ಹೈಕಮಾಂಡ್ ಗೆ ಸೋಲು ಗೆಲುವಿನ ವರದಿ ಒಪ್ಪಿಸಿದ ರಾಜ್ಯ ಬಿಜೆಪಿ …!!!

0
12

ಬೆಂಗಳೂರು

       ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಕನಿಷ್ಟ ಹದಿನೆಂಟರಿಂದ ಗರಿಷ್ಟ ಇಪ್ಪತ್ತೊಂದು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ರಾಜ್ಯ ಬಿಜೆಪಿ ಘಟಕ ಹೈಕಮಾಂಡ್ ವರಿಷ್ಟರಿಗೆ ವರದಿ ರವಾನಿಸಿದೆ.

      ಕಳೆದ ಲೋಕಸಭಾ ಚುನಾವಣೆಯಲ್ಲಿ ಹದಿನೇಳು ಸ್ಥಾನಗಳನ್ನು ಗೆದ್ದಿದ್ದೆವು.ಆದರೆ ಈಗಿನ ಪರಿಸ್ಥಿತಿಯಲ್ಲಿ ಕನಿಷ್ಟ ಹದಿನೆಂಟು ಸೀಟುಗಳನ್ನು ಗೆಲ್ಲುತ್ತೇವೆ.ಗರಿಷ್ಟ ಇಪ್ಪತ್ತೊಂದು ಸೀಟುಗಳನ್ನು ಗೆಲ್ಲುತ್ತೇವೆ ಎಂದು ಅದು ಹೇಳಿಕೊಂಡಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಬಾರಿ ಹದಿಮೂರು ಕ್ಷೇತ್ರಗಳ ಪೈಕಿ ಹತ್ತು ಕ್ಷೇತ್ರಗಳನ್ನು ನಾವು ಗೆದ್ದಿದ್ದೆವು.

        ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಗಳಿಸಿತ್ತು.ನಂತರ ಉಪಚುನಾವಣೆಯಲ್ಲಿ ನಾವು ಬಳ್ಳಾರಿ ಕ್ಷೇತ್ರವನ್ನು ಕಳೆದುಕೊಂಡೆವಾದರೂ ಈ ಬಾರಿ ಬಳ್ಳಾರಿಯಲ್ಲಿ ನಾವು ಗೆಲುವು ಗಳಿಸುವುದು ಶತ:ಸ್ಸಿದ್ದ.

      ಈ ಮಧ್ಯೆ ದಕ್ಷಿಣ ಕರ್ನಾಟಕದ ಹದಿನೈದು ಕ್ಷೇತ್ರಗಳಲ್ಲಿ ನಾವು ಕನಿಷ್ಟ ಎಂಟು ಕ್ಷೇತ್ರಗಳಲ್ಲಿ,ಗರಿಷ್ಟ ಹನ್ನೊಂದು ಕ್ಷೇತ್ರಗಳಲ್ಲಿ ಗೆಲುವು ಗಳಿಸುತ್ತೇವೆ.ಹೀಗಾಗಿ ನಮ್ಮ ಗಳಿಕೆಯ ಪ್ರಮಾಣ 18 ರಿಂದ 21 ಸ್ಥಾನಗಳಾಗಲಿವೆ ಎಂದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪೈಪೋಟಿ ಇದೆಯಾದರೂ ಕಳೆದ ಬಾರಿಗಿಂತ ಗೆಲುವಿನ ಅಂತರ ಕಡಿಮೆಯಾಗಬಹುದೇ ವಿನ: ಪಕ್ಷದ ಅಭ್ಯರ್ಥಿ ತೇಜಸ್ವಿ ಸೂರ್ಯ ಸೋಲುವ ಯಾವ ಲಕ್ಷಣವೂ ಕಾಣುತ್ತಿಲ್ಲ.

      ಒಂದು ವೇಳೆ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನೇನಾದರೂ ಕಣಕ್ಕಿಳಿಸಿದ್ದಿದ್ದರೆ ಪರಿಸ್ಥಿತಿ ಕಷ್ಟಕರವಾಗಬಹುದಿತ್ತು .ಆದರೆ ಈಗ ಕಾಂಗ್ರೆಸ್ ಪರವಾಗಿ ನಿಂತಿರುವ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಹಿಂದಿನಿಂದಲೂ ಜೆಡಿಎಸ್ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡವರಲ್ಲ.

       ಹಾಗೆಯೇ ಸ್ವಪಕ್ಷದ ಶಾಸಕರ ಜತೆಗೂ ಅವರ ಸಂಬಂಧ ಚೆನ್ನಾಗಿಲ್ಲ.ಅದರಲ್ಲೂ ಬೆಂಗಳೂರು ಮಹಾನಗರ ಪಾಲಿಕೆಯ ಮೇಲೆ ಹಿಡಿತ ಸಾಧಿಸುವ ವಿಷಯದಲ್ಲಿ ಬಿ.ಕೆ.ಹರಿಪ್ರಸಾದ್ ಗ್ಯಾಂಗ್ ಹಾಗೂ ಪಕ್ಷದಲ್ಲಿರುವ ಅವರ ವಿರೋಧಿ ಗ್ಯಾಂಗ್ ನಡುವೆ ದಶಕಗಳಿಂದ ವೈಮನಸ್ಯ ಇದ್ದೇ ಇದೆ.

      ಅದೇ ರೀತಿ ಕಳೆದ ಆರು ಬಾರಿ ಪಕ್ಷ ಗಳಿಸಿದ ನಿರಾಯಾಸ ಗೆಲುವಿನ ಜತೆಗೆ ಪ್ರಧಾನಿ ನರೇಂದ್ರಮೋದಿ ಪರವಾದ ಅಲೆ ಕೆಲಸ ಮಾಡುತ್ತದೆ.ಹೀಗಾಗಿ ಈ ಸೀಟು ನಮ್ಮದೆ.ಹಾಗೆಯೇ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನಡೆದರೂ ಗೆಲ್ಲುವ ಅವಕಾಶ ಡಿ.ವಿ.ಸದಾನಂದಗೌಡರಿಗೇ ಜಾಸ್ತಿ.

     ಈ ಸಾಧ್ಯತೆಯನ್ನು ಮನಗಂಡೇ ಮಾಜಿ ಪ್ರಧಾನಿ,ಜೆಡಿಎಸ್ ವರಿಷ್ಟ ಹೆಚ್.ಡಿ.ದೇವೇಗೌಡ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ನಿಲ್ಲುವ ತಮ್ಮ ಉದ್ದೇಶವನ್ನು ಕೈ ಬಿಟ್ಟು ತುಮಕೂರಿಗೆ ವಲಸೆ ಹೋದರು.

      ತುಮಕೂರಿನಲ್ಲಿ ಕಳೆದ ಬಾರಿ ಕಾಂಗ್ರೆಸ್‍ನ ಮುದ್ದ ಹನುಮೇಗೌಡ ಗೆದ್ದಿದ್ದರು.ಈ ಬಾರಿ ದೇವೇಗೌಡರಿಗೇ ಗೆಲುವಿನ ಅವಕಾಶ ಹೆಚ್ಚು.ಹೀಗಾಗಿ ಇಲ್ಲಿನ ಫಲಿತಾಂಶದಿಂದ ಬಿಜೆಪಿ ಹೊಸತಾಗಿ ಕಳೆದುಕೊಳ್ಳುವುದೇನೂ ಇಲ್ಲ.

      ಹೀಗಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡರು ಪವಾಡ ಮಾಡುವ ಸಾಧ್ಯತೆಗಳಿಲ್ಲ.ಯಾಕೆಂದರೆ ಕ್ಷೇತ್ರಕ್ಕೆ ಕಾಸ್ಮೋಪಾಲಿಟನ್ ಸ್ವರೂಪ ಇರುವುದರಿಂದ ಪ್ರಧಾನಿ ನರೇಂದ್ರಮೋದಿ ಅವರ ಅಲೆ ಪಕ್ಷಕ್ಕಿರುವ ಕೆಲ ಅಡ್ಡಿಗಳನ್ನು ನಿವಾರಿಸುತ್ತದೆ.

     ಈ ಮಧ್ಯೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕ್ಯಾಂಡಿಡೇಟ್ ಪ್ರಜ್ವಲ್ ರೇವಣ್ಣ ಗೆಲುವು ಗಳಿಸುವ ಲಕ್ಷಣ ಜಾಸ್ತಿ.ಶಿವಮೊಗ್ಗದಲ್ಲಿ ಪ್ರಬಲ ಪೈಪೋಟಿ ಇದೆಯಾದರೂ ಅಂತಿಮವಾಗಿ ಗೆಲುವಿನ ನಗೆ ಬೀರುವುದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಎಂದು ವರದಿ ಹೇಳಿದೆ.

      ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್‍ನ ವೀರಪ್ಪ ಮೊಯ್ಲಿ ಗೆಲುವು ಗಳಿಸಿದ್ದರು .ಕುಮಾರಸ್ವಾಮಿ ಅವರ ಸ್ಪರ್ಧೆಯಿಂದಾಗಿ ಬಿಜೆಪಿ ಕ್ಯಾಂಡಿಡೇಟ್ ಬಚ್ಚೇಗೌಡ ಸೋಲನುಭವಿಸಬೇಕಾಗಿ ಬಂದಿತ್ತು.ಆದರೆ ಈ ಬಾರಿ ಜೆಡಿಎಸ್ ಸ್ಪರ್ಧೆ ಇಲ್ಲದೆ ಇರುವುದರಿಂದ,ಬಚ್ಚೇಗೌಡರು ಭರ್ಜರಿ ಅಂತರದಲ್ಲಿ ಗೆಲುವು ಗಳಿಸುತ್ತಾರೆ ಎಂದು ವರದಿ ಹೇಳಿದೆ.

       ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರನಟ ಪ್ರಕಾಶ್ ರಾಜ್ ಸ್ಪರ್ಧಿಸಿರುವುದರಿಂದ ಕಾಂಗ್ರೆಸ್ ಮತಗಳು ಒಡೆಯುತ್ತವೆ.ಅದರ ಪರಿಣಾಮವಾಗಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರಿಗೆ ಲಾಭವಾಗುತ್ತದೆ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ.

         ಹೀಗಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿಯ ಭದ್ರ ನೆಲೆಯಾದ ಕರ್ನಾಟಕದಲ್ಲಿ ಕನಿಷ್ಟ ಹದಿನೆಂಟು,ಗರಿಷ್ಟ ಇಪ್ಪತ್ತೊಂದು ಸೀಟುಗಳನ್ನು ಪಕ್ಷ ಗೆಲ್ಲುತ್ತದೆ ಎಂದು ವರದಿ ಹೇಳಿರುವುದಾಗಿ ಉನ್ನತ ಮೂಲಗಳು ಹೇಳಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here