ನಗರದಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ, ಮಾನವ ಸರಪಳಿ: ನೋಟು ಅಮಾನ್ಯೀಕರಣ-ದೇಶದ ಕರಾಳ ದಿನ

0
44

ತುಮಕೂರು

       ಕಳೆದ ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ರೂ. 500 ಮತ್ತು ರೂ. 1000 ಮುಖಬೆಲೆಯ ‘ನೋಟು ಅಮಾನ್ಯೀಕರಣ’ಗೊಳಿಸಿದ ದಿನವು ಈ ದೇಶದ ಇತಿಹಾಸದಲ್ಲಿ ಕರಾಳ ದಿನವಾಗಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಟೀಕಿಸಿದರು.
ಅವರು ಶುಕ್ರವಾರ ಬೆಳಗ್ಗೆ ತುಮಕೂರು ನಗರದ ಟೌನ್‌ಹಾಲ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಾಂಕೇತಿಕವಾಗಿ ಕತ್ತೆಯೊಂದನ್ನು ಮುಂದಿಟ್ಟುಕೊಂಡು ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಇರಿಸಿ ನಡೆಸಲಾದ ಪ್ರತಿ‘ಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

         ನೋಟು ಅಮಾನ್ಯೀಕರಣ ಪ್ರಕಟಿಸುವಾಗ ನರೇಂದ್ರ ಮೋದಿ ಅವರು ತಮಗೆ 50 ದಿನಗಳ ಕಾಲಾವಕಾಶ ಕೊಡಿ. ಅಷ್ಟರಲ್ಲಿ ಸುಧಾರಣೆ ತರುತ್ತೇನೆ. ಇಲ್ಲದಿದ್ದರೆ ನನ್ನನ್ನು ಸುಟ್ಟುಬಿಡಿ ಎಂದು ದೇಶದ ಜನತೆಗೆ ಹೇಳಿದ್ದರು. ಆದರೆ 50 ದಿನಗಳಿರಲಿ, ಈಗ 700 ದಿನಗಳೇ ದಾಟಿವೆ. ಆದರೂ ದೇಶದಲ್ಲಿ ಏನೂ ಸುಧಾರಣೆ ಆಗಿಲ್ಲ. ಮೋದಿ ಈಗೇನು ಮಾಡುತ್ತಾರೆ? ಎಂದು ಪ್ರಶ್ನಿಸಿದರು.

           ದೇಶದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದುಬಿದ್ದಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಜನಸಾಮಾನ್ಯರ ಬದುಕು ಕಷ್ಟಕರವಾಗುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ. ಇವುಗಳಿಗೆಲ್ಲ ಕಾರಣ ಮೋದಿ ಕೈಗೊಂಡ ಅವಿವೇಕದ ತೀರ್ಮಾನ ಎಂದು ಟೀಕಿಸಿದ ಅವರು, ಮೋದಿ ಅವರು ದೇಶದ ಜನರನ್ನು ವಂಚಿಸಿದ್ದಾರೆ. ಅವರು ಅಧಿಕಾರ ಬಿಟ್ಟು ಕೆಳಗಿಳಿಯಬೇಕು. ರಾಜಿನಾಮಿ ನೀಡಿ ಜನರ ಮುಂದೆ ಬರಬೇಕು. ಜೊತೆಗೆ ಮೋದಿಯವರ ವಿರುದ್ಧ ಪ್ರಜ್ಞಾವಂತ ಜನರು, ವಿಶೇಷವಾಗಿ ವಕೀಲರು ಮೊಕದ್ದಮೆ ಹೂಡಬೇಕು ಎಂದು ಅಭಿಪ್ರಾಯಪಟ್ಟರು.

         ಪ್ರಧಾನಿ ಮೋದಿಯವರನ್ನು ಗುಳ್ಳೆನರಿಗೆ ಹೋಲಿಸಿದ ಜಯಚಂದ್ರ, ಇಲ್ಲಿ ಸಾದಾಪ್ರಾಣಿಯಾದ ಕತ್ತೆ ಬದಲು ನರಿಯನ್ನು ಇರಿಸಬೇಕಿತ್ತು ಎಂದು ಉದ್ಗರಿಸಿದರು.

ಬಿಜೆಪಿಗೆ ಪಾಠ ಕಲಿಸಬೇಕು

           ತುಮಕೂರಿನ ಮಾಜಿ ಶಾಸಕ ಡಾ. ಎಸ್.ರಫೀಕ್ ಅಹಮದ್ ಮಾತನಾಡಿ, ನೋಟಿನ ಅಮಾನ್ಯೀಕರಣದಿಂದ ಏನೂ ಪ್ರಯೋಜನವಾಗಲಿಲ್ಲ. ಆರ್ಥಿಕ ಸುಧಾರಣೆಯೂ ಆಗಲಿಲ್ಲ. 2 ವರ್ಷಗಳ ಬಳಿಕವೂ ರೈತರು, ವ್ಯಾಪಾರಸ್ಥರು ಇನ್ನೂ ಬವಣೆ ಪಡುತ್ತಿದ್ದಾರೆ. ವ್ಯಾಪಾರದ ಮೇಲೆ ದೊಡ್ಡ ಹೊಡೆತ ಬಿದ್ದಿದ್ದು, ಇನ್ನೂ ಚೇತರಿಸಿಕೊಳ್ಳಲು ಆಗಿಲ್ಲ. ನಿರುದ್ಯೋಗ ಅಧಿಕವಾಗಿದೆ.

       ನೋಟು ಅಮಾನ್ಯೀಕರಿಸುವಾಗ ಕಪ್ಪುಹಣ ಮತ್ತು ಖೋಟಾನೋಟಿನ ಬಗ್ಗೆ ಮೋದಿ ದೊಡ್ಡದಾಗಿ ಮಾತನಾಡಿದ್ದರಾದರೂ, ಈ ಎರಡು ವರ್ಷಗಳಲ್ಲಿ ಆ ವಿಷಯದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಜಿಎಸ್‌ಟಿ ಸಹ ಅವೈಜ್ಞಾನಿಕವಾಗಿದ್ದು, ವ್ಯಾಪಾರಕ್ಕೆ ಹೊಡೆತ ಬಿದ್ದಿದೆ ಎಂದು ಕಟುಟೀಕೆ ಮಾಡಿದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಮೋದಿ ಅಧಿಕಾರದ ಕೌಂಟ್‌ಡೌನ್

         ಮತ್ತೋರ್ವ ಮಾಜಿ ಶಾಸಕ ಜಿ.ಎಸ್.ನಾರಾಯಣ್ ಮಾತನಾಡುತ್ತ, ನೋಟಿನ ಅಮಾನ್ಯೀಕರಣವಾದ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ತುಂಬ ದುರ್ಬಲವಾಗಿದೆ. ಇದಕ್ಕೆ ಮೋದಿಯವರೇ ಕಾರಣ. ಮೋದಿ ಅವರು ಮಾಡುತ್ತಿದ್ದ ಮೋಡಿಯು ಕಾಲಕ್ರಮೇಣ ಕಡಿಮೆಯಾಗುತ್ತಿದ್ದು, ಈಗ ಮೋದಿಯವರ ಅಧಿಕಾರದ ಕೌಂಟ್‌ಡೌನ್ ಆರಂಭಿಸಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ವನಾಶವಾಗಲಿದೆ ಎಂದರು.

ಬಿಜೆಪಿಗೆ ಪಾಠ

           ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ನೋಟು ಅಮಾನ್ಯೀಕರಣದ ದುಷ್ಪರಿಣಾಮದಿಂದ ದೇಶದ ಜನರು ತತ್ತರಿಸುತ್ತಿದ್ದು, ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸುವರೆಂದು ಹೇಳಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಇಂದಿರಾ ದೇನಾನಾಯಕ್ ಮಾತನಾಡಿದರು.

ಮಾನವ ಸರಪಳಿ

      ಇದೇ ಸಂದ‘ರ್ದಲ್ಲಿ ಎಲ್ಲ ಮುಖಂಡರುಗಳು ಮತ್ತು ಕಾರ್ಯಕರ್ತರುಗಳು ಟೌನ್‌ಹಾಲ್ ವೃತ್ತದಲ್ಲಿ ಕೆಲ ನಿಮಿಷ ಮಾನವ ಸರಪಳಿ ರಚಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

      ಪ್ರತಿ‘ಟನೆಯಲ್ಲಿ ಪಕ್ಷದ ವಿವಿಧ ಘಟಕಗಳ ಮುಖಂಡರಾದ ಚೌದ್ರಿ ರಂಗಪ್ಪ, ಅನಿಲ್ ಕುಮಾರ್, ಮಲ್ಲೇಶ್, ಲಿಂಗರಾಜ್, ಜಿ.ಎಲ್.ಗೌಡ, ತುಮಕೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಪೊರೇಟರ್‌ಗಳಾದ ಟಿ.ಎಂ. ಮಹೇಶ್, ರೀದಾ ಬೇಗಂ, ನಾಸಿರಾ ಬಾನು, ಇನಾಯತ್ ಉಲ್ಲಾ ಖಾನ್, ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಟಿ.ಎಸ್.ತರುಣೇಶ್, ಪಾಲಿಕೆಯ ಮಾಜಿ ಮೇಯರ್ ಸುಧೀಶ್ವರ್, ಮಾಜಿ ಕಾರ್ಪೊರೇಟರ್ ಎನ್.ಮಹೇಶ್, ಮಾಜಿ ನಗರಸಭೆ ಸದಸ್ಯರುಗಳಾದ ಕುಬೇರ ನಾಗಭುಷಣ್, ನರಸೀಯಪ್ಪ, ಮೆಹಬೂಬ್ ಪಾಷ ಮತ್ತು ಮಹಮದ್ ಹಫೀಜ್, ಮುಖಂಡರಾದ ಆಟೋರಾಜು, ಕೃಷ್ಣಪ್ಪ, ಗೀತಮ್ಮ, ಮಂಗಳ, ಮಂಜುನಾಥ್, ನರಸಿಂಹಮೂರ್ತಿ, ದರ್ಶನ್ ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here