ಡಾ.ಎಸ್.ಪಿ .ಪದ್ಮಪ್ರಸಾದ್ ಅವರ ಅಭಿನಂದನಾ ಸಮಾರಂಭ

0
6
ತುಮಕೂರು
       
      ಕನ್ನಡ ಭಾಷೆಯು ಕೊರಳ ಭಾಷೆಯಾಗದೆ ಕರುಳ ಭಾಷೆಯಾಗಬೇಕು. ಹಾಗೆ ಕನ್ನಡವನ್ನು ಕರುಳ ಭಾಷೆಯನ್ನಾಗಿಸಿ ಕೊಂಡು ವಿವಿಧ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದ ಡಾ.ಎಸ್.ಪಿ.ಪದ್ಮಪ್ರಸಾದ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವುದು ಸಂತಸದ ವಿಷಯ ಎಂದು ನಾಡೋಜ ಡಾ.ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.
           ನಗರದ ಸಿದ್ದಗಂಗಾ ಬಾಲಕರ ಕಾಲೇಜಿನ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸಭಾಂಗಣದಲ್ಲಿ ಡಾ.ಎಸ್.ಪಿ .ಪದ್ಮಪ್ರಸಾದ್ ಅವರಗೆ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭ ಹಾಗೂ ಗ್ರಂಥ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅಭಿನಂದನಾ ನುಡಿಗಳನ್ನಾಡಿದ ಅವರು, ಕನ್ನಡ ಹಾಗೂ ಸಂಸ್ಕøತಿಯ ಮೇಲಿನ ಪ್ರೀತಿಯಿಂದ ಪದ್ಮ ಪ್ರಸಾದ್ ಅಭಿಮಾನಿಗಳು ಬೇರೆ ಬೇರೆ ಕಡೆಗಳಿಂದ ಬಂದಿರುವುದು ಮೆಚ್ಚುವಂತಹ ಸಂಗತಿ. ಇಲ್ಲಿ ನೆರೆದಿರುವ ಎಲ್ಲರೂ ಪ್ರೀತಿ, ಅಭಿಮಾನ ವಿಶ್ವಾಸದಿಂದ ಬಂದವರೇ ಹೊರತು ಯಾರೂ ಲಾರಿಯಲ್ಲಿ ಕರೆತಂದವರಲ್ಲ ಎಂದರು.
          ಪದ್ಮಪ್ರಸಾದ್ ಅವರ ಬಗ್ಗೆ ಮಾತನಾಡಿದ ಅವರು, ಹೃದಯ ವಂತಿಕೆ ಓದಿನ ಹಿನ್ನೆಲೆ, ಸಂಸ್ಕøತಿಯ ಪ್ರೀತಿ ಇಲ್ಲಿ ತುಂಬಿ ತುಳುಕುತ್ತಿದೆ. ಪದ್ಮಪ್ರಸಾದ್ ಇಂತಹ ಎಷ್ಟೊ ಸಮಾರಂಭಗಳಲ್ಲಿ ಭಾಗವಹಿಸಿ ಸಾಕಷ್ಟು ವಿಚಾರಗಳನ್ನು ಸಂಗ್ರಹಿಸಿ, ಅವುಗಳನ್ನು ದಾಖಲು ಮಾಡಿ ಪುಸ್ತಕದ ರೂಪದಲ್ಲಿ ತಂದಿದ್ದಾರೆ. ಏಣಿಯ ಮೆಟ್ಟಿಲುಗಳನ್ನು ಹತ್ತಿ ಬರುವ ಹಾಗೆ ನಾನಾ ರೀತಿಯ ಕಷ್ಟಗಳನ್ನು ಮೆಟ್ಟಿ ನಿಂತು ಇಂತಹ ಸ್ಥಾನಕ್ಕೆ ತಲುಪಿದ್ದಾರೆ.
          ಅವರ ಜೀವನವನ್ನು ಸಿಂಹಾವಲೋಕನ ಮಾಡುವ ಸಮಯವಿದು. ಪ್ರಸಾದ್ ಅವರು ಇಂದು ಅವರ ಜೀವನದ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಸಮಾರಂಭ ಇದಾಗಿದೆ. ಸಜ್ಜನರು ತಮಗೆ ಮಾಡಿದ ಉಪಕಾರವನ್ನು ಮರೆಯುವುದಿಲ್ಲವಂತೆ ಹಾಗೆಯೇ ಇದು ಉಪಕಾರದ ಸ್ಮರಣೆಯ ಸಂದರ್ಭವೂ ಇದಾಗಿದೆ. ಅವರು ನಡೆದು ಬಂದ ದಾರಿ, ನಡೆಯಬೇಕಾದ ದಾರಿಯನ್ನು ಬುದ್ದಿಯಾಗಿಟ್ಟುಕೊಂಡು ಮುಂದೆ ಹಾಕಬೇಕಾದ ಹೆಜ್ಜೆಗಳನ್ನು, ಹೋಗಬೇಕಾದ ದಿಕ್ಕನ್ನು ದಾರಿಯ ಸ್ವರೂಪವನ್ನು ನಿರ್ಧರಿಸುವಂತಹ ಕಾಲಘಟ್ಟದಲ್ಲಿ ಈ ಹೊತ್ತು ಪದ್ಮಪ್ರಸಾದ್ ಅವರು ಇದ್ದಾರೆ ಎಂದು ಸಂತಸ ವ್ಯಕ್ತ ಪಡಿಸಿದರು. 
          ಗುರುಗಳನ್ನು ಎಂದೂ ಮರೆಯಬಾರದು. ಅದಕ್ಕೆ ಉದಾಹರಣೆಯಾಗಿ  ವಿವಿಯ ಪ್ರೊ.ಪರಮಶಿವಮೂರ್ತಿ ಇಂದಿಗೂ ತನ್ನ ಶಿಕ್ಷಕರ ಮುಂದೆ ಕೈ ಕಟ್ಟಿಕೊಂಡು ನಿಂತಿದ್ದಾರೆ ಎಂದರಲ್ಲದೆ 2500 ವರ್ಷಗಳ ಹಿಂದಿನ ಇತಿಹಾಸದ ದುಷ್ಟಾಂತದ ಮೂಲಕ ಗುರು ಎಂದಿಗೂ ಮೇಲೆ ಇರಬೇಕು. ಶಿಷ್ಯ ಗುರುವಿಗಿಂತ ಕೆಳಗೆ ಇರಬೇಕು ಎಂಬುದನ್ನು ಮನವರಿಕೆ ಮಾಡಿದರು. ಪ್ರತಿಯೊಬ್ಬರಿಗೆ ಸೃಜನಶೀಲತೆ, ಭಕ್ತಿ, ವಿದ್ವತ್ ಇರಬೇಕು. ಅದು ಪ್ರಸಾದ್‍ರವರಲ್ಲಿ ಸಾಕಷ್ಟು ಇದೆ. ಆದ್ದರಿಂದಲೇ ಅವರು ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ  ಎಂದರು. 
         ಕಾರ್ಯಕ್ರಮದ ಭಾಗವಾಗಿ ಡಾ.ಎಸ್.ಪಿ.ಪದ್ಮಪ್ರಸಾದ್ ರವರು ರಚಿಸಿದ ನಿಕಷ-2 ಎಂಬ ಪುಸ್ತಕ ಹಾಗೂ ಅವರ ಜೀವನದ ಕುರಿತಾದ ವಜ್ರಪದ್ಮ ಎಂಬ ಗ್ರಂಥವನ್ನು ಹಂಪ ನಾಗರಾಜಯ್ಯನವರ ಪತ್ನಿ ಕಮಲ ಹಂಪನಾರವರು ಬಿಡುಗಡೆ ಮಾಡಿ ಮಾತನಾಡುತ್ತಾ, 70ರ ವಯಸ್ಸಿನಲ್ಲಿಯೂ ಸಣ್ಣ ಹುಡುಗನಂತೆ ಪದ್ಮಪ್ರಸಾದ್ ತುಂಟಾಟ ಮಾಡುತ್ತಾರೆ, ಅವರನ್ನು ತಡೆಹಿಡಿಯುವುದು ಕಷ್ಟದ ಸಂಗತಿ.  ಅಂದರೆ ಅವರು ನಿತ್ಯ ಒಂದಲ್ಲಾ ಒಂದು ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿ ತಮ್ಮನ್ನು ತಾವೇ ಮೈಮರೆಯುತ್ತಾರೆ.
 
        ಅವರು ಚಿಕ್ಕವಯಸ್ಸಿನಿಂದಲೂ ನನಗೆ ಪರಿಚಯ. ಅವರು ನನಗೆ ನೇರವಾಗಿ ವಿದ್ಯಾರ್ಥಿಯಾಗದಿದ್ದರೂ ನನ್ನ ಮಾತುಗಳನ್ನು ಕೇಳಿ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಇಂದು ಸುಮಾರು 84 ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ. ಮುಂದಿನ 10 ವರ್ಷಗಳಲ್ಲಿ 100ಕ್ಕೂ ಹೆಚ್ಚು ಪುಸ್ತಕಗಳನ್ನು ರಚನೆ ಮಾಡುವುದರಲ್ಲಿ ಸಂಶಯವಿಲ್ಲ. ಅವರು ಇನ್ನೂ ಹೆಚ್ಚಿನ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರಲ್ಲದೆ  ಅವರು ಇಷ್ಟು ಎತ್ತರಕ್ಕೆ ಬೆಳೆಯಲು ತಮ್ಮ ಧರ್ಮ ಪತ್ನಿಯೂ ಕಾರಣ. ಒಬ್ಬ ಪುರುಷ ಸಾಧನೆ ಮಾಡಲು ಮಹಿಳೆಯ ಸಹಕಾರ, ಪ್ರೋತ್ಸಾಹ ಇದ್ದೇ ಇರುತ್ತದೆ ಎಂಬುದಕ್ಕೆ ಪದ್ಮಪ್ರಸಾದ್ ಹಾಗೂ ಅವರ ಧರ್ಮಪತ್ನಿಯೇ ಮಾದರಿ ಎಂದರು.
 
        ಅಭಿನಂದನಾ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ, ಡಾ.ಎಸ್.ಪಿ.ಪದ್ಮಪ್ರಸಾದ್ ಇಂದು ಏರ್ಪಡಿಸಲಾದ ಅಭಿನಂದನಾ ಸಮಾರಂಭಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಕಷ್ಟು ಮಂದಿ ಹಿರಿಯರು, ಕಲಾವಿದರು, ಸಹೋದ್ಯೋಗಿಗಳು ಸೇರಿದಂತೆ ಹಲವಾರು ಮಂದಿ ಆಗಮಿಸಿದ್ದಾರೆ. ಅವರಿಗೆ ನಾನು ಏನು ಕೊಡಬಲ್ಲೆ. ಅಂತಃಕರಣದ ಪ್ರೀತಿ ಮಾತ್ರ ತೋರಿಸಬಲ್ಲೆ. ಇಂತಹ ಸ್ನೇಹ ಸಂಬಂಧಗಳಿರುವುದೇ ನನ್ನ ಪುಣ್ಯ. ಇಂದು ಸಣ್ಣ ಸಣ್ಣ ವಿಷಯಗಳಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
       ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ಇಂದಿನ ಯುವ ಪೀಳಿಗೆ ಬೆಳೆಸಿಕೊಳ್ಳಬೇಕು. ನಮಗೆ ಯಾರು ಸಹಾಯ ಮಾಡುತ್ತಾರೆ, ಯಾರು ಪ್ರೋತ್ಸಾಹಿಸುತ್ತಾರೆ ಎಂದು ಕಾಯುವ ಬದಲಾಗಿ ನಮ್ಮ ಕಷ್ಟ ನಷ್ಟಗಳಿಗೆ ಸ್ಪಂದಿಸಿ ನಮ್ಮ ಸಂಕಷ್ಟಗಳನ್ನು ಯಾರು ಅರ್ಥೈಸಿಕೊಳ್ಳುತ್ತಾರೆ ಅಂತಹವರನ್ನು ನಾವು ಎಂದೂ ಮರೆಯಬಾರದು. ನನಗೆ ಸಾಹಿತ್ಯ, ಬರವಣಿಗೆ ಬಾರದೆ ಇದ್ದಿದ್ದರೆ ಇಂದು ನಾನು ಉನ್ನತ ಮಟ್ಟಕ್ಕೆ ಬೆಳೆಯುವುದು ಕಷ್ಟಕರವಾಗುತ್ತಿತ್ತು. ಸಾಹಿತ್ಯದ ನಂಟು ಗಳಿಸಿಕೊಂಡಿದ್ದರಿಂದಲೇ ಇಂದು ಉತ್ತಮ ಸ್ಥಾನಕ್ಕೇರಲು ಅನುಕೂಲವಾಯಿತು. ಇಂದು ನಡೆದ ಅಭಿನಂದನೆ ನಾನು ನಿರೀಕ್ಷೆ ಮಾಡಿದುದಲ್ಲ. ಆದರೆ ಇಷ್ಟರ ಮಟ್ಟಿಗೆ ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟು ಅಭಿನಂದನೆ ಸಲ್ಲಿಸಿರುವುದಕ್ಕೆ ಧನ್ಯವಾದಗಳು ಎಂದು ತಿಳಿಸಿದರು. 
   
       ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಪದ್ಮಪ್ರಸಾದ್ ಅವರ ಸಹೋದ್ಯೋಗಿಗಳು, ವಿದ್ಯಾರ್ಥಿ ಬಳಗದವರು ಮತ್ತಿತರರು ಅಭಿನಂದನೆ ಸಲ್ಲಿಸಿ ಗೌರವಿಸಿದರು.ಸಮಾರಂಭದಲ್ಲಿ ನಿರ್ಮಲಾಪದ್ಮಪ್ರಸಾದ್, ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಟಿ.ಮುರಳಿಕೃಷ್ಣಪ್ಪ,  ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಬಿ.ಜಿ.ಕೃಷ್ಣಪ್ಪ, ಗ್ರಂಥದ ಸಂಪಾದಕರಾದ ಡಾ.ಬಿ.ನಂಜುಂಡಸ್ವಾಮಿ, ಸಂಚಾಲಕರಾದ ಮರಿಬಸಪ್ಪ ಮತ್ತಿತರರು ಭಾಗವಹಿಸಿದ್ದರು. ತುಮಕೂರು ವಿವಿಯ ಪ್ರೊ.ಡಾ.ಡಿ.ವಿ.ಪರಮಶಿವಮೂರ್ತಿ ಸ್ವಾಗತಿಸಿ, ವಂದಿಸಿದರು. ಪ್ರಾರಂಭದಲ್ಲಿ ಸುಮನಾದಾಸ್ ಪ್ರಾರ್ಥನೆ ನೆರವೇರಿಸಿದರು.
       ಸರ್ಕಾರವು ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಸ್ಥಾಪನೆ ಮಾಡುವ ವಿಚಾರ ಸ್ವಾಗತಾರ್ಹ. ಹಿಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ತುಂಬಿ ತುಳುಕುತ್ತಿದ್ದವು. ಆದರೆ ಇಂದು ಸಕಾರಿ ಶಾಲೆಳು ಮಕ್ಕಳಿಗೆ ಒಣಗಿದ ಕೆರೆಗಳಂತಾಗಿವೆ. ಇಂದು ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ವಿದ್ಯಾಭ್ಯಾಸ ಕೊಡಿಸಬೇಕು ಎಂಬುದಾಗಿ ಯೋಚಿಸುತ್ತಾರೆ. ಎಲ್ಲರೂ ಆಂಗ್ಲ ಭಾಷೆಗೆ ಮಾರುಹೋಗಿದ್ದಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ಆಂಗ್ಲ ಭಾಷೆಯನ್ನು ಅಭ್ಯಸಿಸುವಂತೆ ಮಾಡಿದರೆ ಸರ್ಕಾರಿ ಶಾಲೆಗಳು ಮುಚ್ಚುವುದು ನಿಲ್ಲುತ್ತದೆ.
     
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here