ಸಿಟಿ ಮಾರ್ಕೆಟ್‍ನ ಬಟ್ಟೆ ವ್ಯಾಪಾರಿ ಅಪಹರಣ

ಬೆಂಗಳೂರು

       ಸಿಟಿ ಮಾರ್ಕೆಟ್‍ನ ಬಟ್ಟೆ ವ್ಯಾಪಾರಿ ಕೈಲಾಶ್ ಜೈನ್ ಎಂಬುವರನ್ನು ಅಪಹರಿಸಿ ಹಲ್ಲೆ ನಡೆಸಿ 3 ಲಕ್ಷ ರೂ.ಗಳಿಗೆ ಬೇಡಿಕೆಯಿಟ್ಟು, ಕೊಲೆ ಬೆದರಿಕೆ ಹಾಕಿ ಗಡುವು ನೀಡಿ ಬಿಟ್ಟು ಕಳುಹಿಸಿದ್ದ ರೌಡಿ ಮಂಜುನಾಥ ಅಲಿಯಾಸ್ ಬಾಕ್ಸರ್ ಮಂಜ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಜಯನಗರದ ಬಾಕ್ಸರ್ ಮಂಜ ಹಾಗೂ ರಾಮು ಬಂಧಿತ ಆರೋಪಿಗಳಾಗಿದ್ದಾರೆ. ಸಿಟಿ ಮಾರುಕಟ್ಟೆಯಲ್ಲಿ ಮಾಮೂಲ್ ಪೇಟೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಬಟ್ಟೆ ವ್ಯಾಪಾರಿ ಕೈಲಾಶ್ ಜೈನ್ ಅವರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ.

         ಕೈಲಾಶ್ ಜೈನ್ ಅವರು ಹಿಂದೆ ಬೇರೆಯವರ ಜೊತೆ ಸೇರಿ ನಡೆಸುತ್ತಿದ್ದ ವ್ಯಾಪಾರದಿಂದ 1 ಕೋಟಿರೂ.ಗಳಷ್ಟು ಹಣ ಬಂದಿತ್ತು. ಅವರಿಂದ ಬೇರೆಯಾಗಿ ತಾವೇ ಸ್ವಂತ ಅಂಗಡಿಯಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಜೈನ್ ಅವರಿಗೆ ಹಣ ಬಂದಿರುವುದು ಆರೋಪಿ ರಾಮುಗೆ ಗೊತ್ತಾಗಿ ಮೊದಲಿಗೆ 1 ಲಕ್ಷರೂ. ಹಣ ಪಡೆದುಕೊಂಡಿದ್ದನು. ನಂತರ ಮತ್ತೆ 1 ಲಕ್ಷ ಕೇಳಿದ್ದು ಅದನ್ನು ಕೊಟ್ಟಿದ್ದ ಜೈನ್ ಮತ್ತೆ ಹಣ ಕೇಳದಂತೆ ತಾಕೀತು ಮಾಡಿದ್ದರು.

        ಕೋಟಿಯಷ್ಟು ಹಣವಿದ್ದರೂ ಕೇಳಿದಾಗ ಹಣ ಕೊಡದ ಕಾರಣಕ್ಕೆ ಪರಿಚಯಸ್ಥನಾಗಿದ್ದ ಮತ್ತೊಬ್ಬ ಆರೋಪಿ ಬಾಕ್ಸರ್ ಮಂಜ ಸೇರಿ ಜೈನ್ ಅಪಹರಿಸಿ ಲಕ್ಷಗಟ್ಟಲೆ ಹಣ ದೋಚಲು ಸಂಚು ರೂಪಿಸಿದ್ದರು. ಅದರಂತೆ ಬಾಕ್ಸರ್ ಮಂಜ ಹಾಗೂ ರಾಮು ಜತೆ ಸೇರಿ ಕಳೆದ ಅ. 25 ರಂದು ಸಿಟಿ ಮಾರುಕಟ್ಟೆಯಿಂದ ಕೈಲಾಶ್ ಜೈನ್ ಅವರನ್ನು ಅಪಹರಿಸಿ, ಅವರ ಬಳಿಯಿದ್ದ 30 ಸಾವಿರ ರೂ. ಕಸಿದು ಹಲ್ಲೆ ನಡೆಸಿ 3 ಲಕ್ಷಕ್ಕೆ ಬೇಡಿಕೆಯಿಟ್ಟು ಕೊಲೆ ಬೆದರಿಕೆ ಹಾಕಿ ಮಂಗಳವಾರಕ್ಕೆ ಗಡವು ನೀಡಿ ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಯಿತು ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

        ಜೈನ್ ಅವರನ್ನು ಕೂಡಿ ಹಾಕಿ 3 ಲಕ್ಷ ರೂ. ಹಣಕ್ಕೆ ಒತ್ತಾಯ ಮಾಡಿ, ನಂತರ ಬಿಡುಗಡೆ ಮಾಡಿದ ಸಂಬಂಧ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಸಿಟಿ ಮಾರುಕಟ್ಟೆ ಪೊಲೀಸರಿಗೆ ಒಪ್ಪಿಸಲಾಗಿದೆ. ಜಯನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿ ಬಾಕ್ಸರ್ ಮಂಜನ ಹೆಸರಿದ್ದು, ಹಲವು ಅಪರಾಧ ಕೃತ್ಯಗಳಲ್ಲಿ ಆತ ಭಾಗಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap