ಭುಗಿಲೆದ್ದ ಕಾಂಗ್ರೆಸ್ ಶಾಸಕರ ಅಸಮಾಧಾನ

ಬೆಂಗಳೂರು

       ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಿಯೋಜಿತಗೊಂಡಿದ್ದರೂ, ಘೋಷಣೆ ಆಗದ ಹಿನ್ನೆಲೆ ಕಾಂಗ್ರೆಸ್ ಶಾಸಕರ ಅಸಮಾಧಾನ ಭುಗಿಲೆದ್ದಿದ್ದು ಬೆಂಬಲಿಗರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

         ಶಾಸಕರು ತಮ್ಮ ಬೇಸರವನ್ನು ನೇರವಾಗಿ ಜೆಡಿಎಸ್ ಮೇಲೆ ವ್ಯಕ್ತಪಡಿಸಿದ್ದು, ಪಕ್ಷದ ರಾಜ್ಯ ನಾಯಕರ ನಿಲುವು ಆಲಿಸಿ, ಮುಂದಿನ ನಿರ್ಧಾರಕ್ಕೆ ಚಿಂತನೆ ನಡೆಸಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್, ನಾನೇನೂ ಅದೇ ಅಧ್ಯಕ್ಷ ಸ್ಥಾನ ಬೇಕು ಅಂತಾ ಅರ್ಜಿ ಹಾಕಿರಲಿಲ್ಲ ಎಂದರು.

        ಕಾಂಗ್ರೆಸ್ ಪಕ್ಷವನ್ನ ನಮ್ಮ ಭಾಗದಲ್ಲಿ ಬಲಿಷ್ಠಗೊಳಿಸಲು ಮಂತ್ರಿ ಸ್ಥಾನ ಕೇಳಿದ್ದೆ. ಆದ್ರೆ ಹೈಕಮಾಂಡ್ ಈ ಬಗ್ಗೆ ಯೋಚನೆ ಮಾಡಬೇಕು. ಪಾಪ ತಮ್ಮ ಕುಟುಂಬಕ್ಕೆ ಅದನ್ನ ಜೆಡಿಎಸ್ನವರು ಕೊಟ್ಟುಕೊಳ್ಳಲಿ. ಯಾರು ಬೇಡ ಅಂದ್ರು. ತಾಂತ್ರಿಕ ಕಾರಣಗಳನ್ನ ನೆಪವಾಗಿ ಇಟ್ಟುಕೊಳ್ಳೋದು ಬೇಡ. ಎಸ್‍ಎಸ್‍ಎಲ್ಸಿ ಪಾಸಾಗದಿರೋರು ಎರಡೆರಡು ಖಾತೆಗಳನ್ನ ನಿಭಾಯಿಸಿದ ಉದಾಹರಣೆಗಳಿವೆ ಎಂದು ಹೇಳಿದ್ದಾರೆ.

        ರಾಜಕೀಯ ಇಚ್ಛಾಶಕ್ತಿ ಬೇಕು: ಕೆಲ ಅಧಿಕಾರಿಗಳಿಗೆ ನಿವೃತ್ತಿಯ ಬಳಿಕವೂ ಅಧಿಕಾರ ಬೇಕು ಅನ್ನೋ ಆಸೆ ಇದೆ. ಇದನ್ನೆಲ್ಲ ನಿಯಂತ್ರಿಸಲು ರಾಜಕೀಯ ಇಚ್ಛಾಶಕ್ತಿ ಬೇಕು. ಎಲ್ಲವನ್ನೂ ಅಧಿಕಾರಿಗಳು ಮಾಡೋದಾದ್ರೆ ಮುಖ್ಯಮಂತ್ರಿಗಳು ಯಾಕೆ ಬೇಕು ? ಮುಖ್ಯ ಕಾರ್ಯದರ್ಶಿ ಸಾಕಲ್ವಾ ? ಎಂದು ಪ್ರಶ್ನಿಸಿದರು.

         ಇದು ಎಸ್. ಸೋಮಶೇಖರ್, ಸುಬ್ಬಾರೆಡ್ಡಿ, ಸುಧಾಕರ್ ಪ್ರಶ್ನೆ ಅಲ್ಲ. ಈ ಬಗ್ಗೆ ಹೈಕಮಾಂಡ್ ಚರ್ಚೆ ಮಾಡಲಿ ಎಂದ ಅವರು, ತಮಗೆ ಮಾಲಿನ್ಯ ನಿಯಂತ್ರಣ ತಪ್ಪಿದ ವಿಚಾರ ಪ್ರಸ್ತಾಪಿಸಿ, ಯಾವ ಸದುದ್ದೇಶದಿಂದ ಸಿಎಂ ಬ್ರೇಕ್ ಹಾಕಿದ್ದಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

       ರಾಜೀನಾಮೆಗೆ ನಿರ್ಧಾರ: ಶಾಸಕ ಎಸ್. ಟಿ. ಸೋಮಶೇಖರ್ಗೆ ನಿಗಮ ಮಂಡಳಿ ತಡೆ ಹಿಡಿದ ಹಿನ್ನೆಲೆ ಅವರ ಬೆಂಬಲಿಗರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಮೂವರು ಬಿಬಿಎಂಪಿ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರಿಂದ ಸಾಮೂಹಿಕ ರಾಜೀನಾಮೆಗೆ ಚಿಂತನೆ ನಡೆದಿದೆ.

          ಬಿಬಿಎಂಪಿ ಸದಸ್ಯರಾದ ರಾಜಣ್ಣ, ವಾಸು ಮತ್ತು ಆರ್ಯ ಶ್ರೀನಿವಾಸ್ ರಿಂದ ರಾಜೀನಾಮೆಗೆ ನಿರ್ಧಾರ ಕೈಗೊಂಡಿರುವವರು. ಅಲ್ಲದೇ ಇವರು ಕಾಂಗ್ರೆಸ್ ಪಟ್ಟಿಯನ್ನು ತಡೆ ಹಿಡಿಯುವುದು ಜೆಡಿಎಸ್ ಮಾಡಿದ ಅವಮಾನ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಅವರೆಲ್ಲಾ ಹೇರೋಹಳ್ಳಿಯಲ್ಲಿ ಸಭೆ ಸೇರಿದ್ದು ಚರ್ಚೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ಗೆ ರಾಜೀನಾಮೆ ಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

         ಅಂಕಿತಕ್ಕೆ ಮನವಿ: ಇನ್ನು ಡಿಸಿಎಂ ಡಾ. ಜಿ ಪರಮೇಶ್ವರ್ ಮಾಧ್ಯಮದ ಜತೆ ಮಾತನಾಡಿ, ಕಾಂಗ್ರೆಸ್ ನೀಡಿದ ಪಟ್ಟಿಗೆ ಅಂಕಿತ ಹಾಕುವಂತೆ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಮನವಿ ಮಾಡುತ್ತೇನೆ. ಸಿಎಂ ಯಾವ ಕಾರಣಕ್ಕೆ ಕೈ ಬಿಟ್ಟಿದ್ದಾರೆ ಗೊತ್ತಿಲ್ಲ. ಪಕ್ಷ ಕೊಟ್ಟ ಪಟ್ಟಿಯನ್ನ ಸಿಎಂ ಪ್ರಶ್ನೆ ಮಾಡಿಲ್ಲ. ಜೊತೆಗೆ ಪಟ್ಟಿಯನ್ನು ಸಿಎಂ ರಿಜೆಕ್ಟ್ ಮಾಡಿಲ್ಲ ಎಂದಿದ್ದಾರೆ. ಕೆಲವು ಶಾಸಕರು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ಸಮಯ ಕೊಡಿ ಎಂದು ಕೇಳಿದ್ದಾರೆ. ಇವಾಗ ಮೂರು ಜನ ಬಂದು ಭೇಟಿ ಮಾಡಿದ್ರು. ಯಾರು ಭೇಟಿ ಮಾಡುತ್ತಾರೆ ಎಂದು ಹೇಳಲು ಆಗಲ್ಲ ಅದು ಸೀಕ್ರೆಟ್ ಎಂದು ನಕ್ಕರು.

          ನಾನು, ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿ ಪಟ್ಟಿ ರೆಡಿ ಮಾಡಿದ್ದು. ಯಾಕೆ ಅವ್ರ ಹೆಸರು ಕೈ ಬಿಟ್ಟರೋ ಗೊತ್ತಿಲ್ಲ. ಈ ಬಗ್ಗೆ ಸಿಎಂಗೆ ಸಮಜಾಯಿಷಿ ಕೊಡುತ್ತೇನೆ. ಶಾಸಕ ಡಾ. ಕೆ. ಸುಧಾಕರ್ ಹೇಳಿದಂತೆ ರಾಹುಲ್ ಗಾಂಧಿಗೆ ಅವಮಾನ ಅಲ್ಲ. ಒಂದಿಷ್ಟು ಕಾನೂನಿನ ಗೊಂದಲ ಇರಬಹುದು. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನೇಮಕ ಮಾಡ್ತೀವಿ ಎಂದರು.
ಶಾಸಕ ಸೋಮಶೇಖರ್ ಬೆಂಬಲಿಗರ ರಾಜೀನಾಮೆ ವಿಚಾರ, ರಾಜೀನಾಮೆ ಕೊಡುವ ಅಗತ್ಯ ಇಲ್ಲ. ನಿಗಮ-ಮಂಡಳಿ ವಿಚಾರ ಸಿಎಂ ಬಳಿ ನಾನೇ ಮಾತಾಡ್ತೀನಿ. ಕೆಲವು ಕಾನೂನಿನ ಗೊಂದಲಗಳಿದ್ದೇವೆ, ಸಿಎಂ ಜೊತೆ ಚರ್ಚಿಸಿ ಸ್ಪಷ್ಟನೆ ನೀಡ್ತೇವೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap