ಸರ್ಕಾರ ಬಿದ್ದರೆ ಬೀಳಲಿ ಎಂದ ಸಿಎಂ

0
33

ಬೆಂಗಳೂರು

        ರಾಜ್ಯ ಕಾಂಗ್ರೆಸ್ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಭರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಸರ್ಕಾರದ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ ಎಂದು ಆಕ್ರೋಶಗೊಂಡಿರುವ ಸಿಎಂ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರ ಬಿದ್ದರೆ ಬೀಳಲಿ ಎಂದು ಆಪ್ತರ ಮುಂದೆ ಹೇಳಿಕೊಂಡ ಅಂಶ ಬೆಳಕಿಗೆ ಬಂದಿದೆ.

       ಉನ್ನತ ಮೂಲಗಳು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಕೈ ಪಾಳೆಯದ ಮೇಲೆ ಹಿಡಿತ ಸಾಧಿಸುತ್ತಿರುವ ಸಿದ್ಧರಾಮಯ್ಯ, ಆ ಮೂಲಕ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ.ಇದನ್ನು ಸಹಿಸಿಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಪಕ್ಷವನ್ನು ಬಲಿಕೊಡಲು ನಾನು ಸಿದ್ಧನಿಲ್ಲ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ ಎಂದು ಅವು ಹೇಳಿವೆ.

       ಸರ್ಕಾರದ ಮಟ್ಟದಲ್ಲಿ ಸಿದ್ಧರಾಮಯ್ಯ ಅವರ ಪ್ರಭಾವ ಹೆಚ್ಚಾದರೆ ಸಹಜವಾಗಿಯೇ ಕೈ ಪಾಳೆಯದ ಸಚಿವರು ರೂಪಿಸುವ ಎಲ್ಲ ಕಾರ್ಯಕ್ರಮಗಳು ಕಾಂಗ್ರೆಸ್ ಹೈಕಮಾಂಡ್‍ನ ಶಕ್ತಿಯನ್ನು ಹೆಚ್ಚಿಸಲು ಬಳಕೆಯಾಗುತ್ತವೆ.

      ಸದಯದ ಪರಿಸ್ಥಿತಿಯಲ್ಲಿ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಐದು ರಾಜ್ಯಗಳ ಆರ್ಥಿಕ ಪರಿಸ್ಥಿತಿ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ನಿರ್ಣಾಯಕ ಪ್ರಭಾವ ಬೀರಲಿದ್ದು, ಇದೇ ಕಾರಣಕ್ಕಾಗಿ ಕಾಂಗ್ರೆಸ್ ಪಾಳೆಯ ಕರ್ನಾಟಕವನ್ನು ಬಳಸಿಕೊಳ್ಳಬಹುದು.

      ಆದರೆ ಅದಕ್ಕಾಗಿ ನಾನೇಕೆ ಮುಖ್ಯಮಂತ್ರಿಯಾಗಿದ್ದುಕೊಂಡು ಕೆಟ್ಟ ಹೆಸರು ತೆಗೆದುಕೊಳ್ಳಲಿ? ಅಧಿಕಾರಕ್ಕೆ ಬಂದ ನಂತರ ರೈತರ ಸಾಲ ಮನ್ನಾ, ಬೀದಿ ಬದಿಯ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡುವುದು ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇನೆ.

      ಇಷ್ಟಾದರೂ ದಿನ ಬೆಳಗಾದರೆ ಕಾಂಗ್ರೆಸ್ ಪಕ್ಷದ ಇಷ್ಟು ಶಾಸಕರು ಬಿಜೆಪಿಗೆ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ನಾನೂ ಹಲ ತಿಂಗಳ ಕಾಲ ಇಂತಹ ಪ್ರಯತ್ನಗಳನ್ನು ತಡೆಯುತ್ತಾ ಬಂದೆ.

       ಆದರೆ ಇನ್ನು ಅಂತಹ ಪ್ರಯತ್ನಗಳನ್ನು ತಡೆಯಲಾರೆ. ಕಾಂಗ್ರೆಸ್ ಪಕ್ಷದ ಹದಿನೈದಕ್ಕೂ ಹೆಚ್ಚು ಶಾಸಕರು ಬಿಜೆಪಿ ಜತೆ ಹೋಗುವುದಾದರೆ ಹೋಗಲಿ. ಆದರೆ ಯಾವ ಕಾರಣಕ್ಕೂ ಅವರು ಹೋಗುವುದನ್ನು ನಾನು ತಡೆಯುವುದಿಲ್ಲ.

      ಪರಿಣಾಮವಾಗಿ ಸರ್ಕಾರ ಉರುಳುತ್ತದೆ ಎಂದಾದರೆ ಉರುಳಲಿ. ನಾನು ಅಧಿಕಾರಕ್ಕೆ ಬಂದು ಏಳು ತಿಂಗಳಿಗಿಂತ ಹೆಚ್ಚು ಕಾಲವಾಯಿತು. ಈ ಅವಧಿಯಲ್ಲಿ ಉತ್ತಮವಾದ ಕಾರ್ಯಕ್ರಮಗಳನ್ನು ನೀಡಿದರೂ ಅಪವಾದ ತಪ್ಪುತ್ತಿಲ್ಲ.

       ದಿನ ಬೆಳಗಾದರೆ ಕೈ ಪಾಳೆಯವನ್ನು ಬಡಿದು ಹಾಕಲು ಜೆಡಿಎಸ್ ಯತ್ನಿಸುತ್ತಿದೆ ಎಂಬಂತಹ ಆರೋಪಗಳನ್ನು ಕೇಳಿ ಕೇಳಿ ಸಾಕಾಗಿದೆ. ಹೀಗಾಗಿ ಅಂತಹ ಆರೋಪಗಳನ್ನು ಹೊರುವ ಅಗತ್ಯವೂ ಇಲ್ಲ.ಈ ಸರ್ಕಾರವನ್ನು ಉಳಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.

       ಕುಮಾರಸ್ವಾಮಿ ಅವರ ಆಪ್ತರು ಹೇಳುವ ಪ್ರಕಾರ, ಸಧ್ಯದ ರಾಜಕೀಯ ಅರಾಜಕತೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರೇ ಮುಖ್ಯ ಕಾರಣ. ಅವರು ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿ ಹೆಚ್ಚಿಸುವ ಭರದಲ್ಲಿ ಜೆಡಿಎಸ್ ಪಕ್ಷವನ್ನು ಬಡಿದು ಹಾಕಲು ಹೊರಟಿದ್ದಾರೆ. ಇದಕ್ಕೆ ಅವಕಾಶ ನೀಡಲು ನಾನು ತಯಾರಿಲ್ಲ ಎಂಬುದು ಕುಮಾರಸ್ವಾಮಿ ಅವರ ಸಿಟ್ಟು.

      ಇದೇ ಕಾರಣಕ್ಕಾಗಿ ಇತ್ತೀಚಿನ ದಿನಗಳಲ್ಲಿ ಸಿದ್ಧರಾಮಯ್ಯ ಅವರ ಜತೆ ಮಾತುಕತೆ ನಡೆಸುವ ಸನ್ನಿವೇಶಗಳನ್ನು ಕುಮಾರಸ್ವಾಮಿ ಬೇಕೆಂದೇ ತಪ್ಪಿಸುತ್ತಿದ್ದಾರೆ.ಅವರ ಆಪ್ತರು ಹೇಳುವ ಪ್ರಕಾರ,ದೂರವಾಣಿಯಲ್ಲೂ ಉಭಯ ನಾಯಕರ ಮಧ್ಯೆ ಮಾತುಕತೆ ನಡೆಯುತ್ತಿಲ್ಲ.

       ಈ ಎಲ್ಲ ಕಾರಣಗಳಿಗಾಗಿ ಸರ್ಕಾರ ಉರುಳಿದರೆ ಉರುಳಲಿ ಎಂಬ ಮನ:ಸ್ಥಿತಿಗೆ ಬಂದಿರುವ ಕುಮಾರಸ್ವಾಮಿ,ಬಿಜೆಪಿ ನಾಯಕರು ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ ಎಂಬ ಮಾತಿಗೂ ಕಿವಿಗೊಡದಿರಲು ನಿರ್ಧರಿಸಿದ್ದಾರೆ ಎಂಬುದು ಅವರ ಆಪ್ತ ವಲಯಗಳ ಹೇಳಿಕೆ.

      ಹೀಗೆ ಸರ್ಕಾರದ ವಿಷಯದಲ್ಲಿ ಕುಮಾರಸ್ವಾಮಿ ತಳೆದ ನಿರ್ಧಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದಾರೆ ಎಂದಿರುವ ಮೂಲಗಳು,ಯಾವ ಸನ್ನಿವೇಶ ಬಂದರೂ ಎದುರಿಸಲು ಸಜ್ಜಾಗೋಣ ಎಂದೇ ಹೇಳಿದ್ದಾರೆ.

      ಹೀಗೆ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ಭುಗಿಲೆದ್ದಿರುವ ಸಂಘರ್ಷ ಕುತೂಹಲ ಕೆರಳಿಸಿದ್ದು ಮುಂದೇನು ಬೆಳವಣಿಗೆಗಳು ನಡೆಯಲಿವೆ? ಸರ್ಕಾರ ಉಳಿಯುತ್ತದೆಯೇ? ಉರುಳುತ್ತದೆಯೇ? ಎಂಬುದನ್ನು ಕಾದು ನೋಡಬೇಕಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here