ಮಹಿಳೆಯರ ಮೇಲಿನ ಸೈಬರ್ ಅಪರಾಧ ಹೆಚ್ಚಾಗುತ್ತಿದೆ: ಡಿ.ರೂಪಾ

ಧಾರವಾಡ 

        ಮಹಿಳೆಯರ ಮೇಲಿನ ಸೈಬರ್ ಅಪರಾಧ ಹೆಚ್ಚಾಗುತ್ತಿದ್ದು, ಅವರು ಎಲ್ಲವನ್ನೂ ಸಹಿಸಿಕೊಳ್ಳುತ್ತಿರುವುದು ಮತ್ತು ದೂರು ನೀಡಲು ಹಿಂಜರಿಯುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಅಭಿಪ್ರಾಯಪಟ್ಟಿದ್ದಾರೆ.

       ಧಾರವಾಡದಲ್ಲಿ ನಡೆಯುತ್ತಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎರಡನೇ ದಿನವಾದ ಇಂದು ಅಂಬಿಕಾತನಯದತ್ತ ಪ್ರಧಾನ ವೇದಿಕೆಯಲ್ಲಿ ಏರ್ಪಡಿಸಿದ್ದ ಮಹಿಳಾ ಸಂವೇದನೆ ಕುರಿತ ಗೋಷ್ಠಿಯಲ್ಲಿ ಮಹಿಳೆ ಮತ್ತು ಕಾನೂನು ಕುರಿತ ವಿಷಯ ಮಂಡಿಸಿದ ಅವರು, ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾಳೆ. ಆದರೆ ಇಷ್ಟಾದರೂ ಆಕೆ ಸುರಕ್ಷಿತಳಾಗಿಲ್ಲ.

      18ನೆ ಶತಮಾನದಲ್ಲಿ ನಡೆಯತ್ತಿದ್ದ ದೌರ್ಜನ್ಯಗಳ ಮಾದರಿಯಲ್ಲೇ ಆಕೆಯ ಮೇಲೆ ಇಂದೂ ದೌರ್ಜನ್ಯವಾಗುತ್ತಿದೆ. ದೌರ್ಜನ್ಯದ ರೀತಿಗಳಲ್ಲಿ ಮಾತ್ರ ಬದಲಾಗಿದೆ ಎಂದು ವಿಷಾದಿಸಿದರು.

       ಕಳೆದ ಶತಮಾನಕ್ಕೆ ಹೋಲಿಸಿದರೆ ಮಹಿಳೆ ಶಿಕ್ಷಣದಲ್ಲಿ ಶೇಕಡಾ 10 ಪಟ್ಟು, ಸ್ವಾವಲಂಬಿ ಜೀವನದಲ್ಲಿ ಶೇಕಡಾ 4ಪಟ್ಟು ಪ್ರಗತಿ ಸಾಧಿಸಿದ್ದರೂ ಸುರಕ್ಷತೆ ಎಂಬುದು ಆಕೆಯ ಮುಂದಿರುವ ದೊಡ್ಡ ಸವಾಲಾಗಿದೆ. ಮನೆಯೊಳಗಿದ್ದರೂ ಆಕೆ ಸುರಕ್ಷಿತಳಾಗಿಲ್ಲ ಎಂದು ಹೇಳಿದ ಡಿ.ರೂಪಾ, ಮಹಿಳೆಯ ಮೇಲಿನ ದೌರ್ಜನ್ಯ ಎಂದರೆ ಕಾನೂನಿನ ಪರಿಭಾಷೆಯಲ್ಲಿ ವಿಶಾಲ ಅರ್ಥಗಳಿವೆ. ಹೊಡೆಯುವುದು, ಬಡಿಯುವುದು ಮಾತ್ರ ದೌರ್ಜನ್ಯವಲ್ಲ. ಮಹಿಳೆಯನ್ನು ಕಪ್ಪು, ದಪ್ಪ, ಬಂಜೆ ಎಂದು ಮೂದಲಿಸುವುದು ಕೂಡ ಕಾನೂನಿನ ಪ್ರಕಾರ ದೌರ್ಜನ್ಯವೇ ಆಗಿವೆ. ಆಕೆಗೆ ಆಹಾರ, ಖರ್ಚಿಗೆ ಹಣ ನೀಡದಿರುವುದು ಕೂಡ ದೌರ್ಜನ್ಯದ ವ್ಯಾಪ್ತಿಗೆ ಬರುತ್ತದೆ. ನಗ್ನ ಚಿತ್ರ ಅಥವಾ ವೀಡಿಯೋ ತೋರಿಸಿ ಅದರಂತೆ ಮಾಡಲು ಒತ್ತಾಯಿಸುವುದು ಕೂಡ ಶಿಕ್ಷಾರ್ಹ ಅಪರಾಧ ಎಂದು ವಿವರಿಸಿದರು.

       ಮಹಿಳೆಯನ್ನು ಬೆಳೆಸುವಾಗ ಧೈರ್ಯವಂತಳಾಗಿ ಬೆಳೆಸಬೇಕು. ಆಕೆಯಲ್ಲಿ ಸಾಹಸ ಪ್ರವೃತ್ತಿ ಮೂಡುವಂತೆ ಮಾಡಬೇಕು. ಆಗ ಮಾತ್ರ ಆಕೆ ಎಲ್ಲಾ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ತೋರುತ್ತಾಳೆ. ಪುರುಷರು ಕೂಡ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಆಕೆ ಕೂಡ ಸಮಾಜದ ಬಹುಮುಖ್ಯ ಭಾಗ ಎಂದು ಪರಿಗಣಿಸಬೇಕು ಎಂದು ಹೇಳಿದರು.

        ಮಹಿಳಾ ಆತ್ಮಕಥೆಗಳು ಕುರಿತು ಮಾತನಾಡಿದ ಸಾಹಿತಿ ಶಶಿಕಲಾ ವಸ್ತ್ರದ, ಸ್ತ್ರೀವಾದ ಎಂದರೆ ಪುರುಷ ದ್ವೇಷವಲ್ಲ. ಅದು ಮಾನವೀಯತೆಯ ಪರವಾದವಾದ. ಆತ್ಮಕಥನಗಳು ನಮ್ಮ ಮನೆಯ ಹೆಣ್ಣು ಮಕ್ಕಳ ಕಥೆಗಳೇ ಆಗಿವೆ ಎಂದು ಪರಿಗಣಿಸಬೇಕು. ಆಗ ಹೆಣ್ಣಿನ ಬಗ್ಗೆ ಗೌರವ ಬರುತ್ತದೆ ಎಂದು ಹೇಳಿದರು.

       ಡಾ.ಕವಿತಾ ರೈ ಅವರು ರಾಜಕಾರಣ ಮತ್ತು ಮಹಿಳಾ ಪ್ರಾತಿನಿಧ್ಯ ಕುರಿತು ಮಾತನಾಡಿ, ಗ್ರಾಮ, ತಾಲೂಕು ಮಟ್ಟದಲ್ಲಿ ಮಹಿಳಾ ರಾಜಕಾರಣಿಗಳು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಆದರೆ ಯಾಕಾಗಿ ಆಕೆಗೆ ರಾಜ್ಯ, ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಅವಕಾಶ ದೊರೆಯುತ್ತಿಲ್ಲ. ಶಾಸನ ಸಭೆಗಳಲ್ಲಿ ಶೇಕಡಾ 33ರಷ್ಟು ಮೀಸಲಾತಿ ಇನ್ನೂ ಯಾಕೆ ಜಾರಿಗೊಂಡಿಲ್ಲ ಎಂದು ಪ್ರಶ್ನಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap