ಮಹಿಳಾ ಸಬಲೀಕರಣಕ್ಕಾಗಿ ಸೈಕಲ್ ಜಾಥಾ

0
12

ದಾವಣಗೆರೆ 

         ಮಹಿಳಾ ಸಬಲೀಕರಣ, ಬಾಲ್ಯ ವಿವಾಹ ನಿಷೇಧ, ಸ್ವಚ್ಛ ಕರ್ನಾಟಕ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯ ಮೀಸಲು ಪೆÇಲೀಸ್ ಪಡೆಯಿಂದ ಎಡಿಜಿಪಿ ಭಾಸ್ಕರರಾವ್ ನೇತೃತ್ವದಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕರ್ನಾಟಕ ದರ್ಶನ ಸೈಕಲ್ ಜಾಥಾವು ಶುಕ್ರವಾರ ನಗರಕ್ಕೆ ಆಗಮಿಸಿತು.

        ಹರಿಹರದಿಂದ ಪಿ.ಬಿ ರಸ್ತೆಯಲ್ಲಿ ನೀಲಿ ಬಣ್ಣದ ಸಮವಸ್ತ್ರ್ತ್ರಧಾರಿ ಮಹಿಳಾ ಮಣಿಗಳು ತಂಡೋಪ ತಂಡವಾಗಿ, ಸೈಕಲ್ ತುಳಿದುಕೊಂಡು ಬಂದ ದೃಶ್ಯವು ನಯನ ಮನೋಹರವಾಗಿತ್ತು. ಈ ಸೈಕಲ್ ಜಾಥಾಕ್ಕೆ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಎ.ವಿ.ಕೆ ಕಾಲೇಜು ಬಳಿ ಕಾಲೇಜು ವಿದ್ಯಾರ್ಥಿನಿಯರು, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಸಾರ್ವಜನಿಕರು ಗುಲಾಬಿ ಹೂವು ನೀಡುವ ಮೂಲಕ ಅದ್ದೂರಿ ಸ್ವಾಗತ ಕೋರಿದರು.

       ಜಾಥಾದಲ್ಲಿ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.. ನಮ್ಮ ಸುರಕ್ಷೆ ನಮ್ಮ ಕೈಯಲ್ಲಿ.. ತೊಟ್ಟಿಲು ತೂಗುವ ಕೈ ದೇಶ ಆಳಲು ಸೈ.. ಗಿಡಮರ ಬೆಳೆಸಿ ಮನುಕುಲ ಉಳಿಸಿ.. ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರಿಸರ ಉಳಿಸಿ.. ಸಂಚಾರ ನಿಯಮ ಪಾಲಿಸಿ ಜೀವ ಉಳಿಸಿ.. ಸೇರಿದಂತೆ ಜಾಗೃತಿ ಘೋಷವಾಕ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಾಗಿತು.

        ಈ ಸಂದರ್ಭದಲ್ಲಿ ಮಾತನಾಡಿದ ಎಡಿಜಿಪಿ ಭಾಸ್ಕರರಾವ್, ಸರ್ಕಾರ ಸಾರ್ವಜನಿಕರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದೆ. ಅದರಲ್ಲಿಯೂ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಈ ಎಲ್ಲಾ ಅಂಶಗಳನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿದ್ದು, ಡಿ.5 ರಂದು ಚಾಲನೆ ಪಡೆದಿರುವ ಜಾಥಾವು ಹುಬ್ಬಳ್ಳಿ, ರಾಣೇಬೆನ್ನೂರು ಮಾರ್ಗವಾಗಿ ದಾವಣಗೆರೆ ತಲುಪಿದೆ ಎಂದರು.

        ಈ ಜಾಥಾದಲ್ಲಿ 65 ಮಹಿಳಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹಾಗೂ 15 ಪುರುಷ ಸಿಬ್ಬಂದಿಗಳು ಇದ್ದಾರೆ. ಜಾಥಾವು ದಾರಿಯಲ್ಲಿ ಸಾಗುವ ಮಾರ್ಗ ಮಧ್ಯೆ ಸಿಗುವ ಸರ್ಕಾರಿ ಶಾಲೆಗಳು, ಅಂಗನವಾಡಿಗಳು, ಮಹಿಳಾ ಸಂಘಗಳು ಎಲ್ಲೆಡೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

        ತಂಡದಲ್ಲಿ 2017ರ ಬ್ಯಾಚಿನ ಒಬ್ಬ ಐ.ಎ.ಎಸ್ ಅಧಿಕಾರಿ ನಂದಿನಿ, ಇಬ್ಬರು ಪೊಲೀಸ್ ವರಿಷಾಧಿಕಾರಿಗಳಾದ ಶೃತಿ ಮತ್ತು ಸವಿತ ಹೂಗಾರ, ಎಸ್.ಪಿ, ಎ.ಎಸ್.ಐ ಗಳು ಸೈಕಲ್ ಪಟುಗಳಾಗಿದ್ದಾರೆ. ಇವರಲ್ಲಿ ಬಹುತೇಕರು ಬಡ ಕುಟುಂಬದಿಂದಲೇ ಬಂದಿರುವವರು ಹಾಗಾಗಿ ಅವರಿಗೆ ಮೂಲ ಸಮಸ್ಯೆಗಳ ಅರಿವಿದೆ. ಆದ್ದರಿಂದ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ. ನಮ್ಮ ಮೇಲಾಧಿಕಾರಿ ನೀಲಮಣಿರಾಜು ಅವರು ಈ ಕಾರ್ಯಕ್ರಮದ ರೂವಾರಿಗಳು ಅವರಿಗೆ ಮಹಿಳಾ ಸಬಲೀಕರಣದಲ್ಲಿ ಹೆಚ್ಚು ಆಸಕ್ತಿಯಿರುವುದರಿಂದ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದ್ದಾರೆಂದು ಹೇಳಿದರು.

       ಸೈಕಲ್ ಪಟು ಆಗಿ ಆಗಮಿಸಿರುವ ವಿಜಯಪುರ ತಿಕೋಟಾ ಠಾಣೆಯ ಎ.ಎಸ್.ಐ ಗಂಗು ಜಿ. ಬೀರಾದರ್ ಮಾತನಾಡಿ, ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸಮಾನವಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಹಿಂದುಳಿದಿಲ್ಲ. ಮನೆಯೇ ಮೊದಲ ಪಾಠಶಾಲೆ ಎಂಬಂತೆ ಮಹಿಳೆ ಮನೆಯಿಂದಲೇ ಎಲ್ಲವನ್ನು ಕಲಿಯುತ್ತಿದ್ದಾಳೆ. ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮಹಿಳೆಗೆ, ಸಮಾಜವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಕೆಲಸ ಮಾಡುವುದು ಕಷ್ಟವಲ್ಲ. ಪುರುಷರೊಂದಿಗೆ ಸೌಹಾರ್ಧದಿಂದ ಕೆಲಸ ಮಾಡುವುದರೊಂದಿಗೆ ಯಶಸ್ಸು, ಸಾಧನೆ ಸಾಧ್ಯ. ಗಂಡನ ಮೇಲೆ ಅವಲಂಬನೆ ಬೇಡ. ಆದರೆ ಅವರ ಸಹಕಾರ ಮುಖ್ಯವಾಗಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಹಿಳೆಯರು ಹೆಚ್ಚಾಗಿ ಬಂದು ನಮ್ಮ ಜೊತೆ ಚರ್ಚಿಸುತ್ತಾರೆ ಎಂದರು.

         ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್ ಮಾತನಾಡಿ, ಸದುದ್ದೇಶಗಳಾದ ಮಹಿಳಾ ಸಬಲೀಕರಣ, ಬಾಲ್ಯ ವಿವಾಹ ನಿಷೇಧ ಹಾಗೂ ಸ್ವಚ್ಚತೆ ಬಗೆಗೆ ಜಾಗೃತಿ ಮೂಡಿಸುತ್ತಿರುವ ತಂಡದವರ ಕಾರ್ಯ ಯಶ್ವಸಿಯಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ದಿನೇಶ್ ಕೆ.ಶೆಟ್ಟಿ, ಎ.ವಿ.ಕೆ ಕಾಲೇಜಿನ ಪ್ರಾಂಶುಪಾಲ ಜೆ.ಶಿವಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜಿ ಉದೇಶ್, ಡಿ.ಎಸ್.ಪಿ ನಾಗರಾಜು, ವೃತ್ತ ನಿರೀಕ್ಷಕ ಇ.ಆನಂದ್ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here