ಧರ್ಮಕ್ಕೆ ಕುತ್ತುಬಂದರೆ ಶ್ರೀಗಳೇ ಚಿಕಿತ್ಸೆ : ಸಚಿವ ಡಿ.ಸಿ.ತಮ್ಮಣ್ಣ

0
16

ಕುಣಿಗಲ್

       ಇಂದಿನ ಆಧುನಿಕ ಕಾಲದಲ್ಲಿಯೂ ಸ್ವಾಮೀಜಿಗಳು ಹಾಗೂ ಮಠಮಾನ್ಯಗಳ ಅವಶ್ಯಕತೆ ಇದೆ. ಮನುಷ್ಯರಿಗೆ ರೋಗ ಬಂದರೆ ವೈದ್ಯರು ಚುಚ್ಚುಮದ್ದು ನೀಡುತ್ತಾರೆ. ಅದೇ ರೀತಿ ಈ ಧರ್ಮಕ್ಕೆ ಕಾಯಿಲೆ ಬಂದರೆ ಮಠಮಾನ್ಯಗಳ ಗುರುಗಳು ಧರ್ಮ ರಕ್ಷಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ರಾಜ್ಯ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು.

       ಪಟ್ಟಣದ ದಿವ್ಯ ಸಮುದಾಯ ಭವನದಲ್ಲಿ ಇದೇ ಪ್ರಥಮಬಾರಿಗೆ ಶ್ರೀ ಬೆಟ್ಟಹಳ್ಳಿಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಇತರೆ ಸ್ವಾಮೀಜಿಗಳ ಸಮ್ಮುಖದಲ್ಲಿ ಆಯೋಜಿಸಿದ್ದ ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.

        ಆಧುನಿಕ ಸಮಾಜದಲ್ಲಿ ಮಠಮಾನ್ಯಗಳು ಗುರುಕುಲಗಳು ಅವಶ್ಯಕವಾಗಿದ್ದು, ಹಿಂದಿನ ಕಾಲದಲ್ಲಿ ಅರಸರುಗಳು ಮಠಮಾನ್ಯಗಳಿಗೆ ನೆರವು ನೀಡುತ್ತಿದ್ದರು. ಆದರೆ ಇಂದು ಸಾರ್ವಜನಿಕರು, ಸರ್ಕಾರಗಳು ಪ್ರೋತ್ಸಾಹ ನೀಡುತ್ತಾ ರಕ್ಷಣೆ ಮಾಡುತ್ತ ಬಂದಿವೆ ಎಂದ ಅವರು, ಜನರಿಗೆ ರೋಗ ಬಂದರೆ ಹೇಗೆ ವೈದ್ಯರು ಚಿಕಿತ್ಸೆ ನೀಡುತ್ತಾರೋ ಹಾಗೆಯೇ ಈ ಹಿಂದೂ ಧರ್ಮದಲ್ಲಿ ಧರ್ಮಕ್ಕೆ ಕುತ್ತುಬಂದರೆ ಮಠಮಾನ್ಯಗಳ ಗುರುಗಳು ಶ್ರೀರಕ್ಷೆ ನೀಡುತ್ತ ನಾಡಿನಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುತ್ತಾ ಬಂದಿದ್ದಾರೆ.

          ಹಿಂದೂ ಧರ್ಮದಲ್ಲಿ ಜನರು ಎಷ್ಟೇ ಸಂಪಾದನೆ ಇದ್ದರೂ ಜೀವನದಲ್ಲಿ ನೆಮ್ಮದಿಶಾಂತಿ ಕಾಣಲು ಮೋಕ್ಷಬಯಸುತ್ತಾರೆ. ಧರ್ಮ ರಕ್ಷಿಸದವರಿಗೆ ಮೋಕ್ಷ ಲಭಿಸದು ಎಂದ ಅವರು, ಕಾಯಕಯೋಗಿ ಶ್ರೀ ಶಿವಕುಮಾರಸ್ವಾಮೀಜಿಗಳ ಸೇವೆ ಅಗಾಧವಾಗಿದ್ದು ಭಗವಂತ ಶ್ರೀಗಳಿಗೆ ಇನ್ನೂ ಹೆಚ್ಚಿನ ಆಯಸ್ಸು ಆರೋಗ್ಯ ನೀಡಲಿ ಎಂದು ನಾನು ಸಹ ಪ್ರಾರ್ಥಿಸುತ್ತೇನೆ ಎಂದರು. ಮಠಮಾನ್ಯ ಸ್ವಾಮೀಜಿಗಳ ಪರಂಪರೆ ಹಿಂದಿನಿಂದಲೂ ಇದ್ದು ಧರ್ಮ ರಕ್ಷಣೆ, ಮಠ ಮಾನ್ಯಗಳನ್ನ ಸ್ಥಾಪಿಸುವ ಮೂಲಕ ಸಮಾಜದಲ್ಲಿ ಸಹಸ್ರಾರು ಭಕ್ತರಿಗೆ ದಾರಿದೀಪವಾಗಿದ್ದಾರೆ ಎಂದರು.

         ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಶ್ರೀ ಸಿದ್ಧಲಿಂಗೇಶ್ವರರ ಶತಮಾನೋತ್ಸವ ಕಾರ್ಯಕ್ರಮವನ್ನ ತಡೆಯಲು ಹಲವರು ಅಡ್ಡಿ ಆತಂಕಗಳನ್ನು ಉಂಟುಮಾಡಿದ್ದರು. ಲಿಂಗಧಾರಣೆ ಮಾಡಿರುವವರು ಶತಮಾನೋತ್ಸವಕ್ಕೆ ಬನ್ನಿ ಎಂದು ಕರೆ ನೀಡಿದ ಹಿನ್ನೆಲೆಯಲ್ಲಿ ಇಂದು ತಾಲ್ಲೂಕಿನಾದ್ಯಂತ ವೀರಶೈವಲಿಂಗಾಯಿತರು ಆಗಮಿಸಿ ಪ್ರಥಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದ ಅವರು, ಈ ಕಾರ್ಯಕ್ರಮವನ್ನು ಶ್ರೀ ಶಿವಕುಮಾರಸ್ವಾಮೀಜಿಗಳ ಆದೇಶದ ಮೇರೆಗೆ ವೀರಶೈವಲಿಂಗಾಯತ ಸಮಾಜದ ಸಂಘಟನೆಗೋಸ್ಕರ ಆಯೋಜಿಸಲಾಗಿದೆಯೇ ಹೊರತು ಇದರಲ್ಲಿ ಯಾವುದೇ ಸ್ವಾರ್ಥ ಇಲ್ಲ ಎಂದ ಅವರು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಮುಂದುವರೆಯಲಿವೆ ಎಂದು ಅಡ್ಡಿಪಡಿಸಿದವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಸಮಾಜದಲ್ಲಿರುವ ಒಳಪಂಗಡಗಳನ್ನ ದೂರ ಮಾಡಿ ವೀರಶೈವ ಲಿಂಗಾಯಿತ ಧರ್ಮ ಒಂದೇ ಎಂದು ಮುಂದಿನ ದಿನಗಳಲ್ಲಿ ಒಂದಾಗಿ ಸಮಾಜದಲ್ಲಿ ಆಚಾರ, ಸಂಸ್ಕಾರ, ಸಂಸ್ಕತಿಯನ್ನ ಅರಿವುಂಟು ಮಾಡುವ ಕೆಲಸವನ್ನ ಸಮಾಜದ ಮುಖಂಡರು ಕೈಗೊಳ್ಳಬೇಕಾಗಿದೆ ಎಂದ ಅವರು, ವಿವಿಧ ಕಡೆಯಿಂದ ಆಗಮಿಸಿದ ಶ್ರೀಗಳಿಗೆ ಮತ್ತು ಸಮಾಜ ಬಾಂಧವರಿಗೆ ಅಭಿನಂದಿಸಿದರು.

        ಶಾಸಕ ಡಾ.ರಂಗನಾಥ್ ಮಾತನಾಡಿ, ನಾನು ವೈದ್ಯನಾಗಿ ಬಂದವನು ನನಗೆ ಜಾತಿ ಭೇದ ಗೊತ್ತಿಲ್ಲ. ಯಾವುದೇ ಶಸ್ತ್ರಚಿಕಿತ್ಸೆ ನಡೆಸುವಾಗ ರಕ್ತ ನೀಡುವ ವ್ಯಕ್ತಿಯ ಧರ್ಮ ಜಾತಿ ಯಾವುದು ಎಂಬ ಆಲೋಚನೆಯು ನಮ್ಮಲ್ಲಿ ಬರುವುದಿಲ್ಲ. ಸಮಾಜದ ಮನವಿಯಂತೆ ಭೂಮಿ, ನೀರು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಕಳೆದ 25 ವರ್ಷಗಳಿಂದ ಹೇಮಾವತಿ ನೀರು ತಾಲ್ಲೂಕಿಗೆ ಹರಿಯದೇ ಅನ್ಯಾಯವಾಗಿದೆ. ಶ್ರೀ ಸಿದ್ದಲಿಂಗೇಶ್ವರರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಸುಖ-ಶಾಂತಿ-ನೆಮ್ಮದಿ ದೊರೆಯುವುದರ ಜೊತೆಯಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದರು.

         ಈ ಸಂದರ್ಭದಲ್ಲಿ ಬೇಲಿಮಠದ ಶಿವರುದ್ರ ಮಹಾಸ್ವಾಮಿಗಳು, ಎಡೆಯೂರಿನ ಬಾಳೆಹೊನ್ನೂರು ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯಸ್ವಾಮೀಜಿ, ಹಿತ್ತಲಮಠದ ಸದಾಶಿವ ಶಿವಾಚಾರ್ಯಸ್ವಾಮೀಜಿ, ಗವಿಮಠದ ತೋಂಟದಾರ್ಯ ಸ್ವಾಮೀಜಿ, ಹುಲಿಯೂರುದುರ್ಗ ಸಿದ್ದಗಂಗಾ ಮಠದ ಸಿದ್ದಗಂಗಾ ಸ್ವಾಮೀಜಿ, ಕುಣಿಗಲ್ ಹಿರೇಮಠದ ಶಿವಕುಮಾರ ಸ್ವಾಮೀಜಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಸಿ. ಮಹದೇವಯ್ಯ, ಬಿಜೆಪಿ ಮುಖಂಡ ಹೆಚ್.ಡಿ.ರಾಜೇಶ್‍ಗೌಡ, ಪುರಸಭಾ ಅಧ್ಯಕ್ಷೆ ನಳಿನಾ, ಸಮಾಜದ ಮುಖಂಡರುಗಳಾದ ಕಿರಣ್‍ಬಾಬು, ವಸಂತ್‍ಕುಮಾರ್, ರೇಣುಕಪ್ರಸಾದ್, ಚಂದ್ರಶೇಖರಪ್ಪ, ಆರಾಧ್ಯ, ಗಂಗಾಧರ್, ಸಮಾಜದ ಬಂಧುಗಳು ಭಾಗವಹಿಸಿದ್ದರು. ಸಮಾರಂಭಕ್ಕೂ ಪಟ್ಟಣದ ಶ್ರೀ ಅಟವೀಶ್ವರ ದೇವಾಲಯದಿಂದ ಶ್ರೀ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿಯ ವಿಗ್ರಹವನ್ನು ಬೆಳ್ಳಿಯ ರಥದಲ್ಲಿ ಕೂರಿಸಿ ಪೂರ್ಣಕುಂಭ ಕಲಶ ಹಾಗೂ ವಿವಿಧ ಕಲಾ ಮೇಳಗಳೊಂದಿಗೆ ಭವ್ಯಮೆರವಣಿಗೆಯೊಂದಿಗೆ ಹಲವು ಶ್ರೀಗಳ ಸಮ್ಮುಖದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here