಗೆ ಸೇರಿದ ಕೆಂಪೇಗೌಡ, ವಿಶ್ವೇಶ್ವರಯ್ಯ, ಬನಶಂಕರಿ, ಜ್ಞಾನಭಾರತಿ ಬಡಾವಣೆಗಳು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುವುದರಿಂದ ಅಲ್ಲಿನ ಸಮಸ್ಯೆಗಳ ಕುರಿತು ಅರಿವಿದೆ. ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

         ರಾಜ್ಯ ಸರ್ಕಾರ ಮರು ಆರಂಭಿಸಲು ಯೋಜಿಸಿರುವ ಉಕ್ಕಿನ ಸೇತುವೆ ಯೋಜನೆ ಹಾಗೂ ಶಿವರಾಮ ಕಾರಂತ ಬಡಾವಣೆಗೆ ಭೂಮಿ ಡೀನೋಟಿಫಿಕೇಷನ್ ವಿವಾದದ ಕುರಿತು ಕೇಳಲಾದ ಪ್ರಶ್ನೆಗೆ ಅವರು, ಈ ಕುರಿತು ಮಾಹಿತಿಯಿಲ್ಲ. ಮಾಹಿತಿ ಪಡೆದ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

        ಬಿಡಿಎಯಿಂದ ಹಲವು ಹೊಸ ಯೋಜನೆಗಳನ್ನು ಜಾರಿಗೆ ತರುವ ಚಿಂತನೆಯಿದೆ. ಈ ಕುರಿತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here