ಕಾಂಗ್ರೆಸ್ ಮುಖಂಡರಿಂದ ಇಲ್ಲಸಲ್ಲದ ಆರೋಪ

0
6

ಹರಪನಹಳ್ಳಿ:

       ಪಟ್ಟಣದ 10ನೇ ವಾರ್ಡ್ ವ್ಯಾಪ್ತಿಯ ಗೋಕರ್ಣೇಶ್ವರ ದೇವಸ್ಥಾನ, ಪ್ರಾರ್ಥನಾ ಮಂದಿರ ಹಾಗೂ ಕೆಲ ಮನೆಗಳ ಡೋರ್ ನಂಬರ್ ಪುರಸಭೆ ರದ್ದುಪಡಿಸಿದೆ ಎಂಬ ಕಾಂಗ್ರೆಸ್ ಮುಖಂಡರ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಅಧ್ಯಕ್ಷ ಎಚ್.ಕೆ. ಹಾಲೇಶ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆ ಡೋರ್ ನಂ.ರದ್ದು ಮಾಡಿಲ್ಲ.

       ಪುರಸಭೆಯಲ್ಲಿ ಬಿಜೆಪಿ ಆಡಳಿತವಿರುವ ಕಾರಣಕ್ಕೆ ಕಾಂಗ್ರೆಸ್ ಮುಖಂಡರು ಇಲ್ಲಸಲ್ಲದ ಆರೋಪಕ್ಕೆ ಮುಂದಾಗುತ್ತಿದ್ದಾರೆ. ಈ ವಿಷಯದಲ್ಲಿ ತಾರತಮ್ಯ ನೀತಿ ಅನುಸರಿಸಿದೇ ಪುರಸಭೆ ಎಲ್ಲ ಮೂಲ ಸೌಲರ್ಯ ಒದಗಿಸಿದೆ ಎಂದರು.

       ಶಾಸಕ ಕರುಣಾಕರರೆಡ್ಡಿ ಅವರು ಕಂದಾಯ ಸಚಿವರಿದ್ದಾಗ ಅಲ್ಪಸಂಖ್ಯಾರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡಗಡೆ ಮಾಡಿದ್ದಾರೆ. ಈಗ ಅಲ್ಪಸಂಖ್ಯಾತ ನಿಗಮಕ್ಕೆ 2 ಕೋಟಿ ಅನುದಾನಕ್ಕೆ ಶಿಪಾರಸು ಮಾಡಿದ ಫಲವಾಗಿ 1.50 ಕೋಟಿ ಅನುದಾನ ಬಿಡುಗಡೆಯಾಗಿದೆ. ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಶಾಸಕರು ಕಂಕಣಬದ್ಧರಾಗಿದ್ದಾರೆ ಎಂದರು.

      ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಲಕ್ಷ್ಮಣ ಮಾತನಾಡಿ, `ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ನಿರ್ಲಕ್ಷ ತೋರುತ್ತಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಸುಳ್ಳು ಆರೋಪಗಳನ್ನು ಮಾಡದೇ ಆಧಾರ ಸಹಿತ ಹೇಳಿಕೆ’ ನೀಡಲಿ ಎಂದರು.

        `ತಾಲ್ಲೂಕಿನಲ್ಲಿ ಬರಗಾಲ ಆವರಿಸಿ ಕುಡಿವ ನೀರಿಗಾಗಿ ಜನರು ಪರಿತಪ್ಪಿಸುತ್ತಿದ್ದಾರೆ. ತಾಲ್ಲೂಕಿನ ಗಮನ ಹರಿಸಬೇಕಿದ್ದ ಶಾಸಕರು ಬಳ್ಳಾರಿ ಚುನಾವಣೆಯಲ್ಲಿ ಸಕ್ರಿಯರಾಗಿದ್ದರು ಎಂಬುದು ಸುಳ್ಳು ಆರೋಪ. ಪಕ್ಷದ ಆದೇಶದಂತೆ ಕರುಣಾಕರ ರೆಡ್ಡಿ ಅವರು ಜಮಖಂಡಿ ಚುನಾವಣೆ ಜವಾಬ್ದಾರಿ ಹೊತ್ತಿಕೊಂಡಿದ್ದರು. ಸುಖಾಸುಮ್ಮನೆ ಶಾಸಕರ ಮೇಲೆ ಆರೋಪ ಮಾಡುವುದು ಸಲ್ಲ ಎಂದರು.

          ತಾಲ್ಲೂಕು ಉಪಾಧ್ಯಕ್ಷ ಕಣಿವಿಹಳ್ಳಿ ಮಂಜುನಾಥ ಮಾತನಾಡಿ `ಮಠಾಧೀಶರ, ಸರ್ವ ಪಕ್ಷಗಳ, ವಿವಿಧ ಸಂಘ-ಸಂಸ್ಥೆಗಳ ಹೋರಾಟದ ಫಲವಾಗಿ `ಹರಪನಹಳ್ಳಿಗೆ 371ಜೆ ಸೌಲಭ್ಯ ಸಿಗುತ್ತಿದೆ. ಕೇವಲ ಮಾಜಿ ಶಾಸಕರಿಂದಲೇ ಎಲ್ಲವೂ ದೊರಕಿದೆ ಎಂದು ಬಿಂಬಿಸುವುದು ಸರಿಯಲ್ಲ. ಶಾಸಕರು, ಸಂಸದರು ಸಹ ಹೋರಾಟದಲ್ಲಿ ಭಾಗಿಯಾಗಿ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಕೊಡುಗೆ ನೀಡಿದ್ದಾರೆ. ಉಪವಿಭಾಗ ಕಚೇರಿ ಉಳಿಸಲು ಶಾಸಕರು ಸಿಎಂ ಹಾಗೂ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡಿದ್ದಾರೆ’ ಎಂದರು.

          ಈ ಸಂದರ್ಭದಲ್ಲಿ ಮುಖಂಡರಾದ ತಾಲ್ಲೂಕು ಉಪಾಧ್ಯಕ್ಷ ಕಣಿವಿಹಳ್ಳಿ ಮಂಜುನಾಥ, ಸಣ್ಣ ಹಾಲಪ್ಪ, ಬಿ.ರೇವಣ್ಣ, ಲೋಕೇಶ್, ಡಾ.ಮಲ್ಲಪ್ಪ ಅಧಿಕಾರ, ಕೃಷ್ಣ, ಹಾಲೇಶ, ಯುಪಿ ನಾಗರಾಜ, ಬಿ.ಮೆಹಬೂಬ್ ಸಾಬ್, ಬೂದಿ ನವೀನ್, ಖಾಸಿಂಸಾಬ್, ಸಿದ್ದಣ್ಣ, ಕರಿಗೌಡ, ಮಂಜುನಾಥ್, ಮಂಜಾಚಾರಿ, ರಾಘವೇಂದ್ರ ಶೆಟ್ಟಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here