ನೋಟು ಅಮಾನ್ಯೀಕರಣ ದೇಶದ ದೊಡ್ಡ ದುರಂತ

0
8

ದಾವಣಗೆರೆ:

       ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಪೂರ್ವ ತಯಾರಿ ಇಲ್ಲದೇ, ಏಕಾಏಕಿ ನೋಟು ಅಮಾನ್ಯೀಕರಣಗೊಳಿಸಿದ್ದು, ಈ ದೇಶದ ದೊಡ್ಡ ದುರಂತವಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಆರೋಪಿಸಿದರು.

         ನೋಟು ಅಮಾನ್ಯೀಕರಣಗೊಂಡು 2 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಇಲ್ಲಿನ ಪಾಲಿಕೆ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಶುಕ್ರವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಏಕಾಏಕಿ ನೋಟು ರದ್ಧತಿ ಮಾಡಿದ ಕಾರಣ ದೇಶದ ಆರ್ಥಿಕ ಪರಿಸ್ಥಿತಿ ಏರು-ಪೇರಾಗಿದ್ದು, ಇಂದಿಗೂ ನೋಟು ಅಮಾನ್ಯೀಕರಣ ಗೊಳಿಸಿದ್ದೇಕೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ ಎಂದು ಹೇಳಿದರು.

        ಮೋದಿ ಮಿತ್ರರ ಕಪ್ಪು ಹಣವನ್ನು ಬಿಳಿಯ ಹಣವನ್ನಾಗಿ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲಿಕ್ಕಾಗಿಯೇ ಈ ನೋಟು ಅಮಾನ್ಯೀಕರಣ ಎಂಬ ಹೊಸ ತಂತ್ರವನ್ನು ರೂಪಿಸಿದ್ದರು. ನೋಟು ಅಮಾನ್ಯೀಕರಣದ ಭಾಷಣ ಮಾಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ, ಇನ್ನೂ 50 ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ, ನನ್ನನ್ನು ಸುಟ್ಟು ಬಿಡಿ ಎಂಬುದಾಗಿ ಹೇಳಿದ್ದರು. ಆದರೆ, ನೋಟು ರದ್ದಾಗಿ ಎರಡು ವರ್ಷ ಕಳೆದರೂ ದೇಶದ ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾರಣೆಯಾಗಿಲ್ಲ. ಹೀಗಾಗಿ ದೇಶದ ಜನತೆ ಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರಿಗೆ ತಕ್ಕ ಶಿಕ್ಷೆ ನೀಡಲಿದ್ದಾರೆಂದು ಎಚ್ಚರಿಸಿದರು.

        ನೋಟು ಅಮಾನ್ಯೀಕರಣವಾಗಿದ್ದ ಸಂದರ್ಭದಲ್ಲಿ ಯಾವೊಬ್ಬ ಶ್ರೀಮಂತರು ಹಣ ಪಡೆಯಲು ಬ್ಯಾಂಕ್‍ಗಳ ಎದುರು ಸರತಿ ಸಾಲಿನಲ್ಲಿ ನಿಂತು ಅಸುನೀಗಲಿಲ್ಲ. ಬದಲಿಗೆ, ಈ ದೇಶದ ಜನಸಾಮಾನ್ಯರು, ಕೂಲಿ ಕಾರ್ಮಿಕರು, ರೈತರು ತಾವು ದುಡಿದು ಬ್ಯಾಂಕಿನಲ್ಲಿಟ್ಟಿದ್ದ ಹಣವನ್ನು ಪಡೆಯಲು ಸರತಿ ಸಾಲಿನಲ್ಲಿ ನಿಂತು ಸತ್ತಿದ್ದಾರೆ. ಆದರೂ ಪ್ರಧಾನಿ ಮೋದಿ ಸರ್ಕಾರ ಮೃತರಿಗೆ ಪರಿಹಾರ ನೀಡಲಿಲ್ಲ. ಈ ನಿರ್ಗತಿಕರ ಸಾವಿಗೆ ಸಂತಾಪ ಸೂಚಿಸಲಿಲ್ಲ. ಇಂಥಹ ಕಠೀಣ ಹೃದಯ ಹೊಂದಿರುವ ಮೋದಿ ಅವರ ನೋಟು ರದ್ಧತಿಯಿಂದಾಗಿ ದೇಶದ ಎಲ್ಲಾ ರಂಗಗಳೂ ಪ್ರಗತಿ ಸಾಧಿಸದೇ ವಿಫಲಗೊಂಡಿವೆ. ಅಭಿವೃದ್ದಿಯಲ್ಲಿ ದೇಶ 10 ವರ್ಷ ಹಿಂದೆ ಹೋಗಿದೆ ಎಂದು ದೂರಿದರು.

       ಮೊನ್ನೆ ರಾಜ್ಯದಲ್ಲಿ ನಡೆದ ಪಂಚ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ಪ್ರಸ್ತುತ ಪಂಚರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದ್ದು, ಈ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಲಿದ್ದು, ರಾಹುಲ್‍ಗಾಂಧಿ ಪ್ರಧಾನಮಂತ್ರಿ ಆಗಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

      ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರದ ನೋಟು ರದ್ಧತಿಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದ್ದು, ಈ ನೋಟು ಅಮಾನ್ಯೀಕರಣದಿಂದ ಈ ದೇಶದ ಜನರ ಮೇಲೆ ಆಗಿರುವ ಗಾಯ ಇನ್ನೂ ವಾಸಿಯಾಗಿಲ್ಲ. ಅಲ್ಲದೆ, ಈ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಿಂದಾಗಿ ಡೀಸೆಲ್, ಪ್ರೆಟ್ರೋಲ್, ಅಡುಗೆ ಅನಿಲ ಹಾಗೂ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಪದೇ, ಪದೇ ಹೆಚ್ಚಾಗುತ್ತಿರುವುದರಿಂದ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

        ಕರಾಳ ದಿನಾಚರಣೆಯಲ್ಲಿ ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್ ಚಮನ್‍ಸಾಬ್, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಕೆ.ಹೆಚ್.ಓಬಳೇಶಪ್ಪ, ಕೆ.ಎಸ್.ಬಸವಂತಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಜಿ.ಶಿವಕುಮಾರ್, ಪಾಲಿಕೆ ಸದಸ್ಯ ಎಂ.ಹಾಲೇಶ್, ಕಾರ್ಯದರ್ಶಿಗಳಾದ ಎ.ನಾಗರಾಜ್, ಎಸ್.ಮಲ್ಲಿಕಾರ್ಜುನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ತಿಪ್ಪಣ್ಣ, ಸುರೇಂದ್ರಮೊಯ್ಲಿ, ಅನ್ನಪೂರ್ಣ ಬಸವರಾಜ್, ಸದಸ್ಯರುಗಳಾದ ಅಶ್ವಿನಿ ಪ್ರಶಾಂತ್, ಅನಿತಾಬಾಯಿ ಮಾಲತೇಶ್, ಗೌಡ್ರು ರಾಜಶೇಖರ್, ಬಸಪ್ಪ, ಜಿ.ಬಿ.ಲಿಂಗರಾಜ್, ಎಲ್.ಎಂ.ಹನುಮಂತಪ್ಪ, ಶ್ರೀಮತಿ ಪುಷ್ಪಲತಾ ಜಗನ್ನಾಥ್, ಮುಖಂಡರುಗಳಾದ ರಮೇಶ್, ಹೆಚ್.ಜಯಣ್ಣ, ಘನಿತಾಹಿರ್, ಅಲ್ಲಾವಲಿ ಘಾಜಿಖಾನ್, ರಾಜೇಶ್ ನೆರ್ಲಿಗೆ, ಅಣಜಿ ಅಂಜಿನಪ್ಪ, ದ್ರಾಕ್ಷಾಯಿಣಮ್ಮ, ಅಲಿರಹಮತ್, ಡಿ.ಶಿವಕುಮಾರ್, ರಂಗಸ್ವಾಮಿ, ಅಜ್ಜಪ್ಪ ಪವಾರ್, ಆರೋಗ್ಯಸ್ವಾಮಿ, ಚಂದನ್, ಬಸವರಾಜ್, ಪ್ರವೀಣ್ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here