ಫಸಲ್‍ಭಿಮಾ ಯೋಜನೆಯ ಕುರಿತಾದ ವಿಚಾರ ಸಂಕಿರಣ ಉದ್ಘಾಟನೆ

ಚಿಕ್ಕನಾಯಕನಹಳ್ಳಿ

       ರೈತರು ಬೆಳೆವಿಮೆಗಾಗಿ ಕಂಪನಿಗೆ ಕಟ್ಟಿರುವ ಹಣವನ್ನು ಕೇಂದ್ರ ಸರ್ಕಾರವೇ ಕಂತನ್ನು ತುಂಬುವ ಮೂಲಕ ಬೆಳೆನಷ್ಟದ ಸಂಕಷ್ಟಕ್ಕೆ ಮೋದಿ ಸರ್ಕಾರ ಶಾಶ್ವತಪರಿಹಾರ ನೀಡಲು ಮುಂದಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

       ಪಟ್ಟಣದ ಸ್ತ್ರೀಶಕ್ತಿಭವನದಲ್ಲಿ ತಾಲೂಕು ಬೆಳೆವಿಮೆ ಪಾಲಿಸಿದಾರರ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ಫಸಲ್‍ಭಿಮಾ ಯೋಜನೆಯ ಕುರಿತಾಗಿ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದ ನರೇಂದ್ರಮೋದಿ ಸರ್ಕಾರ ರೈತಪರವಾದ ಉತ್ತಮಕಾರ್ಯಗಳನ್ನು ಅನುಷ್ಠಾನಕ್ಕೆ ತರುತ್ತಿದೆ.

        ಅದರಲ್ಲಿ ನಮ್ಮ ಬೇಡಿಕೆಯನ್ನು ಮೀರಿ ಕೇಂದ್ರ ಸರ್ಕಾರ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲಯನ್ನು ಕ್ವಿಂಟಾಲ್‍ಗೆ ರೂ.9650 ನೀಡಿರುವುದು ತೆಂಗು ಬೆಳೆಗಾರರಿಗೆ ಆಶಾದಾಯಕ ಸಂಗತಿಯಾಗಿದೆ. ಜಿಎಸ್‍ಟಿಯಡಿ ಕೊಬ್ಬರಿ ಮಾರಾಟದಿಂದ ಸಾಕಷ್ಟು ಆದಾಯ ಸರ್ಕಾರಕ್ಕೆ ಹರಿದುಬರುತ್ತಿದ್ದು ಇದರ ಆದಾಯವನ್ನು ರೈತರಿಗೆ ವರ್ಗಾಯಿಸುತ್ತಿದೆ. ಬೆಳೆವಿಮೆಯಲ್ಲಿ ಈ ಹಿಂದೆ ರೈತರಿಗೆ ವಿಮೆಹಣ ಬರುವುದಕ್ಕೆ ನಾನಾ ರೀತಿಯ ನಿಬಂಧನೆಗಳಿದ್ದವು.

         ನಮ್ಮ ತಾಲ್ಲೂಕಿನಲ್ಲಿ ಬೆಳೆವಿಮೆಗೆ ರಾಗಿ ಮಾತ್ರ ಸೇರ್ಪಡೆಯಾಗಿತ್ತು, ಆದರೆ ಈಗ ಇದರ ಜೊತೆಯಲ್ಲಿ ಹೆಸರು ಬೆಳೆಯೂ ಸೇರ್ಪಡೆಯಾಗಿದೆ. ಕಳೆದ ಸಾಲಿನಲ್ಲಿ ನಮ್ಮ ತಾಲ್ಲೂಕಿನಲ್ಲಿ 5000 ಮಂದಿ ರೈತರು ಬೆಳೆವಿಮೆಗಾಗಿ ಬ್ಯಾಂಕಿನ ಮೂಲಕ ಹಣಕಟ್ಟಿ ಅರ್ಜಿ ಸಲ್ಲಿಸಿದ್ದರು. ಆದರೆ ಬ್ಯಾಂಕ್‍ನವರು ಈ ಹಣವನ್ನು ವಿಮಾಕಂಪನಿಗೆ ಸರಿಯಾದ ಸಮಯಕ್ಕೆ ಜಮಾ ಮಾಡದ ಕಾರಣ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದ್ದರು. ತುಮಕೂರಿನಲ್ಲಿ ಇಂತಹ 9 ಸಾವಿರ ಅರ್ಜಿ ತಿರಸ್ಕತವಾಗಿತ್ತು.

        ಈಬಗ್ಗೆ ಶಾಸನಸಭೆಯಲ್ಲಿ ನಾನು ಬಲವಾಗಿ ಪ್ರತಿಪಾದಿಸಿದ ನಂತರ ಬ್ಯಾಂಕ್‍ನವರೇ ಎಲ್ಲರಿಗೂ ವಿಮೆಹಣ ನೀಡಬೇಕಾಗಿ ಬಂದು ಇದು ಈಗ ಕಾರ್ಯರೂಪಕ್ಕೆ ಬರುತ್ತಿದೆ ಎಂದರು.ಇನ್ನು ಮುಂದೆ ರೈತರು ಕೇವಲ ಪಹಣಿ ಮಾತ್ರ ನೀಡಬೇಕಿದ್ದು ಇನ್ನಾವುದೆ ದಾಖಲೆಯನ್ನು ಬ್ಯಾಂಕ್‍ನವರು ಕೇಳುವಹಾಗಿಲ್ಲದಂತೆ ಮಾಡಲಾಗಿದೆ ಎಂದ ಅವರು, ತಾಲ್ಲೂಕು ಮರಳುಗಾಡಾಗುವ ಹಂತಕ್ಕೆ ಬಂದಿದೆ. ಹರಿಯುವ ನೀರನ್ನು ಹಿಡಿದಿಟ್ಟುಕೊಳ್ಳುವ ಯಾವುದೇ ಕಾರ್ಯ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಕೊಳವೆಬಾವಿಗಳ ಅವಲಂಬನೆಯಿಂದ ಅಂತರ್ಜಲವನ್ನು ತಳಕಾಣಿಸಿದ್ದೇವೆ. ಇನ್ನಾದರೂ ರೈತರು ಬಿದ್ದ ಮಳೆ ನೀರನ್ನು ಹರಿಯಬಿಡದೆ ತಡೆಯೊಡ್ಡುವುದು, ಕೃಷಿಯಲ್ಲಿ ಹನಿ ನೀರಾವರಿಗೆ ಆದ್ಯತೆ ನೀಡುವುದು ಹಾಗೂ ಹೆಚ್ಚು ನೀರು ಬಯಸುವ ಬೆಳೆಯನ್ನು ಹಾಕದಿರುವ ಬಗ್ಗೆ ಎಚ್ಚರವಹಿಸಬೇಕಿದೆ. ಕೇಂದ್ರ ಸರ್ಕಾರ ಕೃಷಿ ಸಿಂಚನ ಯೋಜನೆಯಡಿ ಕೃಷಿಹೊಂಢ ಮಡಿಕೊಳ್ಳುವ ಎಲ್ಲರಿಗೂ ಸಹಾಯಧನ ನೀಡುತ್ತಿದ್ದು ಇದಕ್ಕೆ ಹಣದಕೊರತಯೇ ಇಲ್ಲದಂತೆ ಮಾಡಿದ್ದಾರೆ ಎಂದರು.

         ಕೃಷಿ ವಿಮಾ ಕಂಪನಿಯ ನಾಗರತ್ನಮ್ಮ ಮಾತನಾಡಿ, ಕೃಷಿವಿಮೆಯಲ್ಲಿ ರೈತರಿಗೆ ಸಿಗುವ ಸೌಲಭ್ಯ ಹಾಗೂ ಅವರು ಅನುಸರಿಸಬೇಕಾದ ನಿಯಮ ಮತ್ತು ಹೊಣೆಗಾರಿಕೆಯ ಬಗ್ಗೆ ಮಾತನಾಡಿದರು. ಬೆಳೆವಿಮೆ ಪಾಲಿಸಿದಾರರ ವೇದಿಕೆ ಅಧ್ಯಕ್ಷ ಕುಮಾರಯ್ಯ ಮಾತನಾಡಿ, ಬೆಳೆವಿಮೆಯಲ್ಲಿ ಈ ತಾಲ್ಲೂಕಿನ ರೈತರ ಕೃಷಿ ಬದುಕಿನ ಆಧಾರದಮೇಲೆ ವಿಮೆಗಳನ್ನು ಜಾರಿಮಾಡಬೇಕಿದೆ ಎಂದು ಒತ್ತಾಯಿಸಿದರು.

        ಕಾರ್ಯಕ್ರಮದಲ್ಲಿ ಬೆಳೆವಿಮೆ ಪಾಲಿಸಿದಾರರ ವೇದಿಕೆ ಕಾರ್ಯದರ್ಶಿ ಸಿ.ಎಚ್.ಚಿದಾನಂದ ಫಸಲ್‍ಭೀಮಾ ಯೋಜನೆಯಲ್ಲಿ ಬೆಳೆವಿಮೆ ಪಾಲಿಸಿದಾರರಿಗಾಗುತ್ತಿದ್ದ ಕಿರುಕುಳ ಹಾಗೂ ವೇದಿಕೆಯ ದ್ಯೇಯೋದ್ದೇಶದ ಕುರಿತು ಮಾತನಾಡಿದರು. ಸಹಯಕ ಕೃಷಿ ನಿರ್ದೇಶಕ ಹನುಮಂತರಾಜುರವರು ಬೆಳೆವಿಮೆ ಮಾಹಿತಿ ನೀಡಿದರು. ವಕೀಲರಾದ ಎನ್.ಎನ್.ಶ್ರೀಧರ್, ಶಂಕರಲಿಂಗಪ್ಪ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಾರ್ಮೋನಿಯಂ ಗಂಗಾಧರ್ ರೈತಗೀತೆ ಹಾಡುವ ಮೂಲಕ ಪ್ರಾರ್ಥಿಸಿದರು. ಹನುಮಂತರಾಯಪ್ಪ ನಿರೂಪಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap