ಮಾನಸಿಕ ಅಸ್ವಸ್ಥರ ಮತ್ತು ಪೋಷಕರ ಆರೋಗ್ಯ ಜಾಗೃತಿ

ಹೊನ್ನಾಳಿ:

     ಮಾನಸಿಕ ಅಸ್ವಸ್ಥರನ್ನು ಸಮಾಜ ಕರುಣೆಯಿಂದ ನೋಡಿಕೊಳ್ಳಬೇಕು ಎಂದು ದಾವಣಗೆರೆಯ ಮನೋವೈದ್ಯ ಡಾ. ಗಂಗಮಸಿದ್ಧಾರೆಡ್ಡಿ ಹೇಳಿದರು.

       ಇಲ್ಲಿನ ಹಿರೇಕಲ್ಮಠದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ, ಜಿಲ್ಲಾ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಿ ಅಸೋಸಿಯೇಷನ್ ಆಪ್ ಪೀಪಲ್ ವಿತ್ ಡಿಸೇಬಿಲಿಟಿ(ಎಪಿಪಿ) ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡ ಮಾನಸಿಕ ಅಸ್ವಸ್ಥರ ಮತ್ತು ಪೋಷಕರ ಆರೋಗ್ಯ ಜಾಗೃತಿ ಹಾಗೂ ಸರಕಾರಿ ಸೌಲಭ್ಯಗಳ ಕುರಿತ 3 ದಿನಗಳ ಶಿಬಿರದಲ್ಲಿ ಅವರು ಮಾತನಾಡಿದರು.
ಆರಂಭದಲ್ಲೇ ಕಾಯಿಲೆ ಗುರುತಿಸಿದರೆ ಮಾನಸಿಕ ರೋಗಿಗಳನ್ನು ಗುಣಪಡಿಸಬಹುದು. ಸಮಾಜದಲ್ಲಿ ಎಲ್ಲರಂತೆ ಬಾಳ್ವೆ ನಡೆಸಲು ಮಾನಸಿಕ ಅಸ್ವಸ್ಥರಿಗೂ ಹಕ್ಕಿದೆ. ಆದ್ದರಿಂದ, ಎಲ್ಲರೂ ಅವರಿಗೆ ಬದುಕುವ ಅವಕಾಶ ನೀಡಬೇಕು, ಸಂಯಮದಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.

     ಎಪಿಪಿ ಸಂಸ್ಥೆಯವರು ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಮಾನಸಿಕ ಅಸ್ವಸ್ಥರ ಹಾಗೂ ಪೋಷಕರ ಶಿಬಿರವನ್ನು ಹಮ್ಮಿಕೊಂಡಿದ್ದು, ತಾಲೂಕು ಆಸ್ಪತ್ರೆಯಲ್ಲಿ ಪ್ರತಿ ತಿಂಗಳ 2ನೇ ಮಂಗಳವಾರ ಬುದ್ಧಿಮಾಂದ್ಯ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಏರ್ಪಡಿಸಲಾಗುತ್ತದೆ. ಕಳೆದ ವಾರ ಹೊನ್ನಾಳಿಯಲ್ಲಿ 83 ಜನರ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ಇಂತಹ ರೋಗಿಗಳ ದಾಖಲೆ ನೀಡಿ ಗುರುತಿನ ಚೀಟಿ ಪಡೆಯುವುದರೊಂದಿಗೆ ಹಲವಾರು ಸರಕಾರಿ ಸೌಲಭ್ಯಗಳನ್ನು ಪಡೆಯಬಹುದು ಎಂದು ವಿವರಿಸಿದರು.

         ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ರಾಜಕುಮಾರ್ ಮಾತನಾಡಿ, ತಮ್ಮ ಸ್ವಚ್ಛತೆ, ಆರೋಗ್ಯ, ಆಹಾರ ಇತ್ಯಾದಿಗಳ ಬಗ್ಗೆ ಬುದ್ಧಿಮಾಂದ್ಯರಿಗೆ ಅರಿವಿರದ ಕಾರಣ ಪೋಷಕರು ಅವರ ಸೇವೆ ಮಾಡಬೇಕು. ಇದರಿಂದ ಮಾನಸಿಕ ಅಸ್ವಸ್ಥರ ಕಾಯಿಲೆಯ ತೀವ್ರತೆಯನ್ನು ಕಡಿಮೆ ಮಾಡಬಹುದು. ಈ ಬಗ್ಗೆ ಅರಿವು ಮೂಡಿಸುವುದೇ ಈ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಪಿಡಿ ಸಂಸ್ಥೆಯ ಹನುಮಂತರಾಯಪ್ಪ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ನಡೆಸುತ್ತಿದ್ದ ಇಂತಹ ಶಿಬಿರವನ್ನು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಇದೀಗ ನಡೆಸುತ್ತಿದ್ದು, 2 ತಿಂಗಳಿಗೊಮ್ಮೆ ಮೂರು ದಿನಗಳ ತರಬೇತಿ ಶಿಬಿರ ನಡೆಸಿ ಬುದ್ಧಿಮಾಂದ್ಯ ಮಕ್ಕಳ ಪೋಷಕರು ತಮ್ಮ ಮಕ್ಕಳ ಆರೈಕೆಯ ವೇಳೆ ಅನುಭವಿಸುವ ತೊಂದರೆ, ಔಷಧೋಪಚಾರಗಳ ಬಗ್ಗೆ ಅಭಿಪ್ರಾಯಗಳನ್ನು ಪಡೆದುಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

       ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಚಂದ್ರಪ್ಪ ಶಿಬಿರ ಉದ್ಘಾಟಿಸಿದರು. ಎಸಿಡಿಪಿಒ ರೇಣುಕಾರೆಡ್ಡಿ, ಮನಃಶಾಸ್ತ್ರಜ್ಞ ವಿಜಯಕುಮಾರ್, ಹೊನ್ನಾಳಿ ಹಿರೇಕಲ್ಮಠದ ವ್ಯವಸ್ಥಾಪಕ ಎಂಪಿಎಂ ಚನ್ನಬಸಯ್ಯ, ಎಪಿಡಿ ಕಾರ್ಯ ಸಂಯೋಜಕ ಸಂತೋಷ್, ಸಂಸ್ಥೆಯ ಸಿಬ್ಬಂದಿ ರಾಜಪ್ಪ, ಶ್ವೇತ, ರಾಘವೇಂದ್ರ, ನರೇಂದ್ರ, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಹೊನ್ನಾಳಿಯ 40 ಹಾಗೂ ಇತರೆಡೆಗಳಿಂದ ಆಗಮಿಸಿದ ಸುಮಾರು 80ಕ್ಕೂ ಹೆಚ್ಚು ಬುದ್ಧಿಮಾಂದ್ಯರು ಹಾಗೂ ಪೋಷಕರು ಶಿಬಿರದಲ್ಲಿ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap