ಇನ್ನೂ ಮುಗಿಯದ ಉದ್ಯಾನವನದ ಸುತ್ತಲಿನ ತಿಪ್ಪೇರಾಶಿ !

ಕುಣಿಗಲ್

      ಇತ್ತೀಚೆಗೆ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಪ್ರಕಟವಾದ “ಉದ್ಯಾನವನದ ಸುತ್ತ ತಿಪ್ಪೇರಾಶಿಗೆ ಮುಕ್ತಿ ಎಂದು” ಎಂಬ ಸುದ್ದಿ ಪ್ರಕಟವಾದ ಬೆನ್ನಲ್ಲೇ ಪುರಸಭೆ ಪಟ್ಟಣದ ಕೆಲವೆಡೆ ಸೇರಿದಂತೆ ಸ್ವಚ್ಛತಾ ಅಭಿಯಾನದಡಿಯಲ್ಲಿ ಶಾಸಕರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಸ್ವಚ್ಛತೆ ಮಾಡಿದರೂ ಇನ್ನೂ ಪ್ರಮುಖ ಸ್ಥಳಗಳಲ್ಲಿ ಕಸದರಾಶಿ ಈ ಪುಣ್ಯಾತ್ಮರ ಕಣ್ಣಿಗೆ ಕಾಣದ ರೀತಿ ಉಳಿದಿರುವುದು ಜನರ ಆಕ್ರೋಶಕ್ಕೆ ಎಡೆ ಮಾಡಿದೆ.

        ಈ ಸ್ವಚ್ಛತಾ ಕಾರ್ಯಕ್ರಮವನ್ನು ಪುರಸಭಾ ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ತರಾತುರಿಯಲ್ಲಿ ಆಗಮಿಸಿ ಕೊಳೆತು ನಾರುವ ಕೆಲವು ಕಡೆ ಸ್ವಚ್ಛತೆಗೆ ಮುಂದಾಗುತ್ತಿದ್ದಂತೆ ಖುದ್ದು ಶಾಸಕರೇ ಪಟ್ಟಣದ ಕೋಟೆ ಪ್ರದೇಶದ ಕೆಲವು ಕಡೆ ರಾಶಿಗಟ್ಟಲೆ ಕೊಳೆತು ದುರ್ನಾಥ ಬೀರುವ ಕಸದ ರಾಶಿಯನ್ನು ಕಂಡು ತಾವೇ ಮುಜುಗರ ಪಟ್ಟುಕೊಳ್ಳುವ ಮೂಲಕ ಅಯ್ಯೋ ಇಷ್ಟೊಂದು ಕಸವನ್ನ ಏತಕ್ಕಾಗಿ ಹೀಗೆ ಬಿಟ್ಟಿದ್ದೀರಿ, ನಿತ್ಯ ಸ್ವಚ್ಛತೆಯನ್ನು ಮಾಡುವುದಿಲ್ಲವೇ ಎಂದು ಸಂಬಂಧಪಟ್ಟ ಅಧಿಕಾರಿಗಳನ್ನ ಖಾರವಾಗಿ ಪ್ರಶ್ನಿಸಿದ ಅವರು, ಇನ್ನಾದರೂ ನಿತ್ಯ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಪುರಸಭಾ ಆಡಳಿತಕ್ಕೆ ಎಚ್ಚರಿಕೆ ನೀಡಿದ ಅವರು, ಕೋಟೆ ಪ್ರದೇಶದ ಸರ್ಕಾರಿ ಶಾಲೆ ಮತ್ತು ಸಂತೆ ಮೈದಾನದಲ್ಲಿ ಖುದ್ದು ಶಾಸಕ ಡಾ.ರಂಗನಾಥ್ ಅವರೇ ಬಾಯಿಗೆ ಮಾಸ್ಕ್ ಹಾಕಿಕೊಂಡು ಸ್ವಚ್ಚತೆಗೆ ಮುಂದಾಗುತ್ತಿದ್ದಂತೆ ಅಲ್ಲಿದ್ದ ನಾಗರೀಕರು, ಅಭಿಮಾನಿಗಳು ಬೆಸ್ತುಬಿದ್ದವರಂತಾಗಿ ತಾವು ಕೈ ಹಾಕಿ ಸ್ವಚ್ಛತೆಗೆ ಮುಂದಾಗಿದ್ದು ವಿಶೇಷವಾಗಿತ್ತು.

       ಪಟ್ಟಣದ ಎಷ್ಟೋ ಜನ ಇಡೀ ಪುರಸಭೆ ಸ್ವಚ್ಛತೆಗೆ ಬಂದಿದ್ದ ದಿನವನ್ನು ಹಿಂದೆಂದೂ ನೋಡದವರು ಆಶ್ಚರ್ಯಕರ ರೀತಿಯಲ್ಲಿ ನೋಡುತ್ತ ಅಬ್ಬಾ ಏನ್ ಇಷ್ಟೊಂದು ಅಧಿಕಾರಿಗಳು, ಕಾರ್ಮಿಕರು ಬಂದವರಲ್ಲ ಇನ್ನೇನು ಕಸ ಇರುವುದೇ ಇಲ್ಲಾ ಬಿಡಿ ಎಂದು ಕೊಳ್ಳುತ್ತ ವ್ಯಂಗ್ಯವಾಗಿ ಮಾತನಾಡಿಕೊಳ್ಳುತ್ತಲೇ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದ್ದ ಶಾಸಕರಿಗೆ ಖುದ್ದು ಸಾರ್ವಜನಿಕರೇ ಪುರಸಭೆಯವರ ಮೇಲೆ ಸರಮಾಲೆ ರೀತಿಯಲ್ಲಿ ದೂರುಗಳ ಸುರಿಮಳೆ ಗೈದು ನೋಡಿ ಸ್ವಾಮಿ ಈ ಭಾಗದಲ್ಲಿ ಕೊಳೆತು ನಾರುತ್ತಿದ್ದರೂ ಎಂದೋ ಒಂದು ದಿನ ಬಂದು ಕಸ ಎತ್ತುತ್ತಾರೆ. ಆದರೆ ಇಲ್ಲಿ ನಿತ್ಯ ಸಾವಿರಾರು ಜನ ಇರುವಂತಹ ಸ್ಥಳ ಸಂತೆ ಮೈದಾನ ಶಾಲಾ, ಕಾಲೇಜುಗಳು ಇವೆ.

        ಆದರೆ ಇಂತಹ ಪ್ರದೇಶದಲ್ಲಿ ನಿತ್ಯ ಕಸದ ರಾಶಿ ಟನ್‍ಗಟ್ಟಲೇ ಬೀಳುತ್ತಲೇ ಇರುತ್ತದೆ. ಇನ್ನೂ ನಮ್ಮ ಜನ ರಾತ್ರೋರಾತ್ರಿ ಏನೆನೋ ಕಸವನ್ನ ತಟ್ಟಂತ ತಂದು ಹಾಕಿಬಿಡುತ್ತಾರೆ. ಇಲ್ಲಿ ವಾಸದ ಮನೆಗಳು ಇವೆ, ಮಕ್ಕಳು ಇವೆ. ಹೇಗೆ ನಾವು ಬದುಕೋದು ಇನ್ನಾದರೂ ನಿತ್ಯ ಸ್ವಚ್ಛತೆ ಮಾಡುವಂತೆ ಕ್ರಮ ಕೈಗೊಳ್ಳಿ ಎಂದು ಶಾಕರಿಗೆ ದೂರು ಮುಟ್ಟಿಸಿದರು. ಇದರಿಂದ ಸ್ವಲ್ಪ ಮುಜುಗರಕ್ಕೊಳಗಾದ ಶಾಸಕರು ಅಲ್ಲೇ ಇದ್ದ ಅಧಿಕಾರಿಗಳಿಗೆ, ಪುರಸಭಾ ಸದಸ್ಯರಿಗೆ ಇಂತಹ ಸಮಸ್ಯೆಗೆ ನಿತ್ಯ ಸ್ಪಂಧಿಸುವಂತೆ ಕಿವಿಮಾತು ಹೇಳಿದ ಅವರು ನಾಗರೀಕರು ಸಹ ಕಸವನ್ನು ಬೇಕಾಬಿಟ್ಟಿಯಾಗಿ ಹಾಕದೇ ಒಂದು ನಿಗದಿತ ಸ್ಥಳ ಮತ್ತು ಪುರಸಭೆ ಗಾಡಿ ಬಂದಾಗ ಕಸವನ್ನು ಹಾಕುವಂತೆ ಮನವಿ ಮಾಡಿದರು.
ಕೇಂದ್ರ ಸರ್ಕಾರ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ನಾಗರೀಕರಲ್ಲಿಯೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಲೇ ಬಂದಿದೆ. ಆದರೆ ನಮ್ಮ ಕುಣಿಗಲ್ ಪಟ್ಟಣದ ಕೆಲವೆಡೆ ಕಸದ ರಾಶಿ ಬಿದ್ದು ತಿಪ್ಪೆಯಾಗಿ ನಿರ್ಮಾಣವಾಗಿದ್ದರೂ ಸ್ವಚ್ಛತೆಗೆ ಮಾತ್ರ ಪುರಸಭೆ ಆದ್ಯತೆ ಕೊಡುವಲ್ಲಿ ವಿಫಲವಾಗಿದೆ.

        ಪಟ್ಟಣದಲ್ಲಿರುವ ಏಕೈಕ ಉದ್ಯಾನವನ ಇರುವುದು ತುಮಕೂರು ರಸ್ತೆಯ ಮಹಾವೀರನಗರದಲ್ಲಿ ಪಟ್ಟಣದಲ್ಲಿ ಇನ್ನೂ ಕೆಲವು ಉದ್ಯಾನವನಗಳು ಇವೆ. ಆದರೆ ನಾಗರೀಕರಿಗೆ ಹೆಚ್ಚು ಪ್ರಿಯವಾದ ಮತ್ತು ಪರಿಚಿತವಾದ ಉದ್ಯಾನವನ ಇದೊಂದೆ. ಈ ಉದ್ಯಾನವನಕ್ಕೆ ಹೊಂದಿಕೊಂಡಂತೆ ಸಾರ್ವಜನಿಕ ಕಚೇರಿಗಳು ಸೇರಿದಂತೆ ಶಾಲಾ ಕಾಲೇಜುಗಳು, ಸಂತೆ ಮೈದಾನ, ದೇವಾಲಯಗಳು ಇದ್ದು ನಿತ್ಯ ಸಾವಿರಾರು ಜನ ಸಂಚರಿಸುವ ಜನನಿಬೀಡ ಸ್ಥಳವಾಗಿದೆ. ಇಲ್ಲಿ ಸಂತೆ ನಡೆಯುವುದು ಬುಧವಾರ ಮಾತ್ರ. ಆದರೆ ನಿತ್ಯ ಮುಂಜಾನೆಯ ಸಂತೆ ನಡೆಯುತ್ತಲೇ ಇರುತ್ತದೆ.

        ಆದ್ದರಿಂದ ಇಲ್ಲಿ ಕಸದ ರಾಶಿ ಹೆಚ್ಚಾಗುತ್ತಲೇ ಇರುತ್ತದೆ ಪುರಸಭೆಯವರು ಮಾತ್ರ ವಾರಕ್ಕೆ ಒಮ್ಮೆ ಮಾತ್ರ ಸ್ವಚ್ಛತೆ ಮಾಡುತ್ತಾರೆ ಎಂಬುದು ಈ ಭಾಗದ ನಾಗರೀಕರ ಮತ್ತು ವಿದ್ಯಾರ್ಥಿಗಳ ಅಳಲು. ಇಲ್ಲಿ ಕೊಳೆತ ಸೊಪ್ಪು ಸೇರಿದಂತೆ ವಿವಿಧ ಬಗೆಯ ತ್ಯಾಜ್ಯ ಹಾಕುವುದರಿಂದ ಗಬ್ಬೆದ್ದು ನಾರುತ್ತದೆ. ಇದೇ ಮಾರ್ಗವಾಗಿ ಶಾಲಾ , ಕಾಲೇಜು, ಗ್ರಂಥಾಲಯಕ್ಕೆ ಹೋಗುವ ವಿದ್ಯಾರ್ಥಿಗಳು ಮತ್ತು ಜನರು ಮೂಗು ಹಿಡಿದು ಸಾಗುತ್ತ ಪುರಸಭೆಗೆ ಹಿಡಿ ಶಾಪ ಹಾಕುತ್ತ ತೆರಳುವುದು ಮಾಮೂಲಿ. ಇನ್ನೂ ಹಳ್ಳಿಗಾಡಿನ ಜನರು ತಾವು ಬೆಳೆದ ತರಕಾರಿಯನ್ನು ಸಂತೆಗೆ ಮಾರಾಟ ಮಾಡಲು ಬರುವವರು ಅಯ್ಯೋ ನಮ್ಮ ಹಳ್ಳಿನೇ ಎಷ್ಟೋ ಉತ್ತಮ ಇದೇನು ಊರಾ, ಸಿಟಿನಾ ಎಂದು ಕುಣಿಗಲ್ ಪಟ್ಟಣವನ್ನು ಜರಿಯುತ್ತ ಇಲ್ಲಿನ ಜನಪ್ರತಿನಿಧಿಗಳಿಗೆ ಹಾಗೂ ಪುರಸಭಾ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತ ನಗರದ ನಾಗರೀಕರನ್ನೂ ವ್ಯಂಗ್ಯವಾಗಿ ಮಾತನಾಡಿಸಿ ನೋಡಪ್ಪಾ ನಿಮ್ಮ ಸಿಟಿನಾ ಎಂದು ಟೀಕಿಸುತ್ತಿದ್ದಾರೆ.

        ಆದರೆ ಪುರಸಭೆಯವರು ಸ್ವಚ್ಛತೆಯನ್ನು ಮಾಡುವಾಗ ಉದ್ಯಾನವನದ ಸಂತೆ ಮೈದಾನದ ಕಡೆ ಮಾತ್ರ ಸ್ವಚ್ಛತೆ ಮಾಡಿದರು. ಆದರೆ ಅಲ್ಲೇ ಹತ್ತಾರು ಮೀಟರ್ ಕೆಳ ಭಾಗದಲ್ಲಿ ಏಳೆಂಟು ಚೀಲದಲ್ಲಿ ಕಸವನ್ನು ಕಟ್ಟಿ ಯಾರೋ ಸೈಂಟ್ ರೀಟಾ ಶಾಲಾ ಗೇಟ್ ಮುಂಭಾಗಕ್ಕೆ ಹೊಂದಿಕೊಂಡಂತೆ ಹಾಕಿ ಹೋಗಿದ್ದರೂ ಸಹ ಅದನ್ನು ನೋಡಿಯೂ ನೋಡದವರಂತೆ ಪುರಸಭೆಯವರು ಹೋಗಿದ್ದಾರೆ. ಅಲ್ಲದೆ ಮತ್ತೊಂದು ಭಾಗದಲ್ಲಿ ತುಮಕೂರು ರಸ್ತೆಯಿಂದ ಸಂತೆ ಮೈದಾನಕ್ಕೆ ಹೋಗುವ ರಸ್ತೆಯಲ್ಲಿ ಲಾರಿಗಟ್ಟಲೆ ಕಸ ಬಿದ್ದು ನಾರುತ್ತಿದೆ. ಇದನ್ನೂ ಸಹ ತೆರವು ಗೊಳಿಸಿಲ್ಲ ಎನ್ನುವ ನಾಗರೀಕರು ಕೇವಲ ಮಾಧ್ಯಮಗಳಲ್ಲಿ ಬಂದಾಗ ಅಥವಾ ಸರ್ಕಾರದ ಆದೇಶ ಬಂದಾಗ ಅಥವಾ ಯಾರೋ ದೂರಿದಾಗ ಕಸವನ್ನು ಎತ್ತುವ ಕೆಲಸ ಮಾಡುವುದಾದರೆ ಪುರಸಭೆಯವರಿಗೆ ನಿತ್ಯ ಸಂಬಳದ ಅವಶ್ಯಕತೆ ಇದೆಯೇ ಇಲ್ಲಿ ನಾಗರೀಕರ ಕಂದಾಯದ ಹಣ ಪೋಲಾಗುವುದಿಲ್ಲವೆ ಎಂದು ಪ್ರಜ್ಞಾವಂತರು ಪ್ರಶ್ನಿಸುವ ಮೂಲಕ ಪುರಸಭೆಯ ಕಾರ್ಯವೈಖರಿಯ ಬಗ್ಗೆ ವ್ಯಂಗ್ಯವಾಡಿದ್ದಾರೆ.

        ಇನ್ನಾದರೂ ಪಟ್ಟಣದಲ್ಲಿರುವ ಜನನಿಬಿಡ ಪ್ರದೇಶಗಳಲ್ಲಿ ನಿತ್ಯ ಕಸವಿಲೇವಾರಿ ಮಾಡುವ ಕೆಲಸವನ್ನು ಮಾಡಲಿ. ಇಲ್ಲವಾದರೆ ಇಂತಹ ದುರ್ನಾಥ ಬೀರುವ ವಾತಾವರಣ ಸೃಷ್ಟಿಸಲು ಅವರೇ ನೇರ ಕಾರಣರಾಗುತ್ತಾರೆ. ಕಸದ ರಾಶಿಯನ್ನು ಯಾವುದೇ ಒಬ್ಬ ವ್ಯಕ್ತಿ ಬೇಕಾಬಿಟ್ಟಿ ಹಾಕಿದರೆ ಅಂತಹವರಿಗೆ ಎಚ್ಚರಿಕೆ ನೀಡುವ ಕೆಲಸವನ್ನೂ ಮಾಡಿ ಬೇಕಿದ್ದರೆ ದಂಡವನ್ನೂ ವಿಧಿಸಿ ಬುದ್ದಿಕಲಿಸಲಿ. ಅದನ್ನು ಬಿಟ್ಟು ಬೇಕಾಬಿಟ್ಟಿ ಕೆಲಸ ಮಾಡುವ ಮೂಲಕ ಪಟ್ಟಣದ ಸ್ವಚ್ಛತೆಗೆ ಹಿನ್ನಡೆಯಾಗುತ್ತಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಬೆಟ್ಟು ಮಾಡಿ ತೋರಿಸದೆ ತಮ್ಮ ಸ್ವಾರ್ಥಕ್ಕೆ ಅಧಿಕಾರವನ್ನ ಬಳಸಿಕೊಳ್ಳುವ ಮೂಲಕ ಬರೀ ಅವರ ಅಭಿವೃದ್ಧಿಗೆ ಒತ್ತುಕೊಡುವ ಮೂಲಕ ಪಟ್ಟಣದ ಸ್ವಚ್ಛತೆಯನ್ನು ಮತ್ತು ಅಭಿವೃದ್ಧಿಯನ್ನು ಮಾಡದಂತಹ ಜನಪ್ರತಿನಿಧಿಗಳ ಅವಶ್ಯಕತೆ ಪಟ್ಟಣದ ನಾಗರೀಕರಿಗೆ ಇಲ್ಲಾ ಎಂಬುದನ್ನ ತಿಳಿಯಲಿ ಎಂದು ಪ್ರಜ್ಞಾವಂತ ನಾಗರೀಕರು ಮತ್ತು ಯುವಕ ಸಮೂಹ ಎಚ್ಚರಿಕೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap