ಶ್ರೀ ಛಾಯಾನಂದನ ಶನೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ತಿಪಟೂರು 

        ತಾಲ್ಲೂಕಿನ ನೊಣವಿನಕೆರೆ ಹೋಬಳಿ ಆಲ್ಬೂರು-ರಂಗನಹಳ್ಳಿಯ ಶ್ರೀ ಛಾಯಾನಂದನ ಶನೇಶ್ವರ ಜಾತ್ರೆಯು ಇದೇ ಫೆಬ್ರವರಿ 20 ರಿಂದ 23 ರವರೆಗೆ ಲಕ್ಷಾಂತರ ಜನರ ಸಮ್ಮುಖದಲ್ಲಿ ವೈಭವದಿಂದ ನಡೆಯುತ್ತಿದ್ದು ಎಂದು ಶ್ರೀ ಶನೇಶ್ವರ ಸ್ವಾಮಿ ಸೇವಾ ಸಮಿತಿಯ ಸದಸ್ಯ ಎ.ಬಿ.ಚಂದ್ರಶೇಖರ್ ತಿಳಿಸಿದರು.

       ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಆಲ್ಬೂರು-ರಂಗನಹಳ್ಳಿಯಲ್ಲಿ ಶ್ರೀ ಛಾಯಾನಂದನ ಶನೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎ.ಬಿ.ಚಂದ್ರಶೇಖರ್ ಶ್ರೀ ಶನೇಶ್ವರಸ್ವಾಮಿಯ ಶ್ರೀ ಆಂಜನೇಯಸ್ವಾಮಿ, ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರಿಯವರ 15 ನೇ ವರ್ಷದ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿದ್ದು ಮಹಾ ಮಹಿಮಾನ್ವಿತನ ಜಾತ್ರೆಗೆ ಸುತ್ತಮುತ್ತಲ ಹಳ್ಳಿಗಳಾದ ಆಲ್ಬೂರು, ರಂಗನಹಳ್ಳಿ, ಬಸವನಹಳ್ಳಿ, ಮಾಕನಹಳ್ಳಿ, ಸಾದರಹಳ್ಳಿ ಗೊಲ್ಲರಹಟ್ಟಿ, ನೊಣವಿನಕೆರೆ ಮತ್ತು ರಾಜ್ಯದಾದ್ಯಂತದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅವರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ ಎಂದರು.

      ತಾಲೂಕಿನ ರಂಗನಹಳ್ಳಿಯ ಶ್ರೀ ಶನೇಶ್ವರ ಕ್ಷೇತ್ರದಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಿಂದ ಈ ವರ್ಷವೂ ಸಹ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನಡೆಯಲಿದ್ದು, ಫೆ.20ರಂದು ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಮಲ್ಲಾಘಟ್ಟ ಕ್ಷೇತ್ರದಲ್ಲಿ ಗಂಗಾಸ್ನಾನ. ಫೆ. 21ರಂದು ಸುತ್ತಮುತ್ತಲ ಗ್ರಾಮಗಳಲ್ಲಿ ಶ್ರೀ ಸ್ವಾಮಿಯವರ ಉತ್ಸವವು ವಿವಿಧ ಜಾನಪದ ಕಲಾತಂಡಗಳೊಂದಿಗೆ ನಡೆಯಲಿದ್ದು, ಅಂಕುರಾರ್ಪಣೆ, ಬಿಲ್ವಾರ್ಚನೆ, ಗಣಪತಿ ಹೋಮ, ನವಗ್ರಹ ಹೋಮ, ಕುಂಭ ಸ್ಥಾಪನೆ ಮತ್ತಿತರರ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.

       ಫೆ. 22ರಂದು ಶ್ರೀಸ್ವಾಮಿಯವರಿಗೆ ಅಭಿಷೇಕ, ವಿಶೇಷ ಅಲಂಕಾರ, ಅಗ್ನಿಕುಂಡ ಪ್ರವೇಶ, ಬ್ರಹ್ಮಾಂಡ ಗುರೂಜಿ ಶ್ರೀ ನರೇಂದ್ರ ಬಾಬು ಶರ್ಮಾಜಿ ಭಾಗವಹಿಸಲಿದ್ದಾರೆ. ಫೆ. 23ರ ಶನಿವಾರ ಧಾರ್ಮಿಕ ಸಮಾರಂಭ ನಡೆಯಲಿದ್ದು, ಆದಿಚುಂಚುನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ, ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭದೇಶಿಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿ ಡಾ. ಶ್ರೀ ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಹಾಗೂ ಸಣ್ಣ ಕೈಗಾರಿಕಾ ಸಚಿವ ಶ್ರೀನಿವಾಸ್, ಶಾಸಕರಾದ ಬಿ.ಸಿ. ನಾಗೇಶ್, ಮಸಾಲೆ ಜಯರಾಮ್ ಮತ್ತು ಚಲನಚಿತ್ರ ನಟರಾದ ರಕ್ಷಿತಪ್ರೇಮ್, ಧರ್ಮ, ಪ್ರಶಾಂತ್, ದೊಡ್ಡಣ್ಣ, ಡಿಂಗ್ರಿ ನಾಗರಾಜ್ ಮತ್ತಿತರ ಹಾಸ್ಯ ಕಲಾವಿದರು ಭಾಗವಹಿಸಲಿದ್ದಾರೆ.

       ಭಕ್ತರಿಗೆ ದಾಸೋಹದ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕೆಂದು ಚಂದ್ರಶೇಖರ್ ಮನವಿ ಮಾಡಿದರು.ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಶನೇಶ್ವರ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಎ.ಸಿ.ಶಂಕರಪ್ಪ, ಉಪಾಧ್ಯಕ್ಷ ಎ.ಆರ್ ಮಹಾಲಿಂಗಪ್ಪ, ಕಾರ್ಯದರ್ಶಿ ನಂಜಪ್ಪ, ಸಹಕಾರ್ಯದರ್ಶಿ ಉಮೇಶ್, ಖಜಾಂಚಿ ಮೋಹನ್, ಯಧುಕುಮಾರ್ ಮುಂತಾದವರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap