ಕನಕ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

ಚಿತ್ರದುರ್ಗ;

       ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ನಗರಸಭೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ನ. 26 ರಂದು ಜಿಲ್ಲಾ ಕೇಂದ್ರದಲ್ಲಿ ವಿಜೃಂಭಣೆಯ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ತಿಳಿಸಿದರು.

        ಕನಕದಾಸರ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

        ಭಕ್ತ ಶ್ರೇಷ್ಠ ಕನಕದಾಸರು ಇಡೀ ಜಗತ್ತಿಗೆ ಅನ್ವಯವಾಗುವ ತತ್ವ ಸಂದೇಶಗಳನ್ನು ನೀಡಿದ್ದಾರೆ. ಅವರ ಆದರ್ಶ ಹಾಗೂ ಅವರು ನಡೆದುಕೊಂಡು ಬಂದ ರೀತಿ ನೀತಿಗಳನ್ನು ಸಾರ್ವಜನಿಕರಿಗೆ ತಲುಪಿಸುವ ರೀತಿಯಲ್ಲಿ ಅವರ ಜಯಂತಿ ಆಚರಣೆ ಮಾಡಬೇಕಿದೆ. ಕನಕದಾಸರ ಜಯಂತಿಯನ್ನು ಸರ್ಕಾರದಿಂದ ಆಚರಿಸಲಾಗುತ್ತಿದೆ. ಪ್ರತಿ ವರ್ಷದಂತೆ ಮೆರವಣಿಗೆ, ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು

        ಕನಕದಾಸರ ಭಾವಚಿತ್ರದೊಂದಿಗೆ ಡೊಳ್ಳು ಕುಣಿತ, ಕರಡಿ ಚಮ್ಮಾಳ ಸೇರಿದಂತೆ ವಿವಿಧ ಸಾಂಸ್ಕತಿಕ ಕಲಾತಂಡಗಳ ಜೊತೆ ಮೆರವಣಿಗೆ ನಗರದ ಕನಕ ವೃತ್ತದಿಂದ ಬೆಳಗ್ಗೆ 9.30 ಗಂಟೆಗೆ ಆರಂಭವಾಗಲಿದೆ. ಮೆರವಣಿಗೆಯು ಕನಕ ವೃತ್ತದಿಂದ ಆರಂಭವಾಗಿ, ಹೊಳಲ್ಕೆರೆ ರಸ್ತೆ, ಬಿ.ಡಿ. ರಸ್ತೆ ಮಾರ್ಗವಾಗಿ ತ.ರಾ.ಸು. ರಂಗಮಂದಿರದವರೆಗೆ ಸಾಗಿ ಬರಲಿದೆ. ಬೆಳಿಗ್ಗೆ 11-30 ಗಂಟೆಗೆ ನಗರದ ತ.ರಾ.ಸು. ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗುವುದು. ಕನಕದಾಸರ ಜೀವನ ಹಾಗೂ ಅವರ ತತ್ವಾದರ್ಶಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಲು ವಿಷಯ ಪರಿಣಿತರನ್ನು ಆಹ್ವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಹೇಳಿದರು.

        ರಾಜಕೀಯ ಪ್ರೇರಿತ ಭಾಷಣಕ್ಕಿಂತ ಕನಕದಾಸರ ತತ್ವಗಳ ಕುರಿತ ಸಂದೇಶ ಸಾರುವ ವಿಷಯ ಪ್ರಸ್ತುತಿಗೆ ಕಾರ್ಯಕ್ರಮದಲ್ಲಿ ಹೆಚ್ಚಿನ ಕಾಲಾವಕಾಶ ನೀಡಬೇಕು. ಕನಕದಾಸರ ಕೀರ್ತನೆಗಳನ್ನು ಹಾಡಿಸುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಲು ಸಮಾಜದ ಮುಖಂಡರು ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕನಕದಾಸರ ಮಹತ್ವದ ಸಂದೇಶ ಜನತೆಗೆ ತಲುಪುವ ರೀತಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುವುದು, ಕೀರ್ತನೆಗಳ ಗೀತ ಗಾಯನಕ್ಕೆ ಆದ್ಯತೆ ನೀಡಲಾಗುವುದು ಅಲ್ಲದೆ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ಕುರಿತ ಕರಪತ್ರವನ್ನು ಇದೇ ಸಮಾರಂಭದಲ್ಲಿ ಸಾರ್ವಜನಿಕರಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕನಕದಾಸರ ವಿಚಾರಗಳನ್ನು ಜೀವನದಲ್ಲಿ ಅಳವಡಿಸುವಂತಾಗಬೇಕು. ಅಂದಾಗ ಮಾತ್ರ ಇಂತಹ ಮಹನೀಯರ ಜಯಂತಿ ಅರ್ಥಪೂರ್ಣವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

        ಸಭೆಯಲ್ಲಿ ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಶೀಲ್ದಾರ್ ಮಲ್ಲಿಕಾರ್ಜುನ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಮಾಜದ ವಿವಿಧ ಮುಖಂಡರುಗಳು ಸಭೆಯಲ್ಲಿ ಉಪಸ್ಥಿತರಿದ್ದು, ಉಪಯುಕ್ತ ಸಲಹೆಗಳನ್ನು ನೀಡಿದರು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap