ಬಿಜೆಪಿಗೆ ಹಿಂದುಳಿದ ವರ್ಗಗಳ ಮುಖಂಡರ ಬೆಂಬಲ

ತುಮಕೂರು

      ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷರಾದ ಡಾ. ಎಂ ಆರ್ ಹುಲಿನಾಯ್ಕರ್ ನೇತೃತ್ವದಲ್ಲಿ ಆ ವರ್ಗದ ವಿವಿಧ ಸಮಾಜದ ಮುಖಂಡರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಅವರಿಗೆ ತಮ್ಮ ಬೆಂಬಲ ಘೋಷಿಸಿದರು.

        ಈ ವೇಳೆ ಮಾತನಾಡಿದ ಡಾ. ಹುಲಿನಾಯ್ಕರ್, ಪ್ರಧಾನಿ ನರೇಂದ್ರ ಮೋದಿ ಅವರ ಜನಪರವಾದ ಆಡಳಿತ, ಎಲ್ಲಾ ವರ್ಗದವರನ್ನು ತೊಡಗಿಸಿಕೊಳ್ಳುವ ಅಭಿವೃದ್ಧಿ ಕಾರ್ಯ ಒಪ್ಪಿ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಲು ಹಿಂದುಳಿದ ವರ್ಗಗಳ ಮುಖಂಡರು ಬಿಜೆಪಿ ಬೆಂಬಲಿಸಿದ್ದಾರೆ ಎಂದು ಹೇಳಿದರು.

       ಮೋದಿಯವರ ಐದು ವರ್ಷದ ಆಡಳಿತದಲ್ಲಿ ಕಂಡ ಬದಲಾವಣೆ, ಆಗಿರುವ ಅಭಿವೃದ್ಧಿಯನ್ನು ಆದರ್ಶವಾಗಿ ತೆಗೆದುಕೊಂಡು ಎಲ್ಲಾ ವರ್ಗದವರು ಬಿಜೆಪಿ ಜೊತೆ ಈ ಚುನಾವಣೆಯಲ್ಲಿ ಕೈಜೋಡಿಸುತ್ತಿದ್ದಾರೆ. ಮುದ್ರಾ, ಜನಧನ್ ಯೋಜನೆ ಮೂಲಕ ಸಾಮಾನ್ಯ ಜನರು ಕೂಡಾ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ತಾವೂ ಭಾಗಿಗಳು ಎಂಬ ಕಲ್ಪನೆ ಮೂಡಿಸಿದ್ದು ಮೋದಿಯವರ ಆಡಳಿತ ಎಂದು ತಿಳಿಸಿದರು.
ಈ ದೇಶಕ್ಕೆ ಮಹತ್ವವಾದ ಸಂವಿಧಾನ ನೀಡಿದ ಅಂಬೇಡ್ಕರ್ ಅವರಿಗೆ ಇಷ್ಟು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‍ನವರು ಮಾನ್ಯತೆ ನೀಡಲಿಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಅಂಬೇಡ್ಕರ್ ಅವರು ಹುಟ್ಟಿದ ಊರು, ಸಮಾದಿ ಸ್ಥಳ, ದೆಹಲಿಯಲ್ಲಿ ವಾಸಿಸುತ್ತಿದ್ದ ಮನೆ, ಬೌದ್ಧ ಧರ್ಮ ಸ್ವೀಕರಿಸಿದ ನಾಗಪುರದ ಜಾಗಗಳನ್ನು ಪಂಚ ಪವಿತ್ರ ತೀರ್ಥಸ್ಥಳಗಳನ್ನಾಗಿ ಮೋದಿ ಸರ್ಕಾರ ಅಭಿವೃದ್ದಿ ಮಾಡಿದೆ ಎಂದು ಡಾ. ಹುಲಿನಾಯ್ಕರ್ ಹೇಳಿದರು.

      ವಿಶ್ವಕರ್ಮ ಸಮಾಜ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಕೆ ಪಿ ನಂಜುಂಡಿ ಮಾತನಾಡಿ, 16 ವರ್ಷ ಕಾಲ ಕಾಂಗ್ರೆಸ್ ಪಕ್ಷಕ್ಕೆ ತಾವು ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಆ ಪಕ್ಷದ ನಾಯಕರು ತಮ್ಮನ್ನು ಗುರುತಿಸಲಿಲ್ಲ, ಬೇಸತ್ತು ಕಾಂಗ್ರೆಸ್ ತೊರೆದು ರಾಜಕಾರಣವೇ ಬೇಡ ಎಂದು ಸುಮ್ಮನಿದ್ದಾಗ ಯಡಿಯೂರಪ್ಪನವರು ಮನೆಗೆ ಬಂದು ಬಿಜೆಪಿಗೆ ಸೇರ್ಪಡೆಮಾಡಿಕೊಂಡು, ಎರಡೇ ತಿಂಗಳಲ್ಲಿ ರಾಜ್ಯ ಉಪಾಧ್ಯಕ್ಷನನ್ನಾಗಿ ಮಾಡಿದರು, ನಂತರ ಆರು ತಿಂಗಳಲ್ಲಿ ಪಕ್ಷ ತಮ್ಮನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿತು, ಸಾಮಾನ್ಯ ಜಾತಿಯ ಮುಖಂಡರೂ ಬಿಜೆಪಿಯಿಂದ ಮಾತ್ರವೇ ಅಧಿಕಾರ ಪಡೆಯಲು ಸಾಧ್ಯವೆಂಬುದಕ್ಕೆ ತಾವೇ ಸಾಕ್ಷಿ ಎಂದರು.ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಸಂಬಳಕ್ಕಾಗುವಷ್ಟು ಮಾತ್ರ ಹಣ ನೀಡುತ್ತಿದೆ ಹೊರತು ಯಾವುದೇ ಅಭೀವೃದ್ಧಿ ಕಾರ್ಯಗಳಿಗೆ ನೆರವು ನೀಡಲಿಲ್ಲ ಎಂದರು.

     ನರೇಂದ್ರ ಮೋದಿ ಅವರು ನಮ್ಮ ಬೇಡಿಕೆಗೆ ಸ್ಪಂದಿಸಿ ಚಂಡಿಗಡದಲ್ಲಿ ವಿಶ್ವಕರ್ಮ ವಿಶ್ವವಿದ್ಯಾಲಯ ಆರಂಭ ಮಾಡಿದರು ಎಂದು ಹೇಳಿದರು.ಯಾದವ ಸಮಾಜದ ಮುಖಂಡ ಜಿ ಎನ್ ಬೆಟ್ಟಸ್ವಾಮಿ ಮಾತನಾಡಿ, ಈ ಇಳಿ ವಯಸ್ಸಿನಲ್ಲಿ ದೇವೇಗೌಡರು ಚುನಾವಣೆಗಾಗಿ ತುಮಕೂರಿಗೆ ಬರಬಾರದಾಗಿತ್ತು, ತುಮಕೂರಿಗೆ ಇವರ ಕೊಡುಗೆ ಏನು, ಯಾಕಾಗಿ ಈ ಕ್ಷೇತ್ರದ ಜನ ಅವರಿಗೆ ಮತ ನೀಡಬೇಕು ಎಂದು ಕೇಳಿದರು.

      ಕಾಂಗ್ರೆಸ್, ಜೆಡಿಎಸ್ ನಿಂದ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಾಧ್ಯವಿಲ್ಲ, ಇದನ್ನು ಮನಗಂಡ ವಿವಿಧ ಸಮಾಜದವರು ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ ಎಂದರು.ನಗರ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್, ವಿಷ್ಣುವರ್ಧನ್, ಮುಖಂಡರಾದ ಧನಿಯಾಕುಮಾರ್, ವೇದಮೂರ್ತಿ, ಗಿರಿಯಪ್ಪ, ಕೃಷ್ಣಪ್ಪ, ಜಕಣಾಚಾರಿ, ಶಿವಣ್ಣ, ಕಮಲಮ್ಮ, ವಿನಯ್ ಜೈನ್, ಅಸ್ಲಾಂಖಾನ್, ಅನ್ವರ್‍ಪಾಷ, ಜಗದೀಶ್, ಬಸವರಾಜು ಮೊದಲಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap