ಆಯೋಗದ ಮುಂದೆ ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಮಕ್ಕಳು

ಚಿತ್ರದುರ್ಗ

    ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಉತ್ತಮ ಕಟ್ಟಡ, ಕಾಂಪೌಂಡ್, ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಶಾಲಾ ಮಕ್ಕಳ ಒಕ್ಕೊರಲ ಮನವಿ. ನಮ್ಮ ಸಹಪಾಠಿ ವಿದ್ಯಾರ್ಥಿನಿಯರು ಬಾಲ್ಯ ವಿವಾಹಕ್ಕೆ ಒಳಗಾಗಿ, ಭವಿಷ್ಯ ಕಳೆದುಕೊಳ್ಳುತ್ತಿದ್ದು, ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆ.

        ಬಾಲ್ಯ ವಿವಾಹವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ವಿದ್ಯಾರ್ಥಿನಿಯರ ಕಳಕಳಿಯ ಒತ್ತಾಯ. ಇದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರದಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸ್ವಯಂ ಸೇವಾ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಮಕ್ಕಳ ಹಕ್ಕುಗಳು ಹಾಗೂ ವಿಕಲಚೇತನ ಮಕ್ಕಳಿಗೆ ಇರುವ ಸಮಸ್ಯೆಗಳು ಮತ್ತು ಅದರ ಪರಿಣಾಮಗಳ ಕುರಿತ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಬಹುತೇಕ ಮಕ್ಕಳಿಂದ ಸಲ್ಲಿಕೆಯಾದ ಒಕ್ಕೊರಲ ಮನವಿಯಾಗಿತ್ತು.

ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಮಕ್ಕಳು : ಐನಳ್ಳಿ ಕುರುಬರಹಟ್ಟಿಯ ವೀರೇಶ್ ಎನ್ನುವ ವಿದ್ಯಾರ್ಥಿ ಮಾತನಾಡಿ, ಶಾಲೆಗೆ 7ಎಕರೆ ಆವರಣವಿದೆ. ಆದರೆ ಕಾಂಪೌಂಡ್ ಇಲ್ಲ. ಶಾಲೆ ಮುಗಿದ ಬಳಿಕ ಆವರಣ ಅಕ್ರಮ ಚಟುವಟಿಕೆ ತಾಣವಾಗುತ್ತಿದೆ. ಜಿಲ್ಲಾ ನ್ಯಾಯಾಧೀಶರೇ ಶಾಲೆಗೆ ಬಂದಂತಹ ಸಂದರ್ಭದಲ್ಲಿ ನೆಟ್ಟ ಗಿಡವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ದನಕರುಗಳು ಮೇಯ್ದು ಹೋಗುತ್ತಿವೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶೌಚಾಲಯವಿಲ್ಲ ಎಂದು ಅಹವಾಲು ಸಲ್ಲಿಸಿದರು. ಹೊಳಲ್ಕೆರೆ ತಾಲೂಕು ಉಪ್ಪರಿಗೇನಹಳ್ಳಿಯ ವಿದ್ಯಾರ್ಥಿನಿ ಮಾತನಾಡಿ, ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ.

       ನಮ್ಮ ಕಣ್ಮುಂದೆಯೇ ನಮ್ಮ ಸಹಪಾಠಿಗಳ ಭವಿಷ್ಯ ಹಾಳಾಗುತ್ತಿದ್ದು, ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆ. ಶಾಲಾ ಆವರಣದಲ್ಲಿಯೇ ಈರುಳ್ಳಿಯ ರಾಶಿ ಹಾಕುತ್ತಿದ್ದು, ಕ್ರೀಡೆಗೆ ಮೈದಾನ ಇಲ್ಲವಾಗಿದೆ. ಶಾಲಾ ಆವರಣದಲ್ಲಿ ಗುಟ್ಕಾ, ಬೀಡಾ ತಿಂದು ಗಲೀಜು ಮಾಡುತ್ತಿದ್ದಾರೆ. ದಯವಿಟ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದರು. ಮೊಳಕಾಲ್ಮೂರಿನ ಸತೀಶ್ ಎನ್ನುವವರು ಮಾತನಾಡಿ, ಶಾಲೆಗೆ ಹೋಗಬೇಕಾದ ಮಕ್ಕಳು, ಆಟೋ ಮುಂತಾದ ವಾಹನಗಳ ಮೂಲಕ ಬಳ್ಳಾರಿ ಜಿಲ್ಲೆಗೆ ದುಡಿಯಲು ಬಾಲಕಾರ್ಮಿಕರಾಗಿ ಹೋಗುತ್ತಿದ್ದಾರೆ.

      ಇದನ್ನು ಪತ್ತೆಹಚ್ಚಿ ಅಪರಾಧಿಗಳಿಗೆ ಶಿಕ್ಷೆ ನೀಡಬೇಕಿದೆ ಎಂದರು. ಚಳ್ಳಕೆರೆ ತಾಲೂಕು ಗೌರಿಪುರದ ವಿದ್ಯಾರ್ಥಿಗಳು ಮಾತನಾಡಿ, ಗ್ರಾಮದಲ್ಲಿ ಸುಮಾರು 70 ಕುಟುಂಬಗಳ ವಾಸವಿದೆ. ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಇಲ್ಲ. ನಮಗೆ ಸುಡುಗಾಡು ಸಿದ್ಧರು ಜಾತಿಯ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ. ಇದರಿಂದ ಶಾಲೆಗಳಲ್ಲಿ ದೊರೆಯುವ ಶುಲ್ಕ ರಿಯಾಯಿತಿ, ವಿದ್ಯಾರ್ಥಿ ವೇತನ ಸೇರಿದಂತೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದರು.

      ಶಾಲೆ ಕಟ್ಟಡ ಶಿಥಿಲವಾಗಿದೆ, ಶಿಕ್ಷಕರು ಸಮಯಕ್ಕೆ ಸರಿಯಾಗಿ ಬಾರದಿರುವುದರಿಂದ, ಪಠ್ಯ ಬೋಧನೆ ಪೂರ್ಣವಾಗುತ್ತಿಲ್ಲ, ಶಾಲೆಗೆ ಹೋಗಲು ಸೂಕ್ತ ಬಸ್ ಸೌಕರ್ಯ ಇಲ್ಲದಿರುವುದರಿಂದ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ, ಹೀಗೆ ಮಕ್ಕಳು ಸಮಸ್ಯೆಗಳ ಸರಮಾಲೆಯನ್ನೇ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು.

      ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ ಅವರು ಈ ಸಂದರ್ಭದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಿಗೆ ಕಾಂಪೌಂಡ್ ಸಮಸ್ಯೆ ಪರಿಹರಿಸಲು ಜಿಲ್ಲಾ ಪಂಚಾಯತ್ ಸಿದ್ಧವಿದ್ದು, ಕಾಂಪೌಂಡ್ ಅಗತ್ಯವಿರುವ ಶಾಲೆಯ ಮುಖ್ಯೋಪಾಧ್ಯಾಯರು, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ, ಕ್ರಿಯಾ ಯೋಜನೆಗೆ ಕೂಡಲೆ ಅನುಮೋದನೆ ನೀಡಲಾಗುವುದು ಎಂದರು.

       ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಉಪಕಾರ್ಯದರ್ಶಿ ಬಸವರಾಜ್ ಅವರು, ಮಕ್ಕಳ ಹಕ್ಕುಗಳ ರಕ್ಷಣೆಗೆ ಜಿಲ್ಲೆಯಲ್ಲಿ ಕಾನೂನು ರಿತ್ಯಾ ಕ್ರಮ ಕೈಗೊಳ್ಳಲಾಗುತ್ತಿದೆ. ಮಕ್ಕಳ ಹಕ್ಕುಗಳ ಸಂರಕ್ಷಣೆ ನಿಟ್ಟಿನಲ್ಲಿಯೇ ಪ್ರತಿ ಗ್ರಾಮಗಳಲ್ಲಿ ಪ್ರತ್ಯೇಕವಾಗಿ ಗ್ರಾಮಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಇಲ್ಲಿ ಸಲ್ಲಿಕೆಯಾಗುವ ಅಹವಾಲುಗಳಿಗೆ ಸ್ಪಂದಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲೆಯಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಉದ್ಯೋಗಖಾತ್ರಿ ಯೋಜನೆಯಡಿ ಶಾಲಾ ಕಾಂಪೌಂಡ್ ನಿರ್ಮಿಸಲು ಈ ವರ್ಷ ಸರ್ಕಾರ ಅವಕಾಶ ಕಲ್ಪಿಸಿದೆ ಎಂದರು.

         ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ರೂಪಾನಾಯ್ಕ್ ಕೆ.ಬಿ. ಅವರು ಮಾತನಾಡಿ, ಮಕ್ಕಳಿಂದ ಅಹವಾಲು ಸಲ್ಲಿಸುವ ಈ ಕಾರ್ಯಕ್ರಮ ಸರ್ಕಾರದ ಕಣ್ತೆರೆಸುವಂತಹ ಕಾರ್ಯಕ್ರಮವಾಗಿದೆ. ಶಾಲೆಗಳಲ್ಲಿ ಉತ್ತಮ ಕಟ್ಟಡ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಇಲ್ಲದ ಕಾರಣದಿಂದಾಗಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಹೆಚ್ಚುವರಿ ಶಿಕ್ಷಕರುಗಳ ವರ್ಗಾವಣೆಯಾಗುತ್ತಿದೆ.

      ಹಳೆಯ ವಿದ್ಯಾರ್ಥಿಗಳ ಸಂಘಗಳನ್ನು ರಚಿಸಿ, ಉಪಯುಕ್ತ ಕಾರ್ಯಕ್ರಮಗಳನ್ನು ಕೈಗೊಳ್ಳಲು ಇದೀಗ ಅವಕಾಶವನ್ನು ಸರ್ಕಾರ ಕಲ್ಪಿಸಿದ್ದು, ಬಹಳಷ್ಟು ಕಡೆ, ದುಸ್ಥಿತಿಯಲ್ಲಿದ್ದ ಶಾಲೆಗಳ ಚಿತ್ರಣ ಬದಲಾಗಿರುವುದು ಕಂಡುಬಂದಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ಗುಣಮಟ್ಟದ ಶಿಕ್ಷಣ ದೊರೆಯಬೇಕು. ಬಾಲ್ಯ ವಿವಾಹಗಳು ಜಿಲ್ಲೆಯಲ್ಲಿ ಹೆಚ್ಚು ನಡೆಯುತ್ತಿವೆ ಎಂಬುದಾಗಿ ಮಕ್ಕಳು ದೂರು ನೀಡುತ್ತಿದ್ದು, ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಪಾಲಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು.

     ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನಡೆಯುವ ಗ್ರಾಮ ಸಭೆಗಳನ್ನು ಗಂಭೀರವಾಗಿ ಪರಿಗಣಿಸಿ, ಮಕ್ಕಳ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆ ಪರಿಹರಿಸುವತ್ತ ಅಧಿಕಾರಿಗಳು ಗಮನ ನೀಡಬೇಕು ಎಂದರು.ನಗರಠಾಣೆ ಪೊಲೀಸ್ ಅಧಿಕಾರಿ ಪ್ರಕಾಶ್ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಒಳಗೊಂಡ ಓಬವ್ವ ಪಡೆ ಯನ್ನು ರಚಿಸಲಾಗಿದ್ದು, ಬಾಲ್ಯ ವಿವಾಹ, ಪೋಕ್ಸೊ ಕಾಯ್ದೆ, ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು. ಬಾಲ್ಯ ವಿವಾಹ ಪ್ರಕರಣದ ಮಾಹಿತಿ ಇದ್ದಲ್ಲಿ, ಕೂಡಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

       ಜಿಲ್ಲಾ ಹಿರಿಯ ನಾಗರಿಕರ ಮತ್ತು ವಿಕಲಚೇತನರ ಕಲ್ಯಾಣ ಅಧಿಕಾರಿ ವೈಶಾಲಿ ಅವರು ಮಾತನಾಡಿ, ನಗರದಲ್ಲಿರುವ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಫಿಸಿಯೋಥೆರಪಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಚಿಕಿತ್ಸೆ ಅಗತ್ಯವಿರುವವರು ಉಚಿತವಾಗಿ ಪಡೆಯಬಹುದಾಗಿದೆ ಎಂದರು.

      ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವಿಜಯಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯಕ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ. ಪ್ರಭಾಕರ, ನಕ್ಷತ್ರ ಮಕ್ಕಳ ಪಾರ್ಲಿಮೆಂಟ್ ಅಧ್ಯಕ್ಷೆ ಅರ್ಪಿತ, ಸ್ವಯಂ ಸೇವಾ ಸಂಸ್ಥೆ ಒಕ್ಕೂಟದ ವಿಶ್ವಸಾಗರ್, ಐಎಎಸ್ ಪ್ರೊಬೆಷನರಿ ಅಧಿಕಾರಿ ಡಾ. ನಂದಿತಾದೇವಿ, ಡಿಡಿಪಿಐ ಅಂಥೋಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

 

Recent Articles

spot_img

Related Stories

Share via
Copy link
Powered by Social Snap