ಪ್ರಕರಣ ವಾಪಾಸ್ ಪಡೆಯದೇ ಇದ್ದಲ್ಲಿ ಕಚೇರಿ ಮುಂದೆ ಪ್ರತಿಭಟನೆ ಎಚ್ಚರಿಕೆ

0
20

ಚಳ್ಳಕೆರೆ

        ಕಳೆದ 63 ವರ್ಷಗಳಿಂದ ನಾಡ ಹಬ್ಬವಾದ ಕನ್ನಡ ರಾಜ್ಯೋತ್ಸವವನ್ನು ಎಲ್ಲಾ ಕನ್ನಡಿಗರೂ ಆತ್ಮವಿಶ್ವಾಸದಿಂದ ಆಚರಣೆ ಮಾಡುತ್ತಿದ್ದು, ಯಾವ ಸಂದರ್ಭದಲ್ಲೂ ಸಹ ಯಾವುದೇ ರೀತಿಯ ಅಡ್ಡಿ ಆತಂಕಗಳು ಎದುರಾಗದೆ ವೈಭವದ ರಾಜ್ಯೋತ್ಸವನ್ನು ಆಚರಣೆ ಮಾಡುತ್ತಾ ಬಂದಿದ್ದು, ನ.30ರ ಇಲ್ಲಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಿಜೆ ಬಳಕೆಯ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ ಪೊಲೀಸ್ ಇಲಾಖೆ ದೂರು ದಾಖಲು ಮಾಡಿರುವುದನ್ನು ಕರ್ನಾಟಕ ರಕ್ಷಣಾವೇದಿಕೆ ಜಿಲ್ಲಾಧ್ಯಕ್ಷ ರಮೇಶ್ ಖಂಡಿಸಿದ್ದಾರೆ.

       ಮಂಗಳವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚಳ್ಳಕೆರೆ ತಾಲ್ಲೂಕು ಘಟಕ ನ.30ರಂದು ಇಲ್ಲಿನ ಶ್ರೀವಾಲ್ಮೀಕಿ ವೃತ್ತದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನೂರಾರು ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ಹಿನ್ನೆಲ್ಲೆಯಲ್ಲಿ ನಗರ ಪ್ರಮುಖ ರಸ್ತೆಗಳಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಅಭಿಮಾನಿಗಳು ಮೆರವಣಿಗೆಯಲ್ಲಿದ್ದರು.

        ಮೆರವಣಿಗೆಯಲ್ಲಿ ಡಿಜೆ ಬಳಸುವ ಬಗ್ಗೆ ವೇದಿಕೆಯ ತಾಲ್ಲೂಕು ಅಧ್ಯಕ್ಷರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದು, ಕೇವಲ ಎರಡು ಬಾಕ್ಸ್ ಉಪಯೋಗಿಸಲು ಅನುಮತಿ ನೀಡಿದ್ದರು ಎನ್ನಲಾಗಿದೆ. ಆದರೆ, ಜನರ ಉತ್ಸಾಹವನ್ನು ಕಂಡ ಶಾಸಕ ಟಿ.ರಘುಮೂರ್ತಿ ಕನ್ನಡಾಭಿಮಾನಿಗಳ ಸಂತೋಷಕ್ಕಾಗಿ ಸಂಪೂರ್ಣ ವ್ಯವಸ್ಥೆಯಲ್ಲಿ ಡಿಜೆಯನ್ನು ಉಪಯೋಗಿಸುವಂತೆ ಅನುಮತಿ ನೀಡುವಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದರು. ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಸಹ ಅನುಮನತಿ ನೀಡುವಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರವಾಣಿಯಲ್ಲಿ ಮಾತನಾಡಿದ್ದರು ಎನ್ನಲಾಗಿದೆ.

         ಶಾಸಕ ಟಿ.ರಘುಮೂರ್ತಿಯವರೇ ಜಿಲ್ಲಾ ರಕ್ಷಣಾಧಿಕಾರಿಗಳು ಒಪ್ಪಿಗೆ ನೀಡಿದ್ದು ಡಿ.ಜೆ.ಯನ್ನು ಉಪಯೋಗಿಸುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ ಹಿನ್ನೆಲ್ಲೆಯಲ್ಲಿ ಡಿಜೆ ಸಹ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ಆ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಮತ್ತು ಪಿಎಸ್‍ಐ ಕೆ.ಸತೀಶ್‍ನಾಯ್ಕ, ಎನ್.ಗುಡ್ಡಪ್ಪ ಇವರುಗಳು ಮೆರವಣಿಗೆಯಲ್ಲಿ ಡಿಜೆ ಉಪಯೋಗಿಸದಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.

         ಆದರೆ, ಅನುಮತಿ ನೀಡದೇ ಡಿಜೆ ಉಪಯೋಗಿಸಿದ್ದನ್ನು ಮನಗಂಡ ಜಿಲ್ಲಾ ರಕ್ಷಣಾಧಿಕಾರಿಗಳು ಈ ಬಗ್ಗೆ ಕಾನೂನು ಪ್ರಕಾರ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ ಹಿನ್ನೆಲ್ಲೆಯಲ್ಲಿ ಪಿಎಸ್‍ಐ ಕೆ.ಸತೀಶ್‍ನಾಯ್ಕ ರಕ್ಷಣಾವೇದಿಕೆ ತಾಲ್ಲೂಕು ಅಧ್ಯಕ್ಷ ಟಿ.ಜೆ.ವೆಂಕಟೇಶ್(ಸ್ವಪ್ನ), ಡಿಜೆ ಮ್ಯಾನೇಜರ್ ಮುದ್ದುರಾಜ್, ಧ್ವನಿವರ್ಧಕ ಮಾಲೀಕ ಗಾಂಧಿರಾವ್ ಮತ್ತು ಟ್ಯ್ರಾಕ್ಟರ್ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿದ್ಧಾರೆ.

         ಈ ಬಗ್ಗೆ ಸ್ವಷ್ಟಣೆ ನೀಡಿದ ಜಿಲ್ಲಾಧ್ಯಕ್ಷರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಎಲ್ಲಾ ಕನ್ನಡಿಗರ ಆತ್ಮಾಭಿಮಾನದ ಸಂಕೇತವಾಗಿದ್ದು ಇದರ ಆಚರಣೆ ಯಾವುದೇ ರೀತಿಯ ಅಡ್ಡಿಯನ್ನು ಸಂಘಟನೆ ಸಹಿಸುವುದಿಲ್ಲ. ರಾಜ್ಯದಲ್ಲಿ ಸುಮಾರು 70 ಲಕ್ಷ ಸಂಖ್ಯೆಯ ರಕ್ಷಣಾ ವೇದಿಕೆಯ ಸದಸ್ಯರು ಮತ್ತು ಕಾರ್ಯಕರ್ತರು ಇದ್ಧಾರೆ.ಜಿಲ್ಲಾ ರಕ್ಷಣಾಧಿಕಾರಿಗಳು ಬಗ್ಗೆ ಯಾವುದೇ ರೀತಿ ವಿಚಾರಣೆ ನಡೆಸದೆ ಸಂಘಟನೆಯ ಮೇಲೆ ಕಾನೂನು ಕ್ರಮ ಕೈಗೊಂಡಿರುವುದು ಆತಂಕದ ಸಂಗತಿಯಲ್ಲದೆ, ಇದು ಎಲ್ಲಾ ಕನ್ನಡಿಗರ ಮನಸ್ಸಿಗೆ ಗಾಸಿಯಾಗಿದೆ. ಗಂಡುಮೆಟ್ಟಿನ ನಾಡು ಚಿತ್ರದುರ್ಗದ ನೆಲದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅಡ್ಡಿ ಉಂಟು ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಜಿಲ್ಲಾ ರಕ್ಷಣಾಧಿಕಾರಿಗಳು ಪ್ರಕರಣವನ್ನು ವಾಪಾಸ್ ಪಡೆಯದೇ ಇದ್ದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

         ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಜೆ.ವೆಂಕಟೇಶ್, ಹೊಳಲ್ಕೆರೆ ಅಧ್ಯಕ್ಷ ಕಿರಣ್‍ಯಾದವ್, ಮೊಳಕಾಲ್ಮೂರು ಘಟಕದ ಅಧ್ಯಕ್ಷ ನಾಗರಾಜು, ಹೊಸದುರ್ಗ ಘಟಕದ ಅಧ್ಯಕ್ಷ ಲೋಕೇಶ್, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‍ಗೌಡ, ವೈ.ಪ್ರಕಾಶ್, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಜಯಲಕ್ಷ್ಮಿ, ವಳ್ಳಿಪ್ರಕಾಶ್, ನಿಸರ್ಗಗೋವಿಂದರಾಜು, ಮೋಹನ್, ಕೆ.ಎಂ.ಜಗದೀಶ್, ಶ್ರೀನಿವಾಸ್, ವಿದ್ಯಾರ್ಥಿ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here