ಕೋಮುವಾದ, ಅಸ್ಪೃಶ್ಯತೆಯಿಂದ ಹೊರ ಬನ್ನಿ

0
13

ದಾವಣಗೆರೆ:

      ಭಾರತೀಯರು ಕೋಮುವಾದ ಹಾಗೂ ಅಸ್ಪಶ್ಯತೆಯಿಂದ ಹೊರಬರಬೇಕೆಂದು ಹರಿಹರದ ಸಾಹಿತಿ ಭಿಕ್ಷಾವರ್ತಿಮಠ್ ಕರೆ ನೀಡಿದರು.
ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟಿನಲ್ಲಿ ಹರಿಹರ, ದಾವಣಗೆರೆ ಸಂಕ್ರಮಣ ಓದುಗರ ಬಳಗದಿಂದ ಏರ್ಪಡಿಸಿದ್ದ “ಮಾಸದ ಮಹತ್ವದ ಮಾತುಕತೆ ಗಾಂಧಿ ಚಿಂತನೆಗಳ ಪ್ರಸ್ತುತತೆ” ವಿಷಯ ಕುರಿತು ಮಾತನಾಡಿದ ಅವರು, ಭಾರತ ಮಸೀದಿ, ಮಂದಿರ ಮುಕ್ತವಾಗಿರಬೇಕೆಂಬುದು ಗಾಂಧಿಯ ಆಶಯವಾಗಿತ್ತು ಎಂದರು.

      ಗಾಂಧೀಜಿಯವರದು ಪ್ರಯೋಗಶೀಲ ಬದುಕಾಗಿದ್ದು, ಅವರು ಮೊದಲು ತಮ್ಮಲ್ಲೇ ತಾವು ಮೂರು ಹೋರಾಟಗಳನ್ನು ಗಂಭೀರವಾಗಿ ಮಾಡಿದರು. ತನ್ನ ವಿರುದ್ಧ ಹೋರಾಟ ಅಂದರೆ, ತನ್ನಲ್ಲಿರುವ ಕಾಮ, ಕ್ರೋಧ, ಮೋಹ, ಮದ-ಮತ್ಸರಗಳ ವಿರುದ್ಧ ಹೋರಾಡಿ, ತನ್ನ ಬದುಕನ್ನು ಸದಾ ವಿಮರ್ಶೆಗೆ ಒಡ್ಡಿದರು ಎಂದರು.

      ಬ್ರಿಟೀಷರ ವಿರುದ್ಧ ಹೋರಾಟ ಮಾಡುವುದರ ಜೊತೆಗೆ ಗ್ರಾಮೀಣ ಸಂಸ್ಕತಿ ಬಹುಮುಖ್ಯ ಎಂಬುದು ಗಾಂಧಿ ಅವರ ವಾದವಾಗಿತ್ತು. ಗ್ರಾಮೀಣ ಜಗತ್ತಿನಲ್ಲಿ ಬದುಕಿನ ಸಂಭ್ರಮ, ಸಮೃದ್ಧಿ, ಸಾರ್ಥಕ ಎಲ್ಲವೂ ಇದೆ. ಆದರೆ, ಅಲ್ಲಿಯ ಅನೈರ್ಮಲ್ಯ ನಿರ್ಮೂಲ ಮಾಡಿದರೆ ಹಳ್ಳಿಗಳು ಸುಂದರವಾಗುತ್ತವೆ. ನಾವೆಲ್ಲರೂ ದೇವರ ಮಕ್ಕಳು, ನಾವೆಲ್ಲ ಒಂದೆ ಎಂಬುದು ಗಾಂಧೀ ಅವರ ವಾದವಾಗಿತ್ತು. ಹೀಗಾಗಿ ಗಾಂಧೀಜಿ ಎಲ್ಲಾ ಕಾಲಕ್ಕೂ ಪ್ರಸ್ತುತರಾಗುತ್ತಾರೆ ಎಂದರು.

       ಕರುಣಾ ಜೀವ ಕಲ್ಯಾಣ ಟ್ರಸ್ಟಿನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ ಈಗ ಜಗತ್ತು ಎದುರಿಸುತ್ತಿರುವ ಅನೇಕ ಸವಾಲುಗಳು ಪರಿಸರ ಮಾಲಿನ್ಯ, ಮನೋ ಮಾಲಿನ್ಯ, ಭ್ರಷ್ಟಾಚಾರ, ಕೋಮುವಾದ, ಮಸೀದಿ ಮಂದಿರಗಳ ಜಗಳ ಇವೆಲ್ಲಕೂ ಗಾಂಧೀ ಚಿಂತನೆಗಳಲ್ಲಿ ಪರಿಹಾರವಿದೆ. ಆದ್ದರಿಂದ ಗಾಂಧೀಜಿಯವರ ಆದರ್ಶ ಚಿಂತನೆಗಳು ಅತ್ಯಮೂಲ್ಯ ಎಂದು ನುಡಿದರು.

       1946ರಲ್ಲಿ ಗಾಂಧೀಜಿಯವರು ಕಾಂಗ್ರೇಸ್ಸಿಗರಿಗೆ ಮುಂದುವರೆಸಿಕೊಂಡು ಹೋಗಲು ತಿಳಿಸಿದ ವಿಧಾಯಕ ಕಾರ್ಯಕ್ರಮಗಳಾದ ಕೋಮುಸಾಮರಸ್ಯ, ಅಸ್ಪಶ್ಯತಾ ನಿವಾರಣೆ, ಮದ್ಯಪಾನ ನಿಷೇಧ, ಗ್ರಾಮ ನೈರ್ಮಲ್ಯ, ನೈತಿಕ ಅಥವಾ ಮೂಲ ಶಿಕ್ಷಣ, ವಯಸ್ಕರ ಶಿಕ್ಷಣ, ಮಹಿಳಾ ಶಿಕ್ಷಣ, ಸ್ಥಳೀಯ ಭಾಷಾಭಿವೃದ್ಧಿ, ರೈತೋದ್ಧಾರ, ಕಾರ್ಮಿಕೋದ್ದಾರ, ಅಸಹಕಾರ ಚಳುವಳಿಯ ಮಹತ್ವ ಮುಂತಾದ ರಚನಾತ್ಮಕ ಕಾರ್ಯಗಳು ಇಂದಿಗೂ ಸಹ ಮನುಕುಲದ ಉಳಿವಿಗೆ ಸದಾ ಅತ್ಯಗತ್ಯವಾಗಿದೆ ಎಂದರು.

       ನಿವೃತ್ತ ಪ್ರಾಚಾರ್ಯರಾದ ಎ.ಕೆ.ಹಂಪಣ್ಣ ಮಾತನಾಡಿ, ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಬಂದ ಭಿನ್ನಾಭಿಪ್ರಾಯಗಳು, ಜೊತೆಗೆ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆ ಬೇಡವೆಂಬ ಗಾಂಧೀಜಿಯ ನಿಲುವು, ಇದು ಐತಿಹಾಸಿಕ ಭಿನ್ನಭಿಪ್ರಾಯವಾದರೂ ಇಬ್ಬರಲ್ಲೂ ಮನಪರಿವರ್ತನೆ ಆಯಿತು ಎಂದರು.

        ಎ.ಆರ್.ಜಿ ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ ಹಲಸಂಗಿ ಮಾತನಾಡಿ, “ಗಾಂಧಿ ಚಿಂತನೆಗಳು ನಮ್ಮ ಜೀವನಕ್ಕೆ, ಸಮಾಜಕ್ಕೆ ಅತ್ಯುಪಯುಕ್ತವಾದರೂ ನಾವೇಕೆ ಗಂಭೀರವಾಗಿ ಅನುಸರಿಸುತ್ತಿಲ್ಲ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

      ಎ.ವಿ.ಕಮಲಮ್ಮ ಕಾಲೇಜಿನ ಇಂಗ್ಲೀಷ್ ಪ್ರೋಫೆಸರ್ ಆರ್.ಸಿ.ಗೌಡ ಮಾತನಾಡಿ, ಈ ದೇಶದ ಶೇ.90 ರಷ್ಟು ಜನರು ಕೇವಲ ಶೇ.10 ರಷ್ಟಿರುವ ರಾಜಕಾರಣಿಗಳು, ಬಂಡವಾಳಷಾಹಿ, ಪರೋಹಿತಷಾಹಿ ಈ ಮೂವರ ಹಿಡಿತದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಓಂಕಾರಯ್ಯ ತವನಿಧಿ, ಕಲೀಂಭಾಷ, ಪಂಚಾಕ್ಷರಯ್ಯ, ಎಂ.ಗಂಗಾಧರ್, ಅನೀಸ್ ಪಾಷ, ರಾಜೇಂದ್ರ ನೀಲಗುಂದ, ಆವರಗೆರೆ ರುದ್ರಮುನಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here