ಕನ್ನಡ ನಾಡು ನುಡಿ ಹಿರಿಮೆಯ ಕಡೆಗಣನೆಗೆ

0
15

ಬೆಂಗಳೂರು

        ಗದಗ ಜಿಲ್ಲೆಯಲ್ಲಿ ತಯಾರಿಸುವ ಪಾದರಕ್ಷೆ ಅನ್ನು ಕೊಲ್ಲಪುರ ಚಪ್ಪಲಿ ಎಂದು, ಇಲ್ಲಿ ಸಿದ್ದಪಡಿಸುವ ಸೀರೆಗಳನ್ನು ಮಹಾರಾಷ್ಟ್ರದ ಸೀರೆಗಳೆಂದು ಎಂದು ಹೇಳಿ ನಾವೇ ಮಾರಾಟ ಮಾಡುತ್ತಿರುವುದು ಕನ್ನಡ ನಾಡು ನುಡಿ ಹಿರಿಮೆಯ ಕಡೆಗಣನೆಗೆ ಸಾಕ್ಷಿ ಎಂದು ಖ್ಯಾತ ಸಾಹಿತಿ ಪದ್ಮಶ್ರೀ .ಕೆ.ಎಸ್. ನಿಸಾರ್ ಅಹಮದ್ ಅವರು ಬೇಸರ ವ್ಯಕ್ತಪಡಿಸಿದರು.

        ನಗರದ ಕುಮಾರಕೃಪಾದಲ್ಲಿನ ಗಾಂಧಿ ಭವನದಲ್ಲಿ ಸಪ್ನ ಬುಕ್ ಹೌಸ್ ಆಯೋಜಿಸಿದ್ದ, ಕನ್ನಡ ರಾಜ್ಯೋತ್ಸವ ಪ್ರಯುಕ್ತ ‘ಕನ್ನಡ-ಅಂದು-ಇಂದು-ಮುಂದು’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕನ್ನಡದ ವಸ್ತುಗಳು ಎಂದು ಹೇಳಿ ಮಾರಾಟ ಮಾಡಲು ಕೆಲವರು ನಾಚಿಕೆ ಪಡುವುದು ಏಕೆ ಎಂದು ಪ್ರಶ್ನಿಸಿದರು.

       ಕನ್ನಡ ನಾಡಿನಲ್ಲಿ ಉತ್ಪಾದಿಸುವ ಎಲ್ಲಾ ವಸ್ತುಗಳನ್ನು ಮಾರಾಟ ಮಾಡುವಾಗ ಕನ್ನಡತನ ಮೆರೆಯಬೇಕು ನಮ್ಮಲ್ಲಿನ ಗುಣಮಟ್ಟದ ವಸ್ತುಗಳನ್ನು ಬೇರೆ ಭಾಷೆಯ ಹೆಸರೇಳಿ ವಿಮುಖವಾಗುವುದು ನಾಡಿಗೆ ಮಾಡುವ ಅಪಮಾನ ಎಂದು ಹೇಳಿದರು.

        ಕನ್ನಡ ಅಭಿವೃದ್ಧಿಗಾಗಿ ದೊಡ್ಡ ಮಳಿಗೆ, ಶಾಲಾ ಶಿಕ್ಷಣದಿಂದಲೇ ಕನ್ನಡ ಬೇಕು ಸೇರಿದಂತೆ ಅನೇಕ ವಿಷಯಗಳ ತಕ್ಕಂತೆ ಕಾನೂನು ರೂಪಿಸಲು ಮುಂದಾದರೆ, ನ್ಯಾಯಾಲಯ ಇದಕ್ಕೆ ಅಡ್ಡಗಾಲು ಹಾಕುವುದರಿಂದ ನಾವು ಭಾಷಾ ಅಭಿವೃದ್ಧಿಗೆ ಯಾವ ಮಾರ್ಗ ಅನುಸರಿಸಬೇಕು ಎನ್ನುವ ಪ್ರಶ್ನೆ ಎದ್ದಿದೆ ಎಂದು ನುಡಿದರು.

      ಶೈಕ್ಷಣಿಕ ಹಂತದಲ್ಲಿಯೇ ಕನ್ನಡ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿ ಜಾರಿಗೊಳಿಸಲು ಮುಂದಾಗುವ ಕಾನೂನುಗಳಿಗೆ ನ್ಯಾಯಾಲಯಗಳು ನಮಗೆ ಕಂಟಕವಾಗುತ್ತೀವೆ ಭಾಷೆಯ ಬೆಳವಣಿಗೆಗೆ ಕಂಟಕವಾಗಿ ಪರಿಣಮಿಸಿದೆ ಎಂದರು.

ಭಾಷಾ ಕಾಯ್ದೆ ಅಗತ್ಯ

      ಕನ್ನಡ ಭಾಷೆ ಅಭಿವೃದ್ಧಿಗೆ ‘ ಪ್ರತ್ಯೇಕ ಭಾಷಾ ಕಾಯ್ದೆ’ ಜಾರಿಗೆ ಚಿಂತನೆ ನಡೆಸಲಾಗಿದೆ.ಆದರೆ, ಹೊರರಾಜ್ಯದ ಐಎಎಸ್ ಅಧಿಕಾರಿಗಳು ಈ ಕಾಯ್ದೆಗೆ ಜಾರಿಗೊಳಿಸಲು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ .ಎಸ್.ಜಿ.ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು.

      ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮಾತನಾಡಿ,ವಚನಕಾರರ, ವಚನ ಸಾಹಿತ್ಯದ ಚಳುವಳಿ ಪ್ರಪಂಚದಲ್ಲಿಯೇ ಎಲ್ಲೂ ಇಲ್ಲ. ಜೊತೆಗೆ ಆದಿಕವಿ ಪಂಪ ಸೇರಿ ಹಲವು ಸಾಹಿತ್ಯವೂ ಕನ್ನಡ ಪರಂಪರೆಗೆ ಕೊಡುಗೆ ನೀಡಿದೆ ಎಂದು ನುಡಿದರು.

     ದೇಶದೊಳಗೆ ಪುಸ್ತಕ ಸಾಹಿತ್ಯ ಮರೆಯಾಗುವ ಸ್ಥಿತಿಯಲ್ಲಿವೆ ಎನ್ನುವ ಮಾತುಗಳಿವೆ.ಯುವ ಪೀಳಿಗೆ ಮೊಬೈಲ್, ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಮುಳಗಿದೆ.ಆದರೆ, ಈ ಹೊಸ ಲೇಖಕರಿಗೆ ಮಾರ್ಗದರ್ಶನ ನೀಡುವಂತೆ ಆಗಬೇಕು ಎಂದು ಹೇಳಿದರು.

ಕಠಿಣ ಕಾನೂನು ಜಾರಿ

     ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಬೆಂಗಳೂರಿನಲ್ಲಿ ಕೆಲ ಖಾಸಗಿ ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ,ದಂಡ ವಿಧಿಸುವ ನಿಯಮ ಇದೆ.ಅದೇ ರೀತಿ ಕೆಲ ಕಂಪೆನಿಗಳಲ್ಲೂ ಇದೇ ಪರಿಸ್ಥಿತಿ ಇದೆ.ಹೀಗಾಗಿ, ಅಭಿವೃದ್ಧಿ ಪ್ರಾಧಿಕಾರವು ಕಠಿಣ ಕಾನೂನು ಜಾರಿಗೆ ತಂದು ಆರು ತಿಂಗಳಲ್ಲಿ ಕನ್ನಡ ಕಲಿಯುವಂತೆ ಮಾಡಬೇಕು ಎಂದರು.

      ವಿಚಾರ ಸಂಕಿರಣ ಬಳಿಕ ಪ್ರಾಚೀನ ಕನ್ನಡ ಸಾಹಿತ್ಯ ದಲ್ಲಿ ಕನ್ನಡ, ನವೋದಯ ಕಾಲದ ಕವನಗಳಲ್ಲಿ ಕನ್ನಡ, ಕನ್ನಡ ಚಲನಚಿತ್ರ- ನಾಟಕಗಳಲ್ಲಿ ಕನ್ನಡ, ಕನ್ನಡ ಮಾಧ್ಯಮ- ಶಿಕ್ಷಣದ ಬಿಕ್ಕಟ್ಟು ಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ವಿಚಾರಸಂಕಿರಣ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಸಪ್ನ ಬುಕ್ ಹೌಸ್ ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಾ, ದೊಡ್ಡೆಗೌಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here