ಡಿಸಿಸಿ ಬ್ಯಾಂಕ್ ಎಂಡಿ ಇಲ್ಲಿನ ಸಂಘದ ಕಚೇರಿಗೆ ಭೇಟಿ

ಮಲೆಬೆನ್ನೂರು

         ಹರಿಹರ ತಾಲೂಕು ಹಿರೇಹಾಲಿವಾಣದ ಪ್ರಾಥÀಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ಮೂಡುತ್ತಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಒತ್ತಾಯಿಸಿ ಮೇಲಾಧಿಕಾರಿಗಳಿಗೆ ದೂರು ನೀಡಿರುವುದಾಗಿ ಸಂಘದ ನಿರ್ದೇಶಕ ಜಿ.ಕೆ.ಮಲ್ಲೇಶಪ್ಪ ಸಭೆಯಲ್ಲೇ ಗುಡುಗಿದರು.

        ಸಹಕಾರ ಸಂಘದ ಸೂಪರ್‍ವೈಸರ್, ಅಭಿವೃದ್ಧಿ ಅಧಿಕಾರಿ, ಡಿಸಿಸಿ ಬ್ಯಾಂಕ್ ಎಂಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್, ಶಾಸಕ ಎಸ್.ರಾಮಪ್ಪ, ಸಹಕಾರ ಸಂಘದ ನಿಬಂಧಕರು, ಸಹಕಾರ ಸಂಘದ ಉಪ ನಿಬಂಧಕರುಗಳಿಗೆ ಈ ಬಗ್ಗೆ ದೂರು ನೀಡಿದ್ದೇನೆ. ಜ.11ಕ್ಕೆ ಡಿಸಿಸಿ ಬ್ಯಾಂಕ್ ಎಂಡಿ ಇಲ್ಲಿನ ಸಂಘದ ಕಚೇರಿಗೆ ಭೇಟಿ ನೀಡಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಅವರು ಸಭೆಗೆ ತಿಳಿಸಿದರು.

       ಸಮೀಪದ ಹಿರೇಹಾಲಿವಾಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬುಧವಾರ ನಡೆದ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಅವರು ಕಾರ್ಯದರ್ಶಿ ಶೌಕತ್ ಅಲಿಯನ್ನು ತರಾಟೆಗೆ ತೆಗೆದುಕೊಂಡು, ಆರೋಪಗಳ ಸುರಿಮಳೆಯನ್ನೇ ಸುರಿಸಿದರು.

        ಗ್ರಾಮದ ರೇವಣಪ್ಪ ತಂದೆ ಮಲ್ಲಪ್ಪ, ಜಿ.ನಾಗಪ್ಪ ತಂದೆ ಸಿದ್ದಲಿಂಗಪ್ಪ ಎಂಬ ರೈತರು ಮೃತರಾದ ಮೇಲೂ ಅವರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಸಾಲ ಪಡೆಯಲಾಗಿದೆ. ಅವರ ಸಹಿಯಲ್ಲಿ ವ್ಯತ್ತಾಸ ಕಾಣುತ್ತಿದೆ. ಇದೇ ರೀತಿ ಅದೆಷ್ಟು ಮೃತರ ಹೆಸರಿನಲ್ಲಿ ಸಾಲ ಪಡೆದಿದ್ದಾರೆ ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ ಎಂದು ಅವರು ಆರೋಪಿಸಿದರು.

       ಕಾರ್ಯದರ್ಶಿ ಗುಮಾಸ್ತರ ಹಾಜರಿ ಪುಸ್ತಕಗಳು ಎಲ್ಲಿ? ಓಚರ್ ಬುಕ್ ಏನಾಯ್ತು? ಜನರಲ್ ಬಾಡಿ ಪುಸ್ತಕ ಎಲ್ಲಿ? ಅಪೆಂಡಿಕ್ಸ್-ಇ ಪುಸ್ತಕ ಎಲ್ಲಿ? ಡಿಸಿಸಿ ಬ್ಯಾಂಕ್‍ನಿಂದ ಬಂದ ಆದೇಶ ಪತ್ರಗಳು ಎಲ್ಲಿ? ಎಂದು ಮಲ್ಲೇಶಪ್ಪ ಪ್ರಶ್ನಿಸಿದರು. ವೋಚರ್ ಬುಕ್, ಡಿ2 ಬುಕ್, ಅಪೆಂಡಿಕ್ಸ್-ಇ, ಎನ್‍ಶೇರ್, ಜನರಲ್ ಬಾಡಿ ಬುಕ್ ಡಿಸಿಸಿ ಬ್ಯಾಂಕ್‍ನಲ್ಲಿ ಬಿಟ್ಟು ಬಂದಿದ್ದೇನೆ. ಜ.18ರಂದು ಸಭೆಗೆ ಉಳಿದ ಪುಸ್ತಕಗಳನ್ನು ತಂದು ಒಪ್ಪಿಸುತ್ತೇನೆ ಎಂದು ಕಾರ್ಯದರ್ಶಿ ಶೌಕತ್ ಅಲಿ ಸಭೆಗೆ ತಿಳಿಸಿದರು.ಲಭ್ಯವಿರುವ ಕೆಲವು ದಾಖಲೆಗಳನ್ನು ಸಭೆಗೆ ತರಿಸಿಕೊಂಡ ನಿರ್ದೇಶಕರು ದಾಖಲೆಗಳನ್ನು ಪರಿಶಿಲಿಸಿದರು.

         ಇಲ್ಲಿನ ಕಚೇರಿಯ ಸಂಘದ ಸಂಪೂರ್ಣ ದಾಖಲೆಗಳನ್ನು ನೀಡುವಂತೆ ನಾನು ಮಾಹಿತಿ ಹಕ್ಕಿನಲ್ಲಿ ಕೇಳಿದ ಬಳಿಕ, ಕೆಸಿಸಿ ಪುಸ್ತಕ ಹಾಗೂ ಕಾರ್ಯದರ್ಶಿ, ಗುಮಾಸ್ತರ ಹಾಜರಿ ಪುಸ್ತಕ ಮತ್ತಿತರೆ ಪುಸ್ತಕಗಳನ್ನು ನಿನ್ನೆ ಮೊನ್ನೆ ಸೃಷ್ಠಿ ಮಾಡಿದ್ದಾರೆ. ಈ ದಾಖಲೆಗಳಲ್ಲಿ ದಿನಾಂಕ ಬರೆದಿಲ್ಲ. ಹೆಸರುಗಳನ್ನೂ ಸಂಪೂರ್ಣವಾಗಿ ಬರೆದಿಲ್ಲ. ತರಾತುರಿಯಲ್ಲಿ ದಾಖಲೆಯ ಪುಸ್ತಕಗಳನ್ನು ಸೃಷ್ಠಿಸಿರುವುದನ್ನು ನಾನಾ ಕಣ್ಣಾರೆ ನೋಡಿದ್ದೇನೆ ಎಂದು ದೂರಿದರು.

         ಅರ್ಧ ಎಕರೆ ಇದ್ದವನಿಗೂ ಹಾಗೂ ಆರು ಎಕರೆ ಇದ್ದವನಿಗೂ ಒಂದೇ ಪ್ರಮಾಣದ ಸಾಲ ವಿತರಿಸಿದ್ದೀರಿ. ಯಾವ ಮಾನದಂಡದ ಮೇಲೆ ಈ ನಿರ್ಣಯ ತೆಗೆದುಕೊಂಡಿದ್ದಿರಿ ಎಂದು ಅಧ್ಯಕ್ಷ ಹನುಮಂತಪ್ಪನವರನ್ನು ಪ್ರಶ್ನಿಸಿದರು. ಅಧ್ಯಕ್ಷರು ಮೌನದ ಉತ್ತರ ನೀಡಿದರು.

       ಸಂಘದ ಷೇರು ಹಾಗೂ ಅಂಕೌಂಟ್‍ಗಾಗಿ ರೈತರಿಂದ ಒಂದೂವರೆ ಸಾವಿರದಿಂದ ಎರಡೂವರೆ ಸಾವಿರ ರೂ. ಪಡೆದು, ರೈತರಿಗೆ ಇದುವರೆಗೂ ರಸೀದಿ ಯಾಕೆ ವಿತರಿಸಿಲ್ಲವೆಂದು ಪ್ರಶ್ನಿಸಿದರು.ಕೆಲ ದಿನಗಳಲ್ಲೇ ವಿತರಿಸುತ್ತೇನೆ ಎಂದು ಕಾರ್ಯದರ್ಶಿ ಪ್ರತಿಕ್ರಿಯಿಸಿದರು. ಕಳೆದ 20 ವರ್ಷಗಳ ಅವಧಿಯಲ್ಲಿ ಷೇರು ಹಣ ಪಾವತಿಗೆ ನಮ್ಮೂರಿನಲ್ಲಿ ಯಾರಿಗೂ ರಸೀದಿಯನ್ನೇ ಕೊಟ್ಟಿಲ್ಲವೆಂದು ಮತ್ತೊಬ್ಬ ನಿರ್ದೇಶಕ ಕರಿಯಪ್ಪ ತಿಳಿಸಿದರು.

       ಇಷ್ಟು ವರ್ಷಗಳವರೆಗೆ ಏನನ್ನೂ ಕೇಳದವರು, ದಿಢೀರ್‍ನೆ ಯಾಕೆ ದೂರುತ್ತಿದ್ದಾರೆ. ದೂರುತ್ತಿರುವವರೇ ಕಚೇರಿ ಕೆಲಸಕ್ಕಾಗಿ ಕಾರ್ಯದರ್ಶಿಯ ಮನೆಗೆ ಹೋಗಿ ಬಂದಿದ್ದರು. ಇದ್ದಕ್ಕಿದ್ದಂತೆ ಇವರು ದೂರುತ್ತಿರುವುದೇಕೆ ಎಂದು ಕೆಲ ನಿರ್ದೇಶಕರು ಪ್ರಶ್ನಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap