ಟಿಪ್ಪು ಜಯಂತಿಯಿಂದ ದೂರ ಉಳಿದ ಸಿಎಂ ಮತ್ತು ಡಿಸಿಎಂ

ಬೆಂಗಳೂರು

       ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಟಿಪ್ಪು ಜಯಂತಿಯಿಂದ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ಸಂಪೂರ್ಣ ಹೊರಗುಳಿದಿದ್ದರೆ, ಟಿಪ್ಪು ಜಯಂತಿಯಲ್ಲಿ ಭಾಗವಹಿಸುವ ಮೂಲಕ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರು ಗೋಮುಖ ವ್ಯಾಘ್ರಗಳು ಎಂದು ಹರಿ ಹಾಯ್ದಿದ್ದಾರೆ.

        ಟಿಪ್ಪು, ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಆತ ರಾಜ. ಎಲ್ಲ ರಾಜರಂತೆ ಆತ ತನ್ನ ನೆಲದ ಹಿತಕ್ಕಾಗಿ ದುಡಿದಿದ್ದಾನೆ. ಅಷ್ಟನ್ನು ಮಾತ್ರ ಗಮನಿಸದೆ ಆತನನ್ನು ಹಿಂದೂ ವಿರೋಧಿ ಎಂದು ಬಣ್ಣಿಸುತ್ತಿರುವ ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.

        ನಗರದ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ತೆರಳಿದ ಹಲವು ಮುಸ್ಲಿಂ ಧರ್ಮಗುರುಗಳು, ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

         ಸಿದ್ದರಾಮಯ್ಯ ಸಿಎಂ ಆಗಿದ್ದ ಸಮಯದಲ್ಲಿ ಟಿಪ್ಪು ಜಯಂತಿಯನ್ನು ಆರಂಭಿಸಿದ್ದರು. ಹಾಗಾಗಿ ಅವರ ಕಾರ್ಯವನ್ನು ಗೌರವಿಸುವ ನಿಟ್ಟಿನಲ್ಲಿ ಮುಸ್ಲಿಂ ಮುಖಂಡರು ಈ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಹಿನ್ನೆಲೆಯಲ್ಲಿಯೇ ಬೆಳಗ್ಗೆ ಸಿದ್ದರಾಮಯ್ಯ ಚಿತ್ರದುರ್ಗಕ್ಕೆ ತೆರಳುವ ಮುನ್ನ ಮಾಜಿ ಸಿಎಂ ನಿವಾಸಕ್ಕೆ ತೆರಳಿದ ಮುಸ್ಲಿಂ ಮುಖಂಡರು ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು.

        ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರು ಗೋಮುಖ ವ್ಯಾಘ್ರರು, ವಿನಾಕಾರಣ ರಾಜಕಾರಣ ಮಾಡ್ತಿದ್ದಾರೆ. ಬಿಜೆಪಿಯವರಿಗೆ ವಿಷಯವಿಲ್ಲ. ಸುಮ್ಮನೇ ಮಾತನಾಡುತ್ತಾರೆ. ಇದೇ ಯಡಿಯೂರಪ್ಪ, ಅಶೋಕ, ಜಗದೀಶ ಶೆಟ್ಟರ್ ಈ ಹಿಂದೆ ಟಿಪ್ಪುರನ್ನು ಹಾಡಿ ಹೊಗಳಿದ್ದರು.

         ಈಗೇಕೇ ವಿರೋಧ ಮಾಡುತ್ತಿದ್ದಾರೆ? ಬಿಜೆಪಿಗರ ಮಾತನ್ನ ಜನ ಒಪ್ಪಲ್ಲ. ಟಿಪ್ಪು ಸುಲ್ತಾನ್ ಮತಾಂಧನಾಗಿರಲಿಲ್ಲ. ಟಿಪ್ಪು ಎಲ್ಲಾ ಸಮುದಾಯದ ಪರ ಇದ್ದರು. ಸಿಎಂ ಆರೋಗ್ಯದ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಬರ್ತಿಲ್ಲ ಅನ್ನೋದನ್ನು ಕೇಳಿದ್ದೇನೆ.

        ಡಿಸಿಎಂ, ಸಿಎಂ ಕಾರಣಾಂತರಗಳಿಂದ ಬರುತ್ತಿಲ್ಲ. ಸರ್ಕಾರದಿಂದ ಸಚಿವರಾದ ಜಮೀರ್ ಅಹಮ್ಮದ್, ಜಯಮಾಲಾ, ಶಾಸಕ ರೋಷನ್ ಬೇಗ್, ಹ್ಯಾರಿಸ್ ಇದ್ದಾರೆ ಎಂದರು.

        ಸಿಎಂ, ಡಿಸಿಎಂ ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ಬಗ್ಗೆ ಮಾತನಾಡಿದ ಸಚಿವ ಜಮೀರ್ ಅಹಮದ್, ಸಿಎಂ ಕುಮಾರಸ್ವಾಮಿ ಆರೋಗ್ಯ ಸರಿಯಿಲ್ಲ. ಅದೇ ಕಾರಣಕ್ಕೆ ಅವರು ಹಾಜರಾಗುತ್ತಿಲ್ಲ. ಇದನ್ನ ಅವರು ಈಗಾಗಲೇ ಹೇಳಿದ್ದಾರೆ.

       ಇದೇ ರೀತಿ ಮಾಜಿ ಸಚಿವ ಚೆನ್ನಿಗಪ್ಪ ಆರೋಗ್ಯ ವಿಚಾರಿಸಲು ಪರಮೇಶ್ವರ್ ತೆರಳಿದ್ದಾರೆ. ಚೆನ್ನಿಗಪ್ಪ ಅವರ ಅರೋಗ್ಯ ತೀವ್ರ ಹದಗೆಟ್ಟಿದೆ. ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಚೆನ್ನಿಗಪ್ಪರನ್ನ ನೋಡಲು ವಿದೇಶಕ್ಕೆ ತೆರಳಿದ್ದಾರೆ. ಪರಮೇಶ್ವರ್ ಸಂಜೆ ವಾಪಸ್ಸಾದರು.

          ಈ ಮೊದಲು ಸಂಜೆ 6.30 ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಈಗ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದೆ. ಹಾಗಾಗಿ ಪರಮೇಶ್ವರ್ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದರು. ಮೊದಲಿನಿಂದಲೂ ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ. ಇದು ನಾಲ್ಕನೇ ಟಿಪ್ಪು ಜಯಂತಿ ಆಚರಣೆ. ಕೇವಲ ರಾಜಕೀಯ ಲಾಭಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.

         ಸಿದ್ದರಾಮಯ್ಯ ಸರಣಿ ಟ್ವೀಟ್ : ಟಿಪ್ಪು ಸುಲ್ತಾನ್ ಜಯಂತಿ ಸಂದರ್ಭದಲ್ಲಿ ಸರಣಿ ಟ್ವೀಟ್ ಮಡಿರುವ ಸಿದ್ದರಾಮಯ್ಯ, ‘ಟಿಪ್ಪು ವಿರೋಧಿಗಳಿಗೆ ನಿಜವಾದ ಟಿಪ್ಪು ಸುಲ್ತಾನ್ ಕಾಣಬೇಕಾದರೆ ಕೋಮುವಾದದ ಕನ್ನಡಕ ಕಳಚಿಟ್ಟು ನೋಡಬೇಕಾಗುತ್ತದೆ. ಇದಕ್ಕಾಗಿ ಬಿಜೆಪಿ ಸರ್ಕಾರವೇ ಪ್ರಕಟಿಸಿದ ಪುಸ್ತಕ ಓದಬೇಕಾಗುತ್ತದೆ? ಎಂದು ಹೇಳಿದ್ದಾರೆ. ಇದಕ್ಕೆ ಆಧಾರವಾಗಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬರೆದ ಪತ್ರವನ್ನು ಲಗತ್ತಿಸಿದ್ದಾರೆ.

        ಇನ್ನೊಂದು ಟ್ವೀಟ್‍ನಲ್ಲಿ ‘ಟಿಪ್ಪು ಯುದ್ಧದ ವೇಳೆ ಜನರನ್ನು ಸಾಯಿಸಿದ್ದ, ಲೂಟಿ ಮಾಡಿದ್ದ, ಎನ್ನುವುದು ವಿರೋಧಿಗಳ ಆರೋಪ. ಟಿಪ್ಪು ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿ ಇರಲಿಲ್ಲ. ಟಿಪ್ಪು ಪ್ರಜಾತಾಂತ್ರಿಕವಾಗಿ ಆಯಾದವನಲ್ಲ. ಆತ ಒಬ್ಬ ರಾಜ. ಆ ಕಾಲದಲ್ಲಿ ಯುದ್ಧ ಧರ್ಮಕ್ಕೆ ತಕ್ಕಂತೆ ನಡೆದುಕೊಂಡಿದ್ದ ಎಂದು ಸಮರ್ಥಿಸಿಕೊಂಡಿದ್ದಾರೆ.

        ಮುಂದಿನ ಟ್ವೀಟ್ನಲ್ಲಿ, ‘ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಒಂದು ಸಂಸ್ಥಾನದ ರಾಜ ಎನ್ನುವ ವಾದ ಹುಟ್ಟಿಕೊಂಡಿದೆ. ಇಂತಹ ಮೊಂಡು ವಾದದವರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಸಿಂಧೂರ ಲಕ್ಷ್ಮಣ, ರಾಣಿ ಅಬ್ಬಕ್ಕ ದೇವಿ ಸೇರಿದಂತೆ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದವರನ್ನು ಯಾವ ಗುಂಪಿಗೆ ಸೇರಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

         ಇನ್ನೊಂದರಲ್ಲಿ, ‘ರಾಜ್ಯ ಸರ್ಕಾರ ಆಚರಿಸುತ್ತಿರುವುದು ಯಾವುದೇ ಒಂದು ಧರ್ಮಕ್ಕೆ ಸೇರಿದ ನಾಯಕನ ಜಯಂತಿಯಲ್ಲ. ಒಬ್ಬ ದೇಶಪ್ರೇಮಿ, ಜಾತ್ಯತೀತ ಮತ್ತು ಜನಪರ ಅರಸನಾಗಿದ್ದ ಟಿಪ್ಪುವಿನ ಜಯಂತಿ ಆಚರಿಸುತ್ತಿದ್ದೇವೆ. ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು, ಟಿಪ್ಪುವಿಗೆ ಮಾತ್ರವಲ್ಲ, ಈ ನಾಡಿಗೆ ಬಗೆದ ದ್ರೋಹ? ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap