ಕಾಗಿನೆಲೆ ಸ್ವಾಮೀಜಿ ಬಗ್ಗೆ ಅವಹೇಳನ : ಕುರುಬ ಸಮಾಜ ಪ್ರತಿಭಟನೆ.

ಹೊಸಪೇಟೆ :

     ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿರುವ ದುಷ್ಕರ್ಮಿಯನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಕುರುಬ ಸಮಾಜದವರು ಹಾಗು ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರದ ರೋಟರಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

      ‘ಬಂಧಿಸಿ, ಬಂಧಿಸಿ ‘‘ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ದುಷ್ಕರ್ಮಿಗಳನ್ನು ಬಂಧಿಸಿ’ ಬೇಕೇ ಬೇಕು ನ್ಯಾಯ ಬೇಕು ಎಂದು ಕೂಗುತ್ತಾ ನಗರದ ರೋಟರಿ ವೃತ್ತದಲ್ಲಿ ಟೈರ್‍ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

      ಈ ವೇಳೆ ವಕೀಲ ಎರ್ರಿಸ್ವಾಮಿ ಮಾತನಾಡಿ, ರಾಜ್ಯದ ಪ್ರಭಾವಿ ಮಠಗಳಲ್ಲಿ ಒಂದಾದ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು ಉತ್ತರ ಕರ್ನಾಟಕದ ಕಾಗಿನೆಲೆ, ಹಾಗು ಹರಿಹರದ ಬೆಳ್ಳೂಡಿ ಶಾಖಾಮಠದಲ್ಲಿ ಎಲ್ಲಾ ಜಾತಿ ಜನಾಂಗದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ, ಊಟ ಮತ್ತು ವಸತಿಯನ್ನು ನೀಡುತ್ತಾ ಎಲ್ಲರ ಅಭ್ಯುದಯಕ್ಕೆ ಶ್ರಮಿಸುತ್ತಿದ್ದಾರೆ.

      ಇಂಥ ಸ್ವಾಮೀಜಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದುರ್ಗರಾಜ ಗೌಡ ಎಂಬ ಪುಡಾರಿಯೊಬ್ಬ ‘ಬಕೆಟ್ ಸ್ವಾಮಿ’ ಎಂದು ನಿಂದಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದನ್ನು ಕುರುಬ ಸಮಾಜ ಎಂದಿಗೂ ಸಹಿಸುವುದಿಲ್ಲ. ಕೂಡಲೇ ಪೊಲೀಸ್ ಇಲಾಖೆ 24 ಗಂಟೆಯೊಳಗೆ ಅವನನ್ನು ಬಂಧಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

       ವಕೀಲ ಎಚ್.ಮಹೇಶ ಮಾತನಾಡಿ, ಕುರುಬ ಸಮಾಜ ಯಾವತ್ತು ಶಾಂತಿ, ಸೌಹಾರ್ಧತೆಯನ್ನು ಬಯಸುವ ಸಮಾಜ. ಆದರೆ ಸಮಾಜದ ಬಗ್ಗೆ ಯಾರಾದರೂ ನಿಂದಿಸುವ, ಅವಹೇಳನಕಾರಿ ಹೇಳಿಕೆ ನೀಡುವವರಿಗೆ ತಕ್ಕ ಪಾಠ ಕಲಿಸದೇ ಬಿಡುವವರಲ್ಲ. ಹೀಗಾಗಿ ಸ್ವಾಮೀಜಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ದುರ್ಗರಾಜಗೌಡ ಎಂಬುವವನು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ತಕ್ಷಣ ಪೊಲೀಸ್ ಇಲಾಖೆ ಇವನ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

        ಪ್ರತಿಭಟನೆಯಲ್ಲಿ ಅಹಿಂದ ಯುವ ವೇದಿಕೆ, ಬಳ್ಳಾರಿ ಜಿಲ್ಲಾ ಕುರುಬರ ಸಂಘ, ತಾಲೂಕು ಯುವ ಕುರುಬರ ಸಂಘ, ಕ್ರಾಂತಿವೇರ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಪದಾಧಿಕಾರಿಗಳಾದ ದಲ್ಲಾಲಿ ಕುಬೇರ, ಪ್ರಕಾಶ್ ಕಾಕುಬಾಳು, ಎಲ್.ಎಸ್.ಆನಂದ, ಕೆ.ರವಿಕುಮಾರ, ಬಂಧಿ ಭರಮಪ್ಪ, ಗಂಟೆ ಸೋಮಶೇಖರ, ಬಿಸಾಟಿ ಸತ್ಯನಾರಾಯಣ, ಕ್ಯಾರ್ ವೆಂಕಟೇಶ, ಅಯ್ಯಾಳಿ ನವೀನಕುಮಾರ, ರಮೇಶಗೌಡ, ಡಿ.ಹನುಮೇಶ, ಪ್ರವೀಣಕುಮಾರ್, ರಾಮು, ಪರಶುರಾಮ, ಭರತ, ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಸಣ್ಣ ಮಾರೆಪ್ಪ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap