ನಿರಾಶ್ರಿತರ ಕೇಂದ್ರದಲ್ಲಿ ದೀಪಾವಳಿ

0
10

ಚಿತ್ರದುರ್ಗ:

       ಗೋನೂರು ಸಮೀಪವಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಯೋಗ ವೇದಾಂತ ಸೇವಾ ಸಮಿತಿಯಿಂದ ಗುರುವಾರ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.

      ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಯೋಗ ವೇದಾಂತ ಸೇವಾ ಸಮಿತಿ ಉಪಾಧ್ಯಕ್ಷ ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಭಾರತದ ಹಿಂದು ಪರಂಪರೆಯಲ್ಲಿ ಎಲ್ಲರೂ ಕೂಡಿ ಬಾಳುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯ. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಾರ್ಥತೆ ಎಲ್ಲರಲ್ಲೂ ಜಾಸ್ತಿಯಾಗಿರುವುದರಿಂದ ಮಕ್ಕಳು ಅಪ್ಪ-ಅಮ್ಮಂದಿರನ್ನು ಮನೆಯಿಂದ ಹೊರಗೆ ಹಾಕುತ್ತಿರುವುದರಿಂದ ನಿರಾಶ್ರಿತರ ಪರಿಹಾರ ಕೇಂದ್ರಗಳು ಹುಟ್ಟಿಕೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

         ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯಲೇಬೇಕು. ಹುಟ್ಟು ಸಾವಿನ ನಡುವೆ ಎಲ್ಲರ ಜೀವನದಲ್ಲಿಯೂ ಸುಖ ದುಃಖಗಳು ಎದುರಾಗುವುದು ಸಹಜ. ಹಾಗಾಗಿ ಎರಡನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು. ಪ್ರಾಯದಲ್ಲಿ ಕಷ್ಟ ಬಂದರೆ ತಡೆದುಕೊಳ್ಳಬಹುದು. ವಯಸ್ಸಾದ ಮೇಲೆ ನಿಜವಾದ ನೆಮ್ಮದಿ ಸುಖ ಮನುಷ್ಯನಿಗೆ ಬೇಕು. ಇಲ್ಲಿನ ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರು ನಿಜವಾದ ಸುಖಿಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

        ತಂದೆ,ತಾಯಿ, ಗುರು-ಹಿರಿಯರು ದೇಶವನ್ನು ಗೌರವಿಸುವ ಗುಣವನ್ನು ಚಿಕ್ಕಂದಿನಿಂದಲೇ ಮಕ್ಕಳಿಗೆ ಕಲಿಸಬೇಕು. ನೀವುಗಳು ಎಂದಿಗೂ ನಿರಾಶ್ರಿತರೆಂದು ಕೊರಗಬೇಡಿ. ಸರ್ಕಾರ ನಿಮಗಾಗಿ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುತ್ತಿದೆ. ಸದುಪಯೋಗಪಡಿಸಿಕೊಳ್ಳಿ ಎಂದು ನಿರಾಶ್ರಿತರಿಗೆ ತಿಳಿಸಿದರು.

          ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರುದ್ರಪ್ಪ ಮಾತನಾಡುತ್ತ ಚಿಕ್ಕಂದಿನಿಂದ ಸಾಕಿ ಸಲಹಿದ ಮಕ್ಕಳೆ ದೊಡ್ಡವರಾದ ಮೇಲೆ ನಿಮ್ಮನ್ನು ಮನೆಯಿಂದ ಹೊರಗೆ ದಬ್ಬುವುದರಿಂದ ನೀವುಗಳು ನಿರಾಶ್ರಿತರಾಗಬೇಕಾದ ಸಂದರ್ಭ ಬಂದಿದೆ. ನಿಮ್ಮನ್ನೆಲ್ಲಾ ನೋಡಿದರೆ ನೀವುಗಳು ನಿರಾಶ್ರಿತರ ಕೇಂದ್ರದಲ್ಲಿದ್ದೀರ ಎಂದು ಅನಿಸುವುದಿಲ್ಲ. ಏಕೆಂದರೆ ಇಲ್ಲಿನ ಅಧೀಕ್ಷಕ ಮಹದೇವಯ್ಯನವರು ನಿಮ್ಮನ್ನೆಲ್ಲಾ ಅಷ್ಟೊಂದು ಅಚ್ಚುಕಟ್ಟಾಗಿ ಇಟ್ಟಿದ್ದಾರೆ ಎಂದು ಗುಣಗಾನ ಮಾಡಿದರು.

       ಕೊನೆಗಾಲದಲ್ಲಿ ಸುಖವಾಗಿರಬೇಕಾದರೆ ಜೀವನದಲ್ಲಿ ಏನಾದರೂ ಪುಣ್ಯ ಮಾಡಿರಬೇಕು. ಆದ್ದರಿಂದ ನಿರಾಶ್ರಿತರಾದ ನೀವುಗಳು ಇಲ್ಲಿ ನೆಮ್ಮದಿಯಿಂದ ಇದ್ದೀರ ಎಂದು ಹೇಳಿದರು.

        ಯೋಗ ವೇದಾಂತ ಸೇವಾ ಸಮಿತಿ ಖಜಾಂಚಿ ವೆಂಕಟರಾಂ ಮಾತನಾಡಿ ಈ ನಿರಾಶ್ರಿತರ ಪರಿಹಾರ ಕೇಂದ್ರ ನಿಜವಾಗಿಯೂ ರಾಜ್ಯಕ್ಕೆ ಮಾದರಿಯಾಗಿದೆ. ಕರ್ನಾಟಕವಲ್ಲದೆ ಬೇರೆ ರಾಜ್ಯಗಳಿಂದ ನಿರಾಶ್ರಿತರಾಗಿ ಬಂದವರಿಗೂ ಇಲ್ಲಿ ಆಶ್ರಯ ನೀಡುತ್ತಿರುವುದು ಮೆಚ್ಚುವಂತದ್ದು, ಜೀವನವೆಂಬುದು ಕತ್ತಲು ಬೆಳಕು ಇದ್ದಂತೆ ಕೆಲವರು ಯಾರು ಇಲ್ಲದೆ ನಿರಾಶ್ರಿತರಾಗಿದ್ದರೆ ಇನ್ನು ಕೆಲವರು ಗಂಡ, ಮಕ್ಕಳು ಬಂಧು ಬಳಗ ಎಲ್ಲಾ ಇದ್ದರೂ ನಿರಾಶ್ರಿತರಾಗಿರುವುದು ನೋವಿನ ಸಂಗತಿ ಎಂದರು.

      ಯೋಗ ವೇದಾಂತ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್‍ಬಾಬು, ಸ್ಪೂರ್ತಿ, ರಾಜು, ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಮಹದೇವಯ್ಯ ವೇದಿಕೆಯಲ್ಲಿದ್ದರು.ದೀಪಾವಳಿ ಹಬ್ಬದ ಪ್ರಯುಕ್ತ ನಿರಾಶ್ರಿತರಿಗೆ ಸಿಹಿ ಮತ್ತು ಹಣ್ಣುಗಳನ್ನು ವಿತರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here