ಮೃತ್ಯುವಿಗೆ ಆಹ್ವಾನ ನೀಡುವ ಹೆದ್ದಾರಿ ಗುಂಡಿ

0
9

ಹುಳಿಯಾರು:

     ಹೆದ್ದಾರಿ ನಿರ್ಮಾಣದ ನೆಪದಲ್ಲಿ ಹಾಲಿ ರಸ್ತೆಯನ್ನು ನಿರ್ಲಕ್ಷ್ಯ ಮಾಡಿರುವುದರಿಂದ ರಾಷ್ಟ್ರೀಯ ಹೆದ್ದಾರಿ 150 ಎ ನ ಹುಳಿಯಾರು ಪಟ್ಟಣದಲ್ಲಿ ಸಂಪೂರ್ಣ ಹದಗೆಟ್ಟಿದ್ದು ಇಲ್ಲಿನ ಗುಂಡಿಗಳು ಮೃತ್ಯುವಿಗೆ ಆಹ್ವಾನ ನೀಡುವಂತಿದೆ.

      ಇಲ್ಲಿನ ಎಪಿಎಂಸಿಯಿಂದ ಆರಂಭವಾಗಿ ರಾಮಗೋಪಾಲ್ ಸರ್ಕಲ್ ಬಾಲಾಜಿ ಥಿಯೇಟರ್ ವರೆವಿಗೂ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿನ ಗುಂಡಿಗಳಿಂದಾಗಿ ವಾಹನ ಚಾಲಕರು ಈ ಹೆದ್ದಾರಿಯ ರಸ್ತೆಯಲ್ಲಿ ಪ್ರಯಾಣಿಸಲು ಹರಸಾಹಸ ಪಡುವಂತಾಗಿರುವುದು ನಿತ್ಯದ ಚಿತ್ರಣವಾಗಿದೆ.

      ಅತಿ ಹೆಚ್ಚು ವಾಹನ ದಟ್ಟಣೆಯಿರುವ ಈ ಹೆದ್ದಾರಿಯಲ್ಲಿ ನಿತ್ಯವೂ ನೂರಾರು ಬಸ್, ಲಾರಿಗಳು ಸಂಚರಿಸುವ ಪ್ರಮುಖ ರಸ್ತೆ ಇದಾಗಿದ್ದು ಇಲ್ಲಿ ಗುಂಡಿಗಳದ್ದೇ ಕಾರುಬಾರಾಗಿದೆ. ರಸ್ತೆಯು ಗುಂಡಿಗಳಿಂದ ತುಂಬಿದ್ದು ಚರಂಡಿ ನೀರು ಕೂಡ ರಸ್ತೆಯ ಮೇಲೆ ಹರಿಯುವುದರಿಂದ ಗುಂಡಿಗಳು ನೀರಿನಿಂದ ತುಂಬಿ ವಾಹನ ಸವಾರರಿಗೆ ಕಾಣದಂತಾಗಿ ನಿತ್ಯ ಸವಾರರು ಬಿದ್ದೇಳುವ ಪ್ರಸಂಗ ಜರುಗುತ್ತಲೇ ಇದೇ.

      ವಾಹನ ಸವಾರರನ್ನು ಮೃತ್ಯುಕೂಪಕ್ಕೆ ಆಹ್ವಾನಿಸುವ ಈ ರಸ್ತೆಯಲ್ಲಿ ರಸ್ತೆ ಉಬ್ಬಿನ ಬಗ್ಗೆಯಾಗಲಿ, ಗುಂಡಿಗಳ ಬಗ್ಗೆಯಾಗಲಿ ಯಾವುದೇ ಸೂಚನಾ ಫಲಕವೂ ಹಾಕಲಾಗಿಲ್ಲ. ಕಳೆದೊಂದು ವಾರದಿಂದ ಚರಂಡಿ ನೀರು ಕೂಡ ಇದರಲ್ಲಿ ತುಂಬಿರುತ್ತದೆ. ಹಗಲಿನ ವೇಳೆ ಹೇಗೋ ಗುಂಡಿಗಳು ಕಾಣುವುದರಿಂದ ತಪ್ಪಿಸಲು ಹೆಣಗಾಡುವ ಪ್ರಯಾಣಿಕರು, ರಾತ್ರಿ ವೇಳೆ ಕಾಣದ ಗುಂಡಿಗಳಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದಾರೆ.

        ಜಿಲ್ಲಾ ಪಂಚಾಯಿತಿ ಸದಸ್ಯರ ಮನೆ ಎದುರೇಯಿರುವ ಗುಂಡಿಯಲ್ಲಿ ಸಾಕಷ್ಟು ಮಂದಿ ಬಿದ್ದೇಳುತ್ತಿದ್ದು ಅವರಿಂದಲೂ ಈ ಗುಂಡಿ ಮುಚ್ಚಿಸಲು ಸಾಧ್ಯವಾಗದಿರುವುದು ಜನಪ್ರತಿನಿಧಿಗಳ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸುವಂತಾಗಿದೆ. ರಸ್ತೆ ನಿರ್ಮಾಣದ ಉದ್ದೇಶವೇನೋ ಸರಿ. ಆದರೆ ನಿರ್ಮಾಣ ಸ್ಥಗಿತವಾಗಿ ತಿಂಗಳುಗಳೇ ಉರುಳಿದರೂ ಸಹ ಹಾಳಾದ ರಸ್ತೆಯನ್ನು ಸರಿಪಡಿಸಲು ಇವರು ಮುಂದಾಗುತ್ತಿಲ್ಲ. ಅಲ್ಲದೇ ರಸ್ತೆ ನಿರ್ಮಾಣಕ್ಕೂ ಮುಂಚೆ ಹಾಲಿ ಇರುವ ರಸ್ತೆಯನ್ನು ದುರಸ್ತಿ ಪಡಿಸಿ ಗುಂಡಿಗಳಿಗೆ ಡಾಂಬರ್ ಹಾಕಿ ಓಡಾಡುವ ಮಟ್ಟಕ್ಕೆ ತರಬೇಕಾಗಿದ್ದು ನಿರ್ಲಕ್ಷ್ಯ ದೋರಣೆ ತಾಳಿದ್ದಾರೆ.

         ಇಲ್ಲಿ ನಿತ್ಯ ಬಿದ್ದವರನ್ನು ಎದುರುಗಡೆ ಇರುವ ಆಟೊಮೊಬೈಲ್ ಶಾಪ್, ಟೀ ಅಂಗಡಿಯವರು ಆಸ್ಪತ್ರೆಗೆ ಕಳುಹಿಸುವುದೇ ಕೆಲಸವಾಗಿದೆ. ಈ ಬಗ್ಗೆ ಹೆದ್ದಾರಿ ಇಲಾಖೆಗೆ ದೂರು ನೀಡಿದರೂ ಪ್ರಯೋಜವಾಗಿಲ್ಲ. ಪ್ರತಿಭಟನೆ ಮಾಡಲು ಮುಂದಾದಾಗಲೆಲ್ಲ ಪೊಲೀಸಿನವರು ಜನರನ್ನು ಸುಮ್ಮನೆ ಮಾಡುತ್ತಿದ್ದಾರೆಯೇ ಹೊರತು ಸಂಬಂಧ ಪಟ್ಟವರನ್ನು ಕರೆಸಲು ಮುಂದಾಗುತ್ತಿಲ್ಲ. ಪ್ರಶ್ನಿಸಿದವರನ್ನೇ ಮಣ್ಣು ತುಂಬಲು ಹೇಳುವ ಪೋಲಿಸರು ಗುಂಡಿ ಬಿದ್ದ ಜಾಗದಲ್ಲಿ ಬ್ಯಾರಿಕೇಡ್ ಇಡಲು ಸಹ ಮುಂದಾಗುತ್ತಿಲ್ಲ.

       ರಸ್ತೆಯಲ್ಲಿ ಬಡಾವಣೆಯ ಚರಂಡಿ ನೀರು ಹರಿಯುತ್ತಿದ್ದರೂ ಸಹ ಈ ಬಗ್ಗೆ ಪಟ್ಟಣ ಪಂಚಾಯಿತಿಯವರು ಮೌನ ವಹಿಸಿದ್ದಾರೆ. ಚರಂಡಿ ನೀರು ಸದಾ ಹರಿಯುವುದರಿಂದ ರಸ್ತೆ ಹಾಳಾಗುತ್ತಿದ್ದು ವಾಹನ ಸವಾರರಂತೂ ಸರ್ಕಸ್ ಮಾಡುತ್ತಾ ಸಾಗಬೇಕಾಗಿದೆ. ಅಪಘಾತವಾದಗಲೆಲ್ಲಾ ಅಲ್ಲಿನ ನಿವಾಸಿಗಳೇ ಕಲ್ಲುಗಳನ್ನು ಇಟ್ಟು ಎಚ್ಚರಿಕೆ ಸಂದೇಶ ನೀಡುವಂತಾಗಿದೆ. ಒಟ್ಟಾರೆ ಇಲ್ಲಿ ನಿತ್ಯ ಸಣ್ಣಪುಟ್ಟ ಅಪಘಾತಗಳು ಸಂಭವಿಸುವುದು ಮಾಮೂಲಿಯಾಗಿದೆ.

       ರಸ್ತೆ ಆರಂಭಕ್ಕೂ ಮುನ್ನ ರಸ್ತೆಯ ಕುಳಿತ ಧೂಳು ಕುಡಿಯುತ್ತಿದ್ದ ಜನ ಇದೀಗ ಚರಂಡಿ ವಾಸನೆಯನ್ನು ಸಹಿಸಬೇಕಾದ ಪರಿಸ್ಥಿತಿ ಇದೆ. ಈಗಲಾದರೂ ಹೆದ್ದಾರಿ ಪ್ರಾಧಿಕಾರದವರು, ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು ಗುತ್ತಿಗೆದಾರರಿಗೆ ಹೇಳಿ ಬಾಯ್ಬಿಟ್ಟಿರುವ ಗುಂಡಿಯನ್ನು ಮುಚ್ಚಿಸಿ ರಸ್ತೆ ಸುಸ್ಥಿಯಲ್ಲಿಟ್ಟಲ್ಲಿ ಪ್ರಯಾಣಿಕರು ಸುಗಮವಾಗಿ ಸಂಚರಿಸಲು ಅನುಕೂಲವಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here