ಸಭೆ ಬಹಿಷ್ಕರಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ

ಹರಪನಹಳ್ಳಿ:

    ಅರಣ್ಯ ಇಲಾಖೆ ಕೈಗೊಂಡ ಕಾಮಗಾರಿಯಲ್ಲಿ ಅವ್ಯವಹಾರದ ಆರೋಪ, ಸಭೆಗೆ ಬಾರದ ಅಧಿಕಾರಿಗಳು, ಉಪಾಧ್ಯಕ್ಷರು ಹಾಗೂ ಸದಸ್ಯರ ನಡುವೆ ಮಾತಿನ ಜಟಾಪಟಿ, ಸಭಾತ್ಯಾಗ ಮಾಡಿದ ಸದಸ್ಯರು, ಕೊನೆಗೂ ಮುಂದೂಡಲ್ಪಟ್ಟ ಸಭೆ.

      ಪಟ್ಟಣದ ತಾಲ್ಲೂಕು ಪಂಚಾಯಿತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆ ಮೇಲಿನ ಘಟನೆಗಳಿಗೆ ಸಾಕ್ಷಿಯಾಯಿತು.

     ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಮೇಲೆ ಅರಣ್ಯ ಇಲಾಖೆಯಿಂದ ಲಂಚದ ಆರೋಪ ಕೇಳಿ ಬರುತ್ತಿದೆ ಎಂದು ಸದಸ್ಯ ವೀರಣ್ಣ ಕೆಂಡಮಂಡಲರಾದರು. ಸಭೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬರಬೇಕಿತ್ತು. ಸಭೆಗೆ ಬಾರದೆ ನುಣುಚಿಕೊಂಡಿದ್ದಾರೆ ಎಂದು ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ, ಲೋಕಪಯೋಗಿ ಇಲಾಖೆ ಅಧಿಕಾರಿಗಳು ಸಭೆ ಬರುವವರೆಗೂ ಸಭೆ ಮುಂದೂಡುವಂತೆ ಪಟ್ಟುಹಿಡಿದರು.

      ಸದಸ್ಯ ಮೈದೂರು ರಾಮಪ್ಪ ಮಾತನಾಡಿ, ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಹುಳುಕುಗಳಿದ್ದಾಗ ತಾವು ಬರದೇ ಸಹ ಸಿಬ್ಬಂದಿ ಕಳಿಸುತ್ತಾರೆ ಎಂದರು. ಧ್ವನಿಗೂಡಿಸಿದ ಕಂಚಿಕೇರಿ ವೀರಣ್ಣ, ಅರಣ್ಯ ಇಲಾಖೆಯವರು ಮಾಡಿದ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಡಬೇಕು. ಅವರು ಸಭೆಗೆ ಬಂದು ಸಂಪೂರ್ಣ ಮಾಹಿತಿ ನೀಡುವವರಿಗೂ ನಾವು ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಆಕ್ರೋಶದಿಂದ ಹೊರಗೆ ಹೆಜ್ಜೆ ಹಾಕಿದರು.

     ತಕ್ಷಣ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಮಂಜ್ಯಾ ನಾಯ್ಕ, ‘ದಯವಿಟ್ಟು ಸಭೆಯಲ್ಲಿ ಕುಳಿತುಕೊಳ್ಳುವಂತೆ ಸದಸ್ಯರಿಗೆ ಕೈಮುಗಿದು ಮನವಿ ಮಾಡಿದರೂ ಸೊಪ್ಪು ಹಾಕದ ಸದಸ್ಯರು ಹೊರ ನಡೆದರು.

     ಕೆಲ ಸದಸ್ಯರು ಎದ್ದು ಹೊರ ನಡೆದರೆ, ಶಿಂಗ್ರಿಹಳ್ಳಿ ನಾಗರಾಜ, ಬಸಪ್ಪ, ಐರಣಿ ಪ್ರೇಮಾ ಅವರು, ‘ನಾವಿದ್ದು ಏನು ಮಾಡುವುದು’ ಎಂದು ಪ್ರಶ್ನಿಸಿದರು. ಆಗ ಉಪಾಧ್ಯಕ್ಷ ಮಂಜ್ಯನಾಯ್ಕ ಅವರು ‘ವಿರೋಧ ಪಕ್ಷದವರು ಈ ರೀತಿ ಮಾಡುವುದು ಸಹಜ. ನೀವು ಯಾಕೆ ಹೋಗುತ್ತಿರಾ? ಈ ಬಗ್ಗೆ ಚರ್ಚೆ ಮಾಡಬೇಕು. ಸಭೆ ಬಹಿಷ್ಕರಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲಿ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡೋಣ, ಶಾಸಕರ ಬಳಿ ಚರ್ಚಿಸೋಣ’ ಎಂದು ತಿಳಿಸಿದರು.

    ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಮಾತನಾಡಿ, ‘ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇಂದಿನ ಸಭೆಗೆ ಬಂದಿರಲಿಲ್ಲ. ದೂರವಾಣಿ ಮೂಲಕವಾದರೂ ವಿಷಯ ತಿಳಿಸುವ ಸೌಜನ್ಯ ಅವರಿಗಿಲ್ಲ. ಇದು ಬೇಸರದ ಸಂಗತಿ. ಜನಪ್ರತಿನಿಧಿಗಳು, ಅಧಿಕಾರಿಗಳು ಹೊಂದಿಕೊಂಡು ಹೋದಾಗ ಅಭಿವೃದ್ಧಿ ಕೆಲಸ ಕೈಗೊಳ್ಳಲು ಸಾಧ್ಯ. ಮುಂದಿನ ದಿನಗಳಲ್ಲಾದರೂ ಅಧಿಕಾರಿಗಳು ಸಭೆಗೆ ಬಂದು ಸೂಕ್ತ ಮಾಹಿತಿ ಮಂಡಿಸಬೇಕು ಎಂದು ಹೇಳಿದರು.

     ಸದಸ್ಯರ ಸಭಾತ್ಯಾಗದಿಂದ ಸಭೆ ವಿಫಲಗೊಂಡಿದ್ದರಿಂದ ಅಧ್ಯಕ್ಷರು ಸಭೆಯನ್ನು ಮುಂದೂಡಿ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.ಇದಕ್ಕೂ ಮೊದಲು ಆರೋಗ್ಯ, ಆಹಾರ, ಬೆಸ್ಕಾಂ, ಸಮಾಜ ಕಲ್ಯಾಣ ಇಲಾಖೆ, ಕುಡಿಯುವ ನೀರು, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಚರ್ಚೆ ನಡೆಯಿತು.ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್‍ರೆಡ್ಡಿ, ಇಓ ಆರ್.ತಿಪ್ಪೆಸ್ವಾಮಿ, ಯೋಜನಾಧಿಕಾರಿ ವಿಜಯಕುಮಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap