ಜನನಿಬಿಡ ಪ್ರದೇಶದ ಕಣ್ಗಾವಲಿಗೆ ‘BUTTERFLY’ ಡ್ರೋನ್ …!!!!

ಬೆಂಗಳೂರು

         ಸಾರ್ವಜನಿಕ ಕಾರ್ಯಕ್ರಮಗಳು, ಉತ್ಸವಗಳು ನಡೆದಾಗ ಭದ್ರತೆಯ ಕಣ್ಗಾವಲು ಇಡುವುದು ಪೊಲೀಸರಿಗೆ ಬಹುದೊಡ್ಡ ಸವಾಲಿನ ಕೆಲಸ. ಅಲ್ಲಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದರೂ, ಅದರ ವ್ಯಾಪ್ತಿ, ವಿಸ್ತಾರ ಸೀಮಿತವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನನಿಬಿಢ ಪ್ರದೇಶದ ಮೇಲೆ ಕಣ್ಗಾವಲು ಇಡುವ ಪೊಲೀಸರ ಸವಾಲಿಗೆ ಉತ್ತರವಾಗಿ ಇಲ್ಲೊಂದು ಮಿನಿ ಡ್ರೋನ್ ಕಣ್ಗಾವಲು ಸಿದ್ಧವಾಗಿದೆ.

        ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ 2019ರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಈ ಮಿನಿ ಡ್ರೋನ್ ಅನ್ನು ಪ್ರದರ್ಶನಕ್ಕಿಡಲಾಗಿದೆ. ಡ್ರೋನ್ ಮಾದರಿಯಲ್ಲಿ ನೆಲದಿಂದ ಚಿಟ್ಟೆಯಂತೆ 100 ಮೀಟರ್ ಎತ್ತರಕ್ಕೆ ಹಾರಿ ಸುಮಾರು 2 ಕಿಮಿ ವರೆಗಿನ ಚಟುವಟಿಕೆಗಳ ಮೇಲೆ ಕಣ್ಣಿಟ್ಟು ಖಚಿತವಾಗಿ ಸೆರೆಹಿಡಿಯುವ ಶಕ್ತಿ ಹೊಂದಿರುವ ಇದಕ್ಕೆ ‘ಪತಂಗ’ ಎಂದು ಹೆಸರಿಡಲಾಗಿದೆ.

         ಸದ್ಯ ಈ ಉಪಕರಣವನ್ನು ಭಾರತ್ ಎಲೆಕ್ಟ್ರಾನಿಕ್ ಲಿ. (ಬಿಇಎಲ್) ಸಂಸ್ಥೆ ಖರೀದಿಸಿದ್ದು, ಶೀಘ್ರದಲ್ಲೇ ಸೇನೆ ಹಾಗೂ ಪೊಲೀಸ್ ಪಡೆಯಲ್ಲಿ ಇದನ್ನು ಅಳವಡಿಸುವ ಸಾಧ್ಯತೆಯಿದೆ. ಪತಂಗದ ಕುರಿತು ಮಾಹಿತಿ ನೀಡಿದ ಚೆನ್ನೈನ ಎಂಐಟಿ ಕಾಲೇಜಿನ ಯೋಜನಾ ತಂತ್ರಜ್ಞ ರುಶೇಂದರ್, ತಮಿಳುನಾಡು ಸರ್ಕಾರದ ಅನುದಾನದೊಂದಿಗೆ ಎಂಐಟಿ ಕಾಲೇಜಿನಲ್ಲಿ ಈ ಕಣ್ಗಾವಲು ಉಪಕರಣವನ್ನು ತಯಾರಿಸಲಾಗಿದೆ. ಇದರಲ್ಲಿ ಥರ್ಮಲ್ ಕ್ಯಾಮರಾ, ಡೇ ನೈಟ್ ಕ್ಯಾಮೆರಾ ಸೇರಿ ಬೇಡಿಕೆಗನುಸಾರ ಹಲವು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

        ಇದು ವಿದ್ಯುತ್ ಆಧಾರಿತ ಯಂತ್ರವಾಗಿದ್ದು, 250 ವ್ಯಾಟ್ ಸಾಮರ್ಥ್ಯ ದ ವಿದ್ಯುತ್ ನೆರವಿನಿಂದ 24 ಗಂಟೆಗಳ ಕಾಲ ನಿರಂತರ ಕಾರ್ಯ ನಿರ್ವಹಿಸುವ ಕ್ಷಮತೆ ಹೊಂದಿದೆ. ವಿದ್ಯುತ್ ವ್ಯತ್ಯಯವಾದಾಗ ಉಪಕರಣ ನೆಲಕ್ಕುರಳದಂತೆ ತಡೆಯಲು ಅಗತ್ಯವಿರುವ ಬ್ಯಾಟರಿ ವ್ಯವಸ್ಥೆ ಕೂಡ ಇದಕ್ಕೆ ನೀಡಲಾಗಿದೆ ಎಂದರು.

        8.4 ಕೆಜಿ ತೂಕವಿರುವ ಈ ಮಿನಿ ಡ್ರೋನ್ ಆಗಸದಲ್ಲಿದ್ದಾಗ, ನೆಲದಲ್ಲಿ ಕುಳಿತು ಕಂಪ್ಯೂಟರ್ ಮಾದರಿಯ ಉಪಕರಣದಿಂದ ಅದನ್ನು ನಿಯಂತ್ರಿಸಬಹುದಾಗಿದೆ. ವಿಶೇಷವೆಂದರೆ, ಇದು ಎಲ್ಲ ಬಗೆಯ ಹವಾಮಾನದಲ್ಲಿ ಕೂಡ ಕಾರ್ಯನಿರ್ವಹಿಸಲಿದೆ. ಇದರಲ್ಲಿ ತನ್ನ ಮಿತಿಯಲ್ಲಿ ನಿಗದಿಪಡಿಸಿದ ಗುರಿಯನ್ನು ಬೆನ್ನತ್ತಿ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ.

       ಇದರ ಬೆಲೆ ಸುಮಾರು 70ರಿಂದ 80 ಲಕ್ಷ ರೂ. ಎಂದು ಕೂಡ ಅಂದಾಜಿಸಲಾಗಿದೆ. ತಮಿಳುನಾಡಿನ ಪೊಲಿಸ್ ಇಲಾಖೆಯಲ್ಲಿ ಇದನ್ನು ಅಳವಡಿಸಲಾಗಿದೆ. ಇತರ ರಾಜ್ಯಗಳಿಂದ ಕೂಡ ಬೇಡಿಕೆಯಿದೆ. ಇದರೊಂದಿಗೆ, ಸುಮಾರು 5 ಕಿಮಿ ದೂರ ಆಗಸದಲ್ಲಿ ಚಲಿಸಿ ದೃಶ್ಯಗಳನ್ನು ಸೆರೆಹಿಡಿಬಲ್ಲ ಕಣ್ಗಾವಲು ಉಪಕರಣವನ್ನು ಕೂಡ ನಿರ್ಮಿಸಲಾಗಿದ್ದು, ಬಿಇಎಲ್ ಸಂಸ್ಥೆಗೆ ನೀಡಲಾಗಿದೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap