ನೈತಿಕ ಸ್ಥೈರ್ಯ ತುಂಬಲು ತಾಳ್ಯ ಕರೆ

ದಾವಣಗೆರೆ:

        ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತಿರುವ ಸಂದರ್ಭದಲ್ಲಿ ಸಾಹಿತಿಗಳು ಸಾಮಾಜಿಕ ಹೋರಾಟಗಳಲ್ಲಿ ನೇರವಾಗಿ ಪಾಲ್ಗೊಳ್ಳುವ ಮೂಲಕ ಸಮಾಜಕ್ಕೆ ನೈತಿಕ ಸ್ಥೈರ್ಯ ತುಂಬಬೇಕೆಂದು ಕವಿ ಚಂದ್ರಶೇಖರ್ ತಾಳ್ಯ ಕರೆ ನೀಡಿದರು.

        ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನನ್ನಿ ಪುಸ್ತಕ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಸಾಹಿತಿ ತೇಜಸ್ ಜಿ.ಎಲ್.ವಡ್ನಾಳ್‍ರವರ “ಮುಗಿಲ ಹೆಗಲ ಮೇಲೆ” ಪುಸ್ತಕ ಲೋಕಾರ್ಪಣೆಮಾಡಿ ಅವರು ಮಾತನಾಡಿದರು.

         ಪ್ರಸ್ತುತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎದುರಾಗಿ, ದೇಶದೆಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಇದು ಸಾಹಿತಿಗಳು ಸಂಭ್ರಮಿಸುವ ಕಾಲವಲ್ಲ. ಬದಲಿಗೆ ಸಾಹಿತಿಗಳ ಮೇಲೆ ಅಪರಿಮಿತ ಜವಾಬ್ದಾರಿಗಳಿದ್ದು, ಸಾಹಿತ್ಯದ ಮೂಲಕ ಕೆಲಸ ಮಾಡುವುದರ ಜೊತೆ, ಜೊತೆಯಾಗಿಯೇ ಸಾಮಾಜಿಕ ಹೋರಾಟಗಳಲ್ಲಿ ನೇರವಾಗಿ ಪಾಲ್ಗೊಂಡು ಸಮಾಜಕ್ಕೆ ನೈತಿಕ ಸ್ಥೈರ್ಯ ತುಂಬಬೇಕಾದ ಬಹುದೊಡ್ಡ ಜವಾಬ್ದಾರಿ ಇದೆ ಎಂದರು.

       ಈಗ ನಾವು ಭಯಗ್ರಸ್ತ ಸಮಾಜದಲ್ಲಿ ಬದುಕುತ್ತಿದ್ದೇವೆ. ಮಹಾತ್ಮ ಗಾಂಧೀಜಿಯವರು 21 ದಿನ ಉಪವಾಸ ಕೈಗೊಂಡಾಗ ಅದಕ್ಕೆ ಸ್ಪಂದಿಸಲು ಜನರಿದ್ದರು. ಆದರೆ, ಪ್ರಸ್ತುತ ಜನರ ಮನಃಸ್ಥಿತಿಯೇ ಬದಲಾಗಿದ್ದು, ಜ್ಞಾನಸ್ವರೂಪ ಸಾನಂದ ಸ್ವಾಮಿಗಳು ಗಂಗಾ ನದಿ ಶುದ್ಧೀಕರಣಕ್ಕಾಗಿ 110 ದಿನ ಉಪವಾಸ ಕೈಗೊಂಡು ಅಸುನೀಗಿದರೂ ಸರ್ಕಾರ, ಸಮಾಜದಿಂದ ಯಾವುದೇ ಸ್ಪಂದನೆ ವ್ಯಕ್ತವಾಗಲಿಲ್ಲ ಇದು ನಿಜಕ್ಕೂ ದುರಂತ ಎಂದು ವಿಷಾಧ ವ್ಯಕ್ತಪಡಿಸಿದರು.

       ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸಾವಿರಾರು ಜನ ಮಹಿಳೆಯರೇ ಬೀದಿಗಿಳಿದಿದ್ದು, ಸಮಾಜ ಯಾವ ದಿಕಿನಲ್ಲಿ ಸಾಗುತ್ತಿದೆ. ಸಾಹಿತಿಗಳಾಗಿ ನಾವು ಹೇಗೆ ಸ್ಪಂದಿಸುತ್ತಿದ್ದೇವೆ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಜರೂರು ಇದೆ ಎಂದು ಹೇಳಿದರು.

      ತಂದೆ-ತಾಯಿಯರು ಸಾಮಾನ್ಯವಾಗಿ ಮಕ್ಕಳ ಸಾಹಿತ್ಯ ಕೃಷಿಗೆ ಪ್ರೋತ್ಸಾಹ ನೀಡುವುದಿಲ್ಲ. ಇದಕ್ಕೆ ಅಪವಾದ ಎಂಬಂತೆ ತೇಜಸ್ ತಂದೆ-ತಾಯಿ ಮಗನ ಸಾಹಿತ್ಯಾಭಿರುಚಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಮಗನ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಮಗನ ಮದುವೆಯೇನೋ ಎಂಬಂತೆ ಸಂಭ್ರಮಿಸುತ್ತಿದ್ದಾರೆ. ಸಾಹಿತ್ಯಾಸಕ್ತಿ ಕ್ಷೀಣಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಇಂತಹ ಪೋಷಕರು ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

        ಕಾರ್ಯಕ್ರಮ ಉದ್ಘಾಟಿಸಿದ ಸಿರಿಗೆರೆ ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಪ್ರೊ.ಎಸ್.ಬಿ.ರಂಗನಾಥ ಮಾತನಾಡಿ, ಪ್ರಗತಿಶೀಲತೆಗೆ ವಿಜ್ಞಾನ ಅಗತ್ಯವಾದರೆ, ಜೀವನದ ಸೌಂದರ್ಯಕ್ಕೆ ಸಾಹಿತ್ಯದ ಅವಶ್ಯಕತೆ ಇದೆ. ವಿಜ್ಞಾನ ಮತ್ತು ಸಾಹಿತ್ಯ ಎರಡೂ ಜೊತೆಯಾಗಿ ಬೆಳೆಯಬೇಕು. ನಿಸಾರ್ ಅಹಮದ್, ಬಿ.ಜಿ.ಎಲ್.ಸ್ವಾಮಿಯಂತಹ ಅನೇಕ ವಿಜ್ಞಾನದ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯಕ್ಕೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಐಟಿ-ಬಿಟಿ ಕ್ಷೇತ್ರದವರೂ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಪ್ರಸಾರಕ್ಕೆ ಶ್ರಮಿಸುತ್ತಿದ್ದಾರೆ. ಇದೇ ರೀತಿ ತೇಜಸ್ ಕೂಡ ವಿಜ್ಞಾನ ವಿದ್ಯಾರ್ಥಿಯಾದರೂ ಚಿಕ್ಕ ವಯಸ್ಸಿನಲ್ಲೇ ಕಾವ್ಯಾಭಿರುಚಿ ಬೆಳೆಸಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇವರಿಂದ ಇನ್ನಷ್ಟು ಸಾಹಿತ್ಯ ಕೃಷಿ ನಡೆಯಲಿ ಎಂದು ಶುಭ ಹಾರೈಸಿದರು.
ಸಾಹಿತಿ ಡಾ.ಎ.ಬಿ.ರಾಮಚಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಆನಂದ ಋಗ್ವೇದಿ ಕೃತಿ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ, ಬಿ.ದಿಳ್ಳೆಪ್ಪ, ಅಂಗಡಿ ರೇವಣಸಿದ್ದಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸಿ.ಆರ್.ಪರಮೇಶ್ವರಪ್ಪ, ಹೆಚ್.ಕೆ.ಲಿಂಗರಾಜು, ನಿವೃತ್ತ ಡಿಡಿಪಿಐ ಡಿ.ಕೆ.ಶಿವಕುಮಾರ, ಯುವಕವಿ ತೇಜಸ್ ಜಿ.ಎಲ್.ವಡ್ನಾಳ್ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap