ಪ್ರಜಾತಂತ್ರ ಮುಚ್ಚಿ ಹಣ ತಂತ್ರದ ಹೆಬ್ಬಾಗಿಲು ತೆರೆದ ಬಿಜೆಪಿ

0
4

ಚಿತ್ರದುರ್ಗ:

        ಚುನಾವಣೆ ಪ್ರಜಾತಂತ್ರಕ್ಕೆ ದಾರಿಯಾಗಬೇಕೆ ವಿನಃ ಹಣ ತಂತ್ರಕ್ಕೆ ದಾರಿಯಾಗಬಾರದು. ದೇಶದ ಪ್ರಧಾನಿ ನರೇಂದ್ರಮೋದಿ ಸರ್ಕಾರ ಹಣ ತಂತ್ರದ ಹೆಬ್ಬಾಗಿಲು ತೆರೆದು ಪ್ರಜಾತಂತ್ರವನ್ನು ಮುಚ್ಚಿದೆ ಎಂದು ವಿಶ್ರಾಂತ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಆಪಾದಿಸಿದರು.

        ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಲೋಕಸಭಾ ಚುನಾವಣೆ ಬಿಜೆಪಿ. ವರ್ಸಸ್ ಕಾಂಗ್ರೆಸ್ ಅಲ್ಲ, ಚಂದ್ರಪ್ಪ ವರ್ಸಸ್ ನಾರಾಯಣಸ್ವಾಮಿಯಲ್ಲ. ಸರ್ವಾಧಿಕಾರಿ ವರ್ಸಸ್ ಪ್ರಜಾತಂತ್ರ, ಆರ್.ಎಸ್.ಎಸ್. ವರ್ಸಸ್ ಸಂವಿಧಾನವಾಗಿರುವುದರಿಂದ ಮತದಾರರು ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಕೋಮುವಾದಿ ಬಿಜೆಪಿ.ಯನ್ನು ಸೋಲಿಸಬೇಕು ಎಂದು ಕರೆ ನೀಡಿದರು.

       ಆರ್.ಎಸ್.ಎಸ್.ನವರು ಹಿಂದಿನಿಂದಲೂ ಸಂವಿಧಾನವನ್ನು ವಿರೋಧಿಸಿಕೊಂಡು ಬಂದವರು. ಸಂವಿಧಾನ ಮತ್ತು ಸಂವಿಧಾನ ವಿರೋಧಿಗಳ ಚುನಾವಣೆ, ಗಾಂಧಿ ಮತ್ತು ಗೋಡ್ಸೆ ಚುನಾವಣೆ ಇದು. ಖಾವಿಯನ್ನು ದೇಶಕ್ಕೆ ಕೊಟ್ಟ ಚಿತ್ರದುರ್ಗ ಜಿಲ್ಲೆ ಗೋಡ್ಸೆಯನ್ನು ಆಲಂಗಿಸಿಕೊಳ್ಳಬಾರದು. ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾದರೆ ಪ್ರಜಾಪ್ರಭುತ್ವಕ್ಕೆ ಇದು ಕೊನೆಯ ಚುನಾವಣೆ. ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆ. ಮೋದಿಯವರದು ಪಾರದರ್ಶಕ ಆಡಳಿತವಲ್ಲ. ಪ್ರಶ್ನೋತ್ತರ ವೇಳೆಯಲ್ಲಿ ಸಂಸತ್‍ನಲ್ಲಿ ಒಂದು ಬಾರಿಯೂ ಉತ್ತರಿಸಲಿಲ್ಲ. ಪಾರ್ಲಿಮೆಂಟ್‍ನಿಂದ ಪಲಾಯನಗೊಂಡು ವಿದೇಶಗಳನ್ನು ಸುತ್ತುತ್ತಿದ್ದರು. ಹಾಗಾಗಿ ಮೋದಿ ಸರ್ಕಾರ ಬೀಳಿಸಿ ಪ್ರಜಾತಂತ್ರ ಸ್ಥಾಪಿಸಿ ಎಂದು ಮತದಾರರನ್ನು ಎಚ್ಚರಿಸಿದರು.

        ಧರ್ಮ, ದೇವರು, ದೇವಸ್ಥಾನಗಳ ಹೆಸರಿನಲ್ಲಿ ಭಾರತವನ್ನು ವಿಭಜಿಸುವುದೇ ಮೋದಿ ರಾಜಕಾರಣ. ಪ್ರಜಾಪ್ರಭುತ್ವದಲ್ಲಿ ಧರ್ಮವನ್ನು ಜೋಡಿಸಿದರೆ ಅನ್ನದಲ್ಲಿ ವಿಷ ಬೆರೆಸಿದಂತೆ. ರಾಷ್ಟ್ರದ ಉಳಿವಿಗಾಗಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

        ರಾಷ್ಟ್ರ ಸೇವಾದಳದ ಡಾ.ಸುರೇಶ್ ಮಾತನಾಡುತ್ತ ಸಂವಿಧಾನ ಬದಲಾವಣೆ ಮಾಡಲು ಹೊರಟಿರುವ ಕೋಮುವಾದಿ ಬಿಜೆಪಿ.ಯನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸದಿದ್ದರೆ ಪ್ರಜಾಪ್ರಭುತ್ವವೇ ನಾಶವಾದಂತಾಗುತ್ತದೆ. ನಾಲ್ಕುವರೆ ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಮೋದಿ ಎಂದಿಗೂ ಬಡವರ ಪರವಾದ ಕಾನೂನುಗಳನ್ನು ಜಾರಿಗೆ ತರಲಿಲ್ಲ. ಅದಕ್ಕೆ ಬದಲಾಗಿ ಬಂಡವಾಳ ಶಾಹಿಗಳ, ಉದ್ಯಮಿಗಳ, ಕಾರ್ಪೊರೇಟರ್‍ಗಳ ಪರವಾಗಿ ನಿಂತಿದ್ದಾರೆ. ಐದುನೂರು ಹಾಗೂ ಒಂದು ಸಾವಿರ ರೂ.ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿ ಜಿ.ಎಸ್.ಟಿ.ಜಾರಿಗೆ ತಂದಿದ್ದೆ ಮೋದಿ ಸಾಧನೆ ಎಂದು ವ್ಯಂಗ್ಯವಾಡಿದರು.ಬಿಜಾಪುರದ ರೈತ ನಾಯಕ ಅಪ್ಪಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here