ಕೂಡಿಟ್ಟ ಹಣವು ಬ್ಲಾಕ್ ಮನಿ ಆಗದಿರಲಿ

ದಾವಣಗೆರೆ:
   
       ಕಾಯಕದ ಮೂಲಕ ಸಂಪಾದಿಸಿ, ಕೂಡಿಟ್ಟ ಹಣವು ಬ್ಲಾಕ್ ಮನಿ ಆಗದಂತೆ ಎಚ್ಚರ ವಹಿಸಬೇಕೆಂದು ಚಿತ್ರದುರ್ಗ ಬೃಹನ್ಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.ನಗರದ ಲಾಯರ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್‍ನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಯಕದ ಮೂಲಕ ಗಳಿಕೆ ಮಾಡಿ, ಕೂಡಿಟ್ಟ ಹಣವು ಕಪ್ಪು ಹಣ ಆಗದಂತೆ ಎಚ್ಚರ ವಹಿಸಿ, ಇರುವ ಹಣವನ್ನು ಮನೆಯಲ್ಲಿ ಇಡದೇ ಬ್ಯಾಂಕ್‍ಗಳಲ್ಲಿ ಠೇವಣಿ ಮಾಡಿ, ಅದರಲ್ಲಿ ಬರುವ ಹಣದಿಂದ  ಸಮಾಜಮುಖ್ಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
     
       ಜೀವನಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಪೂರೈಸಿಕೊಳ್ಳಲು ಹಣ ಗಳಿಕೆ ಅತ್ಯವಶ್ಯವಾಗಿದೆ. ಈ ಹಣವೆಂಬ ಸಂಪತ್ತು ಗಳಿಸಲು ಕಾಯಕ ಕೈಗೊಳ್ಳಬೇಕಾಗಿದೆ.  ಹೀಗೆ  ಪ್ರತಿಯೊಬ್ಬರೂ  ಪರಿಶ್ರಮಿಗಳಾಗಿ ಗಳಿಸುವ ಹಣವನ್ನು ಬಳಸುವುದು, ಬೆಳೆಸುವುದು, ಕೂಡಿಡುವುದು, ಸತ್ಪಾತ್ರಕ್ಕೆ ಸಲ್ಲಿಸುವುದು, ದುಡಿಸುವುದಕ್ಕಾಗಿ. ಆದರೆ, ಹಣ ಮನೆಯಲ್ಲಿ ಇಟ್ಟರೆ ಅದು ದುಡಿಯವುದಿಲ್ಲ. ದ್ವಿಗುಣವಾಗುವುದೂ ಇಲ್ಲ. ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ ದುಡಿಯುತ್ತದೆ. ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ ಎಂದರು.
 
       ಬ್ಯಾಂಕುಗಳ ಅಭಿವೃದ್ಧಿಗೆ ಸಾರ್ವಜನಿಕರ, ಠೇವಣಿದಾರರ ಸಹಕಾರ ಅತ್ಯವಶ್ಯವಾಗಿದೆ. ಹಣವನ್ನು ಠೇವಣಿ ಇಡುವುದರ ಜೊತೆಗೆ, ಸಾಲ ಪಡೆದು, ಸರಿಯಾಗಿ ಪಾವತಿ ಮಾಡಿದರೆ, ಬ್ಯಾಂಕುಗಳು ಹಾಗೂ ಸಾರ್ವಜನಿಕರು ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ. ನಮ್ಮ ಮಠಕ್ಕೆ ಸಂಬಂಧಿಸಿದ ಟ್ರಸ್ಟ್, ಶಾಲೆ, ಮಠ, ಹಾಸ್ಟೆಲ್ ವ್ಯವಹಾರ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಮೂಲಕವೇ ನಡೆಯುತ್ತಿದೆ ಎಂದು ಹೇಳಿದರು.
       ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಬ್ಯಾಂಕ್‍ಗಳ ಅಭಿವೃದ್ಧಿಗೆ ಗ್ರಾಹಕರ ಪಾತ್ರ ಅತೀ ಮುಖ್ಯವಾಗಿದೆ. ಪಡೆದ ಸಾಲವನ್ನು ಸರಿಯಾಗಿ  ಮರು ಪಾವತಿ ಮಾಡಿದರೆ, ಬ್ಯಾಂಕ್‍ಗಳು ಹಾಗೂ ಗ್ರಾಹಕರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಸ್ವಂತ ಕಟ್ಟಡ ಹೊಂದಿದ್ದನ್ನು ಶ್ಲಾಘನೀಯವಾಗಿದ್ದು, ಇನ್ನೂ ಮುಂದೆ ಹಂತ-ಹಂತವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
       ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಇಂದಿನ ಕಾಲದಲ್ಲಿ ಬ್ಯಾಂಕ್ ನಡೆಸುವುದು ಕಷ್ಟದ ಕೆಲಸ. ಸಣ್ಣಪುಟ್ಟ ಸಹಕಾರಿ ಬ್ಯಾಂಕ್‍ಗಳಲ್ಲಿ ಹಣದ ವ್ಯವಹಾರ ಮಾಡಬೆಕಾದರೆ, ಗ್ರಾಹಕರು ಸಾಕಷ್ಟು ಬಾರೀ ಯೋಚನೆ ಮಾಡುತ್ತಾರೆ. ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು, ಅಧ್ಯಕ್ಷರು, ವ್ಯವಸ್ಥಾಪಕರು ಯಾರು ಇದ್ದಾರೆ ಎಂದು ನೋಡಿಕೊಂಡು ವ್ಯವಹಾರ ನಡೆಸಲು ಮುಂದುವರೆಯುತ್ತಾರೆ. ಇದಕ್ಕಾಗಿ ಬ್ಯಾಂಕ್‍ಗಳು ಒಳ್ಳೆಯ ಹೆಸರು ಗಳಿಸಿಕೊಂಡು ಮುನ್ನಡೆಯಬೇಕು. ಗ್ರಾಹಕರ ವಿಶ್ವಾಸ ಗಳಸಬೇಕೆಂದು ಸಲಹೆ ನೀಡಿದರು.
ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಬ್ಯಾಂಕಿನ ಅಧ್ಯಕ್ಷ ಎಂ.ಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್.ಎ.ರವೀಂದ್ರನಾಥ, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.
        ಇದೇ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷ ಯಜಮಾನ್ ಮೋತಿ ವೀರಣ್ಣ, ಯಜಮಾನ್ ಮೋತಿ ವಿಶ್ವನಾಥ್, ಅಂದನೂರು ಮುರುಗೇಶಪ್ಪ, ಸೋಗಿ ಆರ್.ಶಿವಯೋಗಿ, ಎಸ್.ಓಂಕಾರಪ್ಪ, ಎನ್.ನೀಲಗಿರಿಯಪ್ಪ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬ್ಯಾಂಕಿನ ಉಪಾಧ್ಯಕ್ಷ ಎಂ.ಓಂಕಾರಪ್ಪ ಸ್ವಾಗತಿಸಿದರು. ಶಶಿಧರ ಬಸಾಪುರ ತಂಡದವರು ಪ್ರಾರ್ಥಿಸಿದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap