ಮೈತ್ರಿ ಧರ್ಮಕ್ಕೆ ದ್ರೋಹ ಬಗೆದ ಕಾಂಗ್ರೇಸ್: ದೇವೇಗೌಡ

0
13

ಬೆಂಗಳೂರು

    ಸರ್ಕಾರ ರಚಿಸುವ ಸಂದರ್ಭದಲ್ಲಿ ಯಾವ ಪಕ್ಷಕ್ಕೆ ಯಾವ ಖಾತೆಗಳು ಸೇರುತ್ತವೋ? ಆ ಖಾತೆಗಳ ವ್ಯಾಪ್ತಿಯ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಆಯಾ ಪಕ್ಷಕ್ಕೆ ಸಲ್ಲಬೇಕು ಎಂದು ತೀರ್ಮಾನವಾಗಿದ್ದರೂ ಕಾಂಗ್ರೆಸ್ ನಾಯಕರು ಅದನ್ನು ಉಲ್ಲಂಘಿಸುತ್ತಿರುವುದು ಮೈತ್ರಿ ಧರ್ಮಕ್ಕೆ ವಿರುದ್ಧ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

      ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು ಸಂಪುಟ ಪುನರ್ರಚನೆಯ ನಂತರ ದಿಲ್ಲಿಗೆ ಬರುವಾಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್ ಅವರ ಬಳಿ ಈ ವಿಷಯ ತಿಳಿಸಿದ್ದರೂ ಸರ್ಕಾರ ರಚನೆಯ ಸಂದರ್ಭದಲ್ಲಿ ನಡೆದ ಮಾತುಕತೆಯನ್ನು ಉಲ್ಲಂಘಿಸುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.

       ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಡಿಎ, ಕೆಆರ್‍ಡಿಎಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಕೈ ಪಾಳೆಯದವರನ್ನು ನೇಮಕ ಮಾಡುವ ಕ್ರಮ ಸಮರ್ಥನೀಯವಲ್ಲ.ಇದು ಮೈತ್ರಿ ಧರ್ಮದ ವಿರೋಧಿ ನಡವಳಿಕೆ ಎಂದು ದೇವೇಗೌಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

        ಈ ಕುರಿತು ದೆಹಲಿಗೆ ಹೋಗುವಾಗ ವಿಮಾನದಲ್ಲೇ ಕೆ.ಸಿ.ವೇಣುಗೋಪಾಲ್ ಅವರಿಗೆ ವಿಷಯ ತಿಳಿಸಲಾಗಿತ್ತು.ಮತ್ತವರು ಇದನ್ನು ನಮ್ಮ ಮಟ್ಟದಲ್ಲೇ ಸರಿಪಡಿಸಿಕೊಳ್ಳೋಣ.ಎಐಸಿಸಿ ಅಧ್ಯಕ್ಷರ ತನಕ ಹೋಗುವುದು ಬೇಡ ಎಂದು ಹೇಳಿದ್ದರು.

        ಅವರು ಹೇಳಿದ ನಂತರ ನಾನು,ಮುಖ್ಯಮಂತ್ರಿಗಳು ಮೌನವಾಗಿದ್ದೆವು.ಆದರೆ ಮರಳಿ ಅಂತಹದೇ ಯತ್ನ ನಡೆದಿದೆ ಎಂದರೆ ರಾಜ್ಯ ಕಾಂಗ್ರೆಸ್‍ನಲ್ಲಿ ಹೈಕಮಾಂಡ್ ಅನ್ನು ಉಲ್ಲಂಘಿಸುವ ಕೆಲಸ ಸಾಂಗೋಪಾಂಗವಾಗಿ ನಡೆದಿದೆ.

      2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಜೆಡಿಎಸ್ ಪಕ್ಷವನ್ನು ಒಡೆಯಲು ಅಂದಿನ ಪ್ರಮುಖ ನಾಯಕರೊಬ್ಬರು ತಮ್ಮ ಬೆಂಬಲಿಗರ ಮೂಲಕ ಪ್ರಯತ್ನ ನಡೆಸಿದರು.ಆದರೆ ನಾನು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ,ಈ ಮೈತ್ರಿ ಇನ್ನು ಉಳಿಯುವುದು ಕಷ್ಟ.ಹೀಗಾಗಿ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ ಎಂದು ಹೇಳಿ ಬಂದಿದ್ದೆ.

        ಆದರೆ ಅಷ್ಟರಲ್ಲೇ ಚುನಾವಣೆ ಎದುರಿಸಲು ಆತಂಕಗೊಂಡ ಶಾಸಕರು ಬಿಜೆಪಿ ಜತೆ ಸೇರಿ ಪರ್ಯಾಯ ಸರ್ಕಾರ ರಚಿಸಿದರು.ಈಗ ಪರಿಸ್ಥಿತಿ ಭಿನ್ನವಾಗಿದೆ.ಜೆಡಿಎಸ್ ಪಕ್ಷವನ್ನು ಒಡೆಯುವ ಯತ್ನ ನಡೆಯದೇ ಇದ್ದರೂ,ಜೆಡಿಎಸ್‍ಗೆ ದಕ್ಕಬೇಕಿರುವ ಅಧಿಕಾರ ಕೇಂದ್ರಗಳನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ.ಇದು ಕೂಡಾ ಮುಂದಿನ ದಿನಗಳಲ್ಲಿ ಮೈತ್ರಿ ಪಕ್ಷಗಳ ಮಧ್ಯೆ ದೊಡ್ಡ ಮಟ್ಟದ ಬಿರುಕಿಗೆ ಕಾರಣವಾಗ ಬಹುದು.

       ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿ.ಸರ್ಕಾರ ರಚನೆಯ ಸಂದರ್ಭದಲ್ಲಿ ಆದ ಮಾತುಕತೆಯ ಪ್ರಕಾರ ಅಧಿಕಾರ ಹಂಚಿಕೆ ಕಾರ್ಯ ನಡೆಯಲಿ ಎಂದು ಸ್ಪಷ್ಟಪಡಿಸಿ.ಇಲ್ಲದಿದ್ದರೆ ಮುಂದಿನ ಪರಿಣಾಮಗಳಿಗೆ ನಾನು ಹೊಣೆಯಲ್ಲ.

        ರಾಜ್ಯದಲ್ಲಿ ಕೋಮುವಾದಿಗಳು ಅಧಿಕಾರಕ್ಕೆ ಬರದಂತೆ ತಡೆಯಲು ನಾವು ನಮ್ಮ ಪ್ರಯತ್ನ ಮಾಡಿದ್ದೇವೆ.ಆದರೆ ಜಾತ್ಯಾತೀತ ಶಕ್ತಿಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಎಡವುತ್ತಿದೆ ಎಂಬ ಬಾವನೆ ಪ್ರಾದೇಶಿಕ ಶಕ್ತಿಗಳ ನಾಯಕರಲ್ಲಿ ಬಂದಿದೆ.

         ಕರ್ನಾಟಕದ ಬೆಳವಣಿಗೆಯನ್ನೂ ಪ್ರಾದೇಶಿಕ ಪಕ್ಷಗಳ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.ಹೀಗಾಗಿ ಕಾಂಗ್ರೆಸ್ ಮೈತ್ರಿಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳದಂತೆ ಎಚ್ಚರಿಕೆ ವಹಿಸಿ ಎಂದು ದೇವೇಗೌಡರು ಸ್ಪಷ್ಟ ಮಾತುಗಳಲ್ಲಿ ರಾಹುಲ್ ಗಾಂಧಿ ಅವರಿಗೆ ಹೇಳಿದ್ದು ಈ ಬೆಳವಣಿಗೆ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here