ಬಿಜೆಪಿಯಿಂದ ಸ್ವಯತ್ತ ಸಂಸ್ಥೆಗಳ ದುರುಪಯೋಗ

0
2

ದಾವಣಗೆರೆ

      ಸೋಲುವ ಭೀತಿಯಿಂದ ಕಂಗೆಟ್ಟಿರುವ ಬಿಜೆಪಿಯು ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯತ್ತ ಸಂಸ್ಥೆಗಳನ್ನು ದುರುಪಯೋಗ ಪಡೆಸಿಕೊಳ್ಳುವ ಮೂಲಕ ವಿರೋಧ ಪಕ್ಷಗಳ ಅಭ್ಯರ್ಥಿಗಳು ಹಾಗೂ ಅವರ ಆಪ್ತರನ್ನು ಗುರಿಯನ್ನಾಗಿಸಿಕೊಂಡು, ದಾಳಿ ನಡೆಸುತ್ತಿದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಆರೋಪಿಸಿದರು.

       ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜರೀಕಟ್ಟೆ, ಮುದಹದಡಿ, ದುರ್ಗಾಂಬಿಕಾ ಕ್ಯಾಂಪ್, ಹಳೇ ಬಿಸಲೇರಿ, ಹೊಸ ಬಿಸಲೇರಿ, ನಾಗನೂರು, ನಾಗಮ್ಮ ಕೇಶವಮೂರ್ತಿ ಬಡಾವಣೆ ಗ್ರಾಮಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ಚುನಾವಣಾ ಪ್ರಚಾರ ಹಾಗೂ ರೋಡ್ ಷೋ ನಡೆಸಿ ಅವರು ಮಾತನಾಡಿದರು.

      ಕೆಲ ತಿಂಗಳ ಹಿಂದೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿಯು ಈ ಲೋಕಸಭಾ ಚುನಾವಣೆಯಲ್ಲೂ ಸೋಲಿನ ಭೀತಿಯಿಂದ ಕಂಗೆಟ್ಟಿದೆ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪ್ರಭಾವ ಬಳಸಿ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಇತರೆ ಸ್ವಯತ್ತ ಸಂಸ್ಥೆಗಳನ್ನು ದುರುಪಯೋಗ ಪಡೆಸಿಕೊಳ್ಳುವ ಮೂಲಕ ವಿರೋಧ ಪಕ್ಷಗಳ ನಾಯಕರು, ಅಭ್ಯರ್ಥಿಗಳ ನಿವಾಸಗಳ ಮೇಲೆ ದಾಳಿ ನಡೆಸಿ, ಬೆದರಿಸುವ ತಂತ್ರ ಅನುಸರಿಸುತ್ತಿದೆ ಎಂದು ದೂರಿದರು.

     ಅಭಿವೃದ್ಧಿ ಎಂದರೆ ಏನೆಂದು ತಿಳಿಯದ ಬಿಜೆಪಿಗೆ ತಕ್ಕಪಾಠ ಕಲಿಸಲು ಇದು ಸದಾವಕಾಶವಾಗಿದ್ದು, ಈ ಚುನಾವಣೆಯಲ್ಲಿ ಮತದಾರರು ಅಭಿವೃದ್ಧಿಯ ಲವಲೇಷವೂ ಗೊತ್ತಿಲ್ಲದ ಬಿಜೆಪಿ ತಕ್ಕ ಪಾಠ ಕಲಿಸಬೇಕೆಂದು ಕರೆ ನೀಡಿದರು.

       ಸಬ್‍ಕೆ ಸಾತ್ ಸಬ್‍ಕೆ ವಿಕಾಸ್, ಅಚ್ಚೇದಿನ್ ತರುತ್ತೇವೆಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿಯು ಅಧಿಕಾರಕ್ಕೆ ಬಂದಾದ ಮೇಲೆ ಕೊಟ್ಟ ಮಾತು ಮರೆತು, ಸೈನಿಕರು ಮಾಡಿದ ಸಾಧನೆಯನ್ನು ಬಿಜೆಪಿಯೇ ಮಾಡಿದೆ ಎಂಬುದಾಗಿ ಬಿಂಬಿಸುವ ಮೂಲಕ ಸೈನಿಕರ ಹೆಸರು ಹೇಳಿ ಮತ ಕೇಳಲು ಹೊರಟಿದೆ ಎಂದ ಅವರು, ದೇಶಕ್ಕೆ ಮೋದಿ ಕೊಡುಗೆ ಶೂನ್ಯವಾಗಿದ್ದು, ಅದೇ ರೀತಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೂ ಸಹ ಸಂಸದರ ಕೊಡುಗೆ ಶೂನ್ಯವಾಗಿದೆ ಎಂದು ಪುನರುಚ್ಚರಿಸಿದರು.

      ಬಡಜನರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದ ಮೋದಿ, ಇಂದು ನಾನು ಹೇಳೇ ಇಲ್ಲ ಎನ್ನುತ್ತಿದ್ದಾರೆ. 70 ಲಕ್ಷ ಕೋಟಿ ಖರ್ಚು ಮಾಡಿ ಗಂಗಾ ನದಿ ಶುದ್ಧೀಕರಣ ಮಾಡಲಾಗಿದೆ ಎಂದು ಬೊಗಳೆ ಬಿಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಕರಣವೇ ಛೀಮಾರಿ ಹಾಕಿದೆ. ಆದರೂ ಸುಳ್ಳು ಹೇಳುವುದನ್ನು ಬಿಟ್ಟಿಲ್ಲ ಎಂದು ಆರೋಪಿಸಿದರು.

       ಇದೇ ವೇಳೆ ನಾಗನೂರು ಗ್ರಾಮದಲ್ಲಿ ಸಂಸದರಿಗೆ ಗ್ರಾಮದ ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದ ಕಾರ್ತಿಕ್ ಎಂಬ ಯುವಕನನ್ನು ಸನ್ಮಾನಿಸಿದ ಶಾಮನೂರು ಶಿವಶಂಕರಪ್ಪನವರು ಈ ಯುವಕನಂತೆ ಪ್ರಶ್ನಿಸುವ ಗುಣವನ್ನು ಬೆಳೆÀಸಿಕೊಳ್ಳಬೇಕೆಂದು ಕರೆ ನೀಡಿ ಅಭಿವೃದ್ಧಿ ಮಾಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು.

      ಚುನಾವಣಾ ಪ್ರಚಾರದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ಎಪಿಎಂಸಿ ಅಧ್ಯಕ್ಷ ಬಿಸಲೇರಿ ಈರಣ್ಣ, ಮಾಜಿ ಉಪಾಧ್ಯಕ್ಷ ಹದಡಿ ಹಾಲಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತುರ್ಚಘಟ್ಟದ ಬಸವರಾಜಪ್ಪ, ಕುಕ್ಕವಾಡ ಮಲ್ಲೇಶಪ್ಪ, ಮುದಹದಡಿ ದಿಳ್ಳೆಪ್ಪ, ನಂದಿಗೌಡ್ರು, ಶಿರಮಗೊಂಡನಹಳ್ಳಿ ರುದ್ರೇಶ್, ತುರ್ಚಘಟ್ಟದ ರಿಯಾಜ್, ಜರೀಕಟ್ಟೆ ಹನುಮಂತಪ್ಪ, ಉಮಾದೇವಿ, ಮೌನೇಶ್, ವೆಂಕಟೇಶ್, ಶಿವನಗೌಡ, ನಾಗನೂರಿನ ಎನ್.ಡಿ.ಉಜ್ಜಪ್ಪ, ಗೌಡ್ರು ಶಶಿಕುಮಾರ್, ಮಹೇಶ್, ರಾಘವೇಂದ್ರ, ಆವರಗೆರೆ ಮಂಜು, ಎ.ಕೆ.ಚಂದ್ರಪ್ಪ, ಎ.ಕೆ.ನೀಲಪ್ಪ, ಎ.ಕೆ.ಗುಡ್ಡಪ್ಪ, ನಾಗಮ್ಮ ಕೇಶವಮೂರ್ತಿ ಬಡಾವಣೆಯ ಮಲ್ಲಿಕಾರ್ಜುನ್ ಸೇರಿದಂತೆ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here