ಬ್ಯಾಂಕ್‍ಗಳ ಖಾತೆ ಮೇಲೆ ನಿಗಾ ಇಡಲು ಡಿಸಿ ಸೂಚನೆ

ಬಳ್ಳಾರಿ

      ಬ್ಯಾಂಕ್‍ಗಳಲ್ಲಿ ಒಂದುಲಕ್ಷಕ್ಕಿಂತ ಹೆಚ್ಚು ಹಣ ಜಮಾ ಮಾಡಿದರೆ ಮತ್ತು ಡ್ರಾ ಮಾಡಿದರೇ ಅವುಗಳ ವರದಿಯನ್ನು ಪ್ರತಿನಿತ್ಯ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಬ್ಯಾಂಕ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

       ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬ್ಯಾಂಕ್ ಮ್ಯಾನೇಜರ್‍ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

        ಕಳೆದ ಎರಡು ತಿಂಗಳು ಅವಧಿಯಲ್ಲಿ ದಿಢೀರ್ ಆಗಿ ಡ್ರಾ ಮಾಡುತ್ತಿದ್ದರೇ ಅಂತಹ ಬ್ಯಾಂಕ್ ಖಾತೆಗಳ ವಿವರ ಸಹ ನೀಡಬೇಕು. ಕಳೆದ ಎರಡು ತಿಂಗಳಲ್ಲಿ 1ಲಕ್ಷಕ್ಕಿಂತ ಹೆಚ್ಚು ವ್ಯವಹಾರ ನಡೆದಿದ್ದರೂ ಅದರ ಮಾಹಿತಿ ನೀಡಿ; ಅಂತಹ ಖಾತೆಗಳತ್ತ ವಿಶೇಷ ಗಮನಹರಿಸಲು ಅನುಕೂಲವಾಗುತ್ತದೆ ಎಂದರು.

       ಜಿಲ್ಲೆಯಲ್ಲಿ 320 ಬ್ಯಾಂಕ್ ಶಾಖೆಗಳಿದ್ದು,ಅವುಗಳೆಲ್ಲವುದರ ವರದಿಯನ್ನು ಬ್ಯಾಂಕ್ ಮ್ಯಾನೇಜರ್‍ಗಳು ಮತ್ತು ಕೋ- ಆರ್ಡಿನೇಟರ್‍ಗಳು ಪ್ರತಿನಿತ್ಯ ವರದಿಯನ್ನು ಚುನಾವಣಾ ವೆಚ್ಚ ಪರಿಶೀಲನಾ ವಿಭಾಗಕ್ಕೆ ಸಲ್ಲಿಸಬೇಕು.ವಾರದ ವರದಿ ಸಲ್ಲಿಸುವುದು ಕಡ್ಡಾಯ ಎಂದು ವಿವರಿಸಿದ ಅವರು ನಿಗದಿಪಡಿಸಿದ ಅವಧಿಯೊಳಗೆ ವರದಿ ಸಲ್ಲಿಸದಿದ್ದಲ್ಲಿ ಪ್ರಜಾಪ್ರತಿನಿತ್ಯ ಕಾಯ್ದೆ ಸೆಕ್ಷನ್ 32ರ ಅನ್ವಯ ಬ್ಯಾಂಕ್ ಮ್ಯಾನೇಜರ್ ಮತ್ತು ಬ್ಯಾಂಕ್ ಕೋ-ಆರ್ಡಿನೇಟರ್‍ಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

       ತಾವು ಕೂಡ ಚುನಾವಣಾ ಮಶಿನರಿಗಳು; ಈ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಬೇಕು; ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಹಣದ ಹರಿವು ಉಂಟಾಗುವ ಸಾಧ್ಯತೆ ಇದ್ದು, ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

         ಕಣ್ಮುಂದೆಯೇ ಎರ್ರಾಬಿರ್ರಿ ಹಣದ ವ್ಯವಹಾರ ನಡಿತಾ ಇದ್ದರೂ ಕಣ್ಮುಚ್ಚಿ ಕುಳಿತುಕೊಳ್ಳುವುದು ಮಹಾ ಅಪರಾಧ; ಅಂತವುಗಳ ಮಾಹಿತಿ ನೀಡುವುದು ಅಗತ್ಯ ಎಂದು ಒತ್ತಿ ಹೇಳಿದ ಡಿಸಿ ರಾಮ್ ಪ್ರಸಾತ್ ಅವರು,ಒಂದು ಖಾತೆಯಿಂದ ನಾಲ್ಕೈದು ಖಾತೆಗಳಿಗೆ ಹಣ ವರ್ಗಾವಣೆಯಾಗುತ್ತಿದ್ದರೇ ಅಂತವುಗಳನ್ನು ಪತ್ತೆಹಚ್ಚಿ ನೆಪ್ಟ್ ಮತ್ತು ಆರ್‍ಟಿಜಿಎಸ್ ಮಾಡುವುದಕ್ಕಿಂತ ಮುಂಚೆ ಎರಡು ಬಾರಿ ಚೆಕ್ ಮಾಡಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಅವರ ಕುಟುಂಬದವರು ಚುನಾವಣಾ ಪ್ರಕ್ರಿಯೆಗಾಗಿ ರೂ.1ಲಕ್ಷಕ್ಕಿಂತ ಹೆಚ್ಚು ಹಣ ತೆಗೆದರೇ ಅವುಗಳ ವಿವರ ಸಲ್ಲಿಸಿ ಎಂದರು.

       ಎನ್‍ಜಿಒ ಖಾತೆಗಳ ಮೇಲೆಯೂ ನಿಗಾ: ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಸ್ವ ಸಹಾಯ ಸಂಘಗಳು ಮತ್ತು ಎನ್‍ಜಿಒ ಸದಸ್ಯರ ಓಲೈಕೆ ಮಾಡಲಿದ್ದಾರೆ. ಇಂತಹ ಸಂದರ್ಭದಲ್ಲಿ ಎನ್‍ಜಿಒ ಮತ್ತು ಸ್ವಸಹಾಯ ಸಂಘಗಳ ಖಾತೆಗಳಿಗೆ ಹೆಚ್ಚಿನ ಹಣ ಹರಿದು ಬರುವ ಸಾಧ್ಯತೆ ಇದ್ದು,ಅವುಗಳ ಖಾತೆ ಮೇಲೆ ಹೆಚ್ಚಿನ ನಿಗಾವನ್ನು ಬ್ಯಾಂಕ್‍ಗಳು ವಹಿಸಬೇಕು ಮತ್ತು ಅಂತಹ ಸಂಶಯಾಸ್ಪದ ಕಂಡುಬಂದಲ್ಲಿ ತಕ್ಷಣ ನಮ್ಮ ಗಮನಕ್ಕೆ ತರಬೇಕು ಎಂದು ಹೇಳಿದ ಅವರು, ಇವುಗಳ ಖಾತೆಗೆ ಕನಿಷ್ಠ 50 ಸಾವಿರ ಹಣ ಸಂಗ್ರಹವಾದರೂ ಮಾಹಿತಿ ನೀಡಿ ಎಂದು ಸೂಚಿಸಿದರು.

      ಯಾರಾದರೂ ಹಣ ವರ್ಗಾವಣೆ ಮಾಡುವ ವಿಷಯದಲ್ಲಿ ತಮಗೆ ತೊಂದರೆ ನೀಡಿದರೇ ನಮ್ಮ ಗಮನಕ್ಕೆ ತರುವಂತೆ ಸೂಚಿಸಿದ ಅವರು ಈ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ವಾಹನದೊಂದಿಗೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು, ಆಮೇಲೆ ಸಬೂಬು ಹೇಳಿದರೇ ನಡೆಯುವುದಿಲ್ಲ ಎಂದು ಹೇಳಿದ ಅವರು, ತಮ್ಮ ಏನೇ ಸಮಸ್ಯೆಗಳಿದ್ದರೇ ಗಮನಕ್ಕೆ ತನ್ನಿ ಎಂದರು.

        ಜನಧನ ಖಾತೆಗಳ ಮೇಲೆ ನಿಗಾ ಇಡಿ: ಬಹಳಷ್ಟು ದಿನಗಳಿಂದ ನಿಷ್ಕ್ರೀಯವಾಗಿರುವ ಜನಧನ ಖಾತೆಗಳಿಗೆ ಹಾಗೂ ಶೂನ್ಯ ಖಾತೆಗಳಿಗೆ ದಿಢೀರನೆ ಹಣ ಬಂದು ಬಿಳುವ ಸಾಧ್ಯತೆ ಇದ್ದು, ಪರಿಶೀಲಿಸಿ ವರದಿ ಕೊಡಿ ಎಂದರು.ಶಾಂತಿ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಯುವ ನಿಟ್ಟಿನಲ್ಲಿ ಜನರ ಸೇವೆ ಮಾಡುವ ತಾವು ನಮ್ಮೊಂದಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್ ಅವರು ಮಾತನಾಡಿದರು.

     ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಬ್ಯಾಂಕ್ ಅಧಿಕಾರಿಗಳು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap