ವಿದ್ಯೆ ಮನುಷ್ಯನಿಗೆ ಸ್ವಾಭಿಮಾನದ ಬದುಕನ್ನು ರೂಪಿಸುತ್ತದೆ

ಚಿಕ್ಕನಾಯಕನಹಳ್ಳಿ

         ವಿದ್ಯೆ ಮನುಷ್ಯನಿಗೆ ಸ್ವಾಭಿಮಾನದ ಬದುಕನ್ನು ರೂಪಿಸುತ್ತದೆ, ತನ್ನ ಕಾಲ ಮೇಲೆ ತಾವೇ ನಿಲ್ಲುವಂತೆ ಮಾಡುತ್ತದೆ, ಮಕ್ಕಳು ಶ್ರಮ ಹಾಕಿದರೆ ಮಾತ್ರ ವಿದ್ಯೆ ಲಭಿಸುತ್ತದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

       ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಕೃಷಿ ಪತ್ತಿನ ಸಹಕರ ಸಂಘದ ಸದಸ್ಯರ ಮಕ್ಕಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳು ಒಂದಾಗಿದ್ದರೆ ಮಾತ್ರ ಶಕ್ತಿ ಬರುತ್ತದೆ. ರಾಜ್ಯದಲ್ಲಿ ಹಾಲನ್ನು ಸಹಕಾರ ಸಂಘಗಳಿಂದ ತೆಗೆದುಕೊಂಡು ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಾರೆ. ಆದರೆ ಗುಜರಾತ್ ರಾಜ್ಯದ ಹಾಲು ಉತ್ಪಾದಕರಿಂದ ಕೊಂಡ ಗುಜರಾತ್ ಅಮುಲ್ ಡೈರಿ ಹಾಲನ್ನು ಪ್ಯಾಕೆಟ್ ಮಾಡದೆ ಅಳತೆಯಲ್ಲಿ ನೀಡುತ್ತಿರುವುದರಿಂದ ಖರ್ಚು ಕಡಿಮೆಯಾಗಿ ಹೆಚ್ಚಿನ ಲಾಭ ಮಾಡುತ್ತಿದ್ದಾರೆ.

      ರಾಜ್ಯದಲ್ಲಿ ಇನ್‍ಪುಟ್ ಕಾರ್ಯಕ್ರಮದ ಅಡಿಯಲ್ಲಿ ರಸಗೊಬ್ಬರ, ಕೀಟನಾಶಕ ಔಷಧಿ ಹಾಗೂ ವಿದ್ಯುತ್ ಉಚಿತವಾಗಿ ನೀಡುತ್ತಿದ್ದರು ಈ ಎಲ್ಲವನ್ನು ತೆಗೆದು ಹಾಕಿ ಕೇವಲ ಸಾಲ ನೀಡುತ್ತಿದ್ದಾರೆ. ಇದರಿಂದ ನಿಜವಾದ ಅರ್ಹ ರೈತರಿಗೆ ಸಾಲ ಸಿಗುತ್ತಿಲ್ಲ ಎಂದ ಅವರು, ಸಹಕಾರ ಸಂಘಗಳು ಬಂದ ಲಾಭವನ್ನು ಮಕ್ಕಳ ಶಿಕ್ಷಣಕ್ಕೆ ನೀಡಿ ಎಂದು ಸಲಹೆ ನೀಡಿದರು.

       ಅಧಿಕಾರ ಯಾರಿಗೂ ಶಾಶ್ವತವಲ್ಲ. ಬಂದಂತಹ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ರಾಜಕೀಯಕ್ಕೆ ಮೊದಲ ಮೆಟ್ಟಿಲು ಸಹಕಾರ ಕ್ಷೇತ್ರ, ಹಿಂದೆ ಸಹಕಾರ ಕ್ಷೇತ್ರದಿಂದ ಬಂದವರೆ ಶಾಸಕರಾಗುತ್ತಿದ್ದರು. ಈಗ ರಿಯಲ್ ಎಸ್ಟೇಟ್ ಮೈನ್ಸ್ ದಂಧೆಯಲ್ಲಿ ತೊಡಗಿಸಿಕೊಂಡವರು ಹಣ ಖರ್ಚು ಮಾಡಿ ಶಾಸಕರಾಗುತ್ತಿದ್ದಾರೆ. ಇವರಿಂದ ಏನು ನಿರೀಕ್ಷಿಸಬಹುದು? ಇದು ಪ್ರತಿಭಾ ಪುರಸ್ಕಾರವಲ್ಲ ವಿದ್ಯಾರ್ಥಿಗಳು ಮಾಡಿರುವ ಶ್ರಮಕ್ಕೆ ಪುರಸ್ಕಾರ, ಅಧಿಕಾರವಿದ್ದಾಗ ಜನರ ಸೇವೆ ಮಾಡಿದರೆ ಗೌರವ ನೀಡುತ್ತಾರೆ ಎಂದು ಹೇಳಿದರು.

       ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಮಾತನಾಡಿ, ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್ ವತಿಯಿಂದ ತಾಲ್ಲೂಕಿನ ವಿವಿಧ ಸಹಕಾರಿ ಸಂಘಗಳ ರೈತರ ಪ್ರತಿಭಾವಂತ 83 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ಪಡೆದ ಪ್ರತಿಭಾವಂತ ಮಕ್ಕಳ ಅನುಕೂಲಕ್ಕೆ ಪ್ರೋತ್ಸಾಹ ಧನ ನೀಡಲು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ 1.73 ಲಕ್ಷ ರೂಪಾಯಿ ಹಣ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತಿದೆ ಎಂದರು.

      ಕಾರ್ಯಕ್ರಮದಲ್ಲಿ ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಶಂಕರಲಿಂಗಯ್ಯ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ನಾಗರಾಜ್, ಮೇಲ್ವಿಚಾರಕ ರಂಗಸ್ವಾಮಿ, ಮ್ಯಾನೇಜರ್ ಕುಮಾರಸ್ವಾಮಿ, ರಘು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap