ಮೈತ್ರಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ ಬೋಗಸ್ ಐಟಿ ರೈಡ್ ಗಳು..!!

0
9

ಬೆಂಗಳೂರು

      ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕ್ಯಾಂಡಿಡೇಟುಗಳಿಗೆ ಹಣ ಕೊಡುವುದಾಗಿ ಭರವಸೆ ನೀಡಿದ ಕೆಲ ನಾಯಕರು ಇದೀಗ ಹಣ ಕೊಡುವ ಬದಲು ತಮ್ಮ ವಿರುದ್ದ ಐಟಿ ರೈಡು ನಡೆದಿದೆ ಎಂದು ಪುಕಾರು ಹಬ್ಬಿಸುತ್ತಿರುವ ಸಂಗತಿ ಮೈತ್ರಿಕೂಟದ ನಾಯಕರಿಗೆ ತಲೆನೋವಿನ ವಿಷಯವಾಗಿ ಪರಿಣಮಿಸಿದೆ.

     ಮೊದಲ ಹಂತದ ಚುನಾವಣಾ ಪ್ರಚಾರ ಇಂದು ಅಂತ್ಯವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ತೆರೆಯ ಹಿಂದೆ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುವುದು ಸಾಮಾನ್ಯವಾಗಿದ್ದು ಅಭ್ಯರ್ಥಿಯ ವೆಚ್ಚಕ್ಕಾಗಿ ಹಣ ನೀಡುವ ಕೆಲಸ ರಭಸದಿಂದ ನಡೆಯಬೇಕಿತ್ತು.

      ಈ ಸಂಬಂಧ ಮೈತ್ರಿಕೂಟದ ಕ್ಯಾಂಡಿಡೇಟ್‍ಗಳಲ್ಲಿ ಒಬ್ಬರಾದ,ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕೃಷ್ಣ ಭೈರೇಗೌಡರಿಗೆ ಚುನಾವಣಾ ವೆಚ್ಚಕ್ಕಾಗಿ ಹಣ ನೀಡುವುದಾಗಿ ಮೈತ್ರಿಕೂಟದ ನಾಯಕರಲ್ಲಿ ಒಬ್ಬರಾದ,ಮೈತ್ರಿ ಸರ್ಕಾರದಲ್ಲಿ ಸಚಿವರೂ ಆಗಿರುವ ಒಬ್ಬ ನಾಯಕರು ಹಿಂದೆಯೇ ಭರವಸೆ ನೀಡಿದ್ದರು.

     ಹೀಗಾಗಿ ಕೊಟ್ಟ ಮಾತಿನ ಪ್ರಕಾರ ತಮಗೆ ಹಣ ಕಳಿಸುವಂತೆ ಕೃಷ್ಣ ಭೈರೇಗೌಡರು ಹೇಳಿದ್ದರು.ಮೊದಲ ಬಾರಿ ಫೋನಿನಲ್ಲಿ ಮಾತನಾಡಿದಾಗ:ಸ್ವಲ್ಪ ಹೊತ್ತಿನಲ್ಲಿ ಹಣ ತಲುಪುತ್ತದೆ ಎಂದು ಹೇಳಿದ ಈ ಸಚಿವರು ನಿರ್ದಿಷ್ಟ ಸಮಯ ಕಳೆದರೂ ಹಣ ಕಳಿಸಲಿಲ್ಲ.ಈ ಸಂದರ್ಭದಲ್ಲಿ ಕೃಷ್ಣ ಭೈರೇಗೌಡರ ಆಪ್ತರು ಮತ್ತೆ ಫೋನಾಯಿಸಿದರೆ ಸಂಬಂಧ ಪಟ್ಟ ಸಚಿವರು ಫೋನ್ ರಿಸೀವ್ ಮಾಡಲೇ ಇಲ್ಲ.ಗಾಬರಿಗೊಂಡವರು ಪದೇ ಪದೇ ಫೋನಾಯಿಸಿದರೂ ನೋ ರೆಸ್ಪಾನ್ಸ್.

     ಅಂತಿಮವಾಗಿ ಅವರೇ ಬೇರೊಂದು ಮೊಬೈಲ್‍ನಿಂದ ಕರೆ ಮಾಡಿ:ಕೃಷ್ಣ ಭೈರೇಗೌಡರಿಗೆ ಹಣ ರವಾನಿಸಲು ರೆಡಿ ಮಾಡಿದ್ದ ವಾಹನವನ್ನು ಐಟಿ ಅಧಿಕಾರಿಗಳು ಜಫ್ತಿ ಮಾಡಿದ್ದು ಇದೇ ರೀತಿ ನನಗೆ ಸಂಬಂಧಿಸಿದ ಉದ್ಯಮಗಳ ವಿವಿಧ ಕೇಂದ್ರಗಳ ಮೇಲೆ ರೈಡು ನಡೆದಿದೆ.

      ಹೀಗಾಗಿ ಹಣ ಕಳಿಸಿಕೊಡಲು ನಾನೀಗ ಅಸಹಾಯಕನಾಗಿದ್ದು ಬೇರೆ ಯಾವುದಾದರೂ ಮೂಲಗಳಿಂದ ಹಣ ಕಳಿಸಿಕೊಡಬೇಕು ಎಂದರೂ ನಾನೇ ಐಟಿ ಅಬ್ಸರ್‍ವೇಷನ್‍ನಲ್ಲಿದ್ದೇನೆ.ಹೀಗಾಗಿ ಏನೇ ಮಾಡಲು ಹೋದರೂ ನನಗೆ ಆಪತ್ತು ಬರಬಹುದು ಎಂದು ಈ ಸಚಿವರು ವಿವರ ನೀಡಿದ್ದಾರೆ.

     ಆರಂಭದಲ್ಲಿ ಅವರು ಹೇಳಿದ್ದನ್ನು ನಿಜವೆಂದೇ ನಂಬಿದ ಕೃಷ್ಣಭೈರೇಗೌಡರ ಆಪ್ತರು ಅದನ್ನು ಕೃಷ್ಣಭೈರೇಗೌಡರಿಗೆ ವಿವರಿಸಿದ್ದಾರಾದರೂ ಕೊನೆಗೆ ಬೇರೆ ಮೂಲಗಳ ಮೂಲಕ ಪರೀಕ್ಷಿಸಿದರೆ ಸಂಬಂಧಪಟ್ಟ ಸಚಿವರು ಮೋಜು-ಮಸ್ತಿಯಲ್ಲಿ ತಲ್ಲೀನರಾಗಿದ್ದ ವಿಷಯ ತಿಳಿದಿದೆ.

      ಹೀಗಾಗಿ ಅವರ ಮೂಲಕ ಚುನಾವಣಾ ವೆಚ್ಚಕ್ಕಾಗಿ ಹಣ ಕೊಡಿಸುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿಯೊಬ್ಬರ ಬಳಿ ಕೃಷ್ಣಭೈರೇಗೌಡರು ವಿಷಯ ವಿವರಿಸಿದ್ದಾರೆ ಎಂದು ಮೂಲಗಳು ಹೇಳಿವೆ.ಶುರುವಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಹಲ ನಾಯಕರ ವಿರುದ್ದ ಐಟಿ ರೈಡು ನಡೆದಿದ್ದು ನಿಜವಾದರೂ ಇದೀಗ ಅದನ್ನೇ ನೆಪವಾಗಿಟ್ಟುಕೊಂಡು ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಹಣ ಕೊಡುವ ವಿಷಯದಲ್ಲಿ ಕೈ ಎತ್ತಲು ಹಲವರು ಮುಂದಾಗಿದ್ದಾರೆ.

        ಸಚಿವರು ಸೇರಿದಂತೆ ಹಲವರು ಇದಕ್ಕೆ ಮುಖ್ಯವಾಗಿ ಐಟಿ ಕಡೆ ಬೆರಳು ತೋರಿಸುತ್ತಿದ್ದು ಇದೀಗ ಐಟಿ ರೈಡು ನಡೆಯದೆಯೇ ಪಕ್ಷದ ನಾಯಕರು ಆಡುತ್ತಿರುವ ಈ ಆಟ ಮೈತ್ರಿಕೂಟದ ನಾಯಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.ಅದರಲ್ಲೂ ಮೊದಲ ಹಂತದ ಚುನಾವಣೆಗೆ ಕ್ಷಣ ಗಣನೆ ಆರಂಭವಾಗಿರುವ ಬೆನ್ನಲ್ಲಿ ಬಹುಮುಖ್ಯ ವಾಗಿರುವ ಅಂತಿಮ ಹಂತದ ಕಾರ್ಯಾಚರಣೆಗೆ ಆಗುತ್ತಿರುವ ಇಂತಹ ಅಡ್ಡಿಯಿಂದ ಹಲವು ಕ್ಷೇತ್ರಗಳಲ್ಲಿ ತಮಗೆ ಗಂಡಾಂತರ ಎದುರಾಗಬಹುದು ಎಂಬ ಆತಂಕಕ್ಕೆ ಒಳಗಾಗುವಂತೆ ಮಾಡಿದೆ ಎಂದು ಮೂಲಗಳು ಹೇಳಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here